ದಾವಣಗೆರೆ: ನಾವು ಐರಣಿ ಮಠದ ಸ್ವಾಮೀಜಿಯ ಶಿಷ್ಯರೆಂದು ಹೇಳಿಕೊಂಡು ಬಾಕ್ಸ್ವೊಂದನ್ನು ನೀಡಿ ವಂಚಿಸುತ್ತಿದ್ದ ಐವರು ಆರೋಪಿಗಳನ್ನು ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಇಲಿಯಾಜ್, ಕಿರಣ್, ದಾದಾಪೀರ್, ಮಂಜುನಾಥ್, ಮಹಾಂತೇಶ್ ಬಂಧಿತರು. ಇವರಿಂದ 2,80,000 ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ ಮೂರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಲ್ ಗ್ರಾಮದ ನಿವಾಸಿ ಚಮನ್ ಸಾಬ್ ಎಂಬವರಿಗೆ 2023 ಅ.21ರಂದು ಆರೋಪಿಗಳು, ನಾವು ಐರಣಿ ಮಠದ ಸ್ವಾಮೀಜಿಯವರ ಶಿಷ್ಯರು. ನಮ್ಮ ಬಳಿ 100 ರೂಪಾಯಿ ಮುಖಬೆಲೆಯ ನೋಟುಗಳಿವೆ. ನೀವು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡಿದರೆ ನಾವು ನಿಮಗೆ ಹೆಚ್ಚಿನ ಹಣ ನೀಡುತ್ತೇವೆಂದು ನಂಬಿಸಿ ಬಾಕ್ಸ್ ನೀಡಿ ಮೋಸ ಮಾಡಿದ್ದರು. ಈ ಬಗ್ಗೆ ಅವರು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಕೈಗೊಂಡ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ. ಆರೋಪಿ ಕಿರಣ್ ಮೇಲೆ ರಾಮನಗರ ಜಿಲ್ಲೆಯ ಕುದೂರು ಪೊಲೀಸ್ ಠಾಣೆಯಲ್ಲಿ 2019ರಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: 'ಡಿಜಿಟಲ್ ಅರೆಸ್ಟ್' ಮಾಡಿ ₹2.21 ಕೋಟಿ ವಂಚನೆ, ಐವರ ಬಂಧನ: ಏನಿದು ಕಳ್ಳರ ಹೊಸ ಕಸುಬು? - Digital Arrest Fraud