ಹಾಸನ: ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಜಾಮೀನು ಪಡೆದು ನಿರಾಳರಾಗಿರುವ ಹೆಚ್.ಡಿ. ರೇವಣ್ಣ 20 ದಿನಗಳ ನಂತರ ಇಂದು ತವರಿಗೆ ಆಗಮಿಸಿದ್ದರು. ಅವರಿಗೆ ಹಾಸನ ಜಿಲ್ಲೆಯ ಗಡಿ ಭಾಗದ ಕಿರಿಸಾವೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಕೋರಿದರು. ಹೂವಿನ ಹಾರ ಹಾಕಿ, ಜಯ ಘೋಷ ಕೂಗಿದರು. ಕಾರ್ಯಕರ್ತರನ್ನು ನಿಯಂತ್ರಿಸಲು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಈ ಹಿಂದೆ ನಡೆದಿದ್ದೇನು?: ಮಹಿಳೆಯ ಅಪಹರಣ ಪ್ರಕರಣದಲ್ಲಿ ಶಾಸಕ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಣೆಯಾದ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಮೇ.4 ರಂದು ಅವರನ್ನು ಬಂಧಿಸಿದ್ದರು. ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿದ್ದ ರೇವಣ್ಣರನ್ನು ಎಸ್ಐಟಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದರು. ಹೆಚ್.ಡಿ. ರೇವಣ್ಣ ಪುತ್ರ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮಹಿಳೆಯನ್ನು ಅಪಹರಿಸಿದ ಆರೋಪ ರೇವಣ್ಣ ಅವರ ಮೇಲಿದ್ದು, ಸಂತ್ರಸ್ತೆಯ ಪುತ್ರ ನೀಡಿದ್ದ ದೂರಿನ ಅನ್ವಯ ಮೇ 2ರಂದು ಮೈಸೂರು ಜಿಲ್ಲೆಯ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇತ್ತೀಚೆಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.