ಬೆಂಗಳೂರು: ಮಾಲ್, ಕ್ಲಬ್ಗಳಿಗೆ ಪ್ರವೇಶ ನಿರ್ಬಂಧಿಸಿದ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಗೈಡ್ಲೈನ್ಸ್ ತರಬೇಕಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಗರದ ಜಿ ಟಿ ಮಾಲ್ಗೆ ರೈತರನ್ನು ಬಿಡದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇದನ್ನು ಕಲೋನಿಯಲ್ ಮೈಂಡ್ಸೆಟ್ ಅಂತಾರೆ. ನಾವು ಇಲ್ಲಿ ಏನೆ ಉಡುಪು ಹಾಕಿದ್ರು ಗೌರವಿಸಬೇಕು. ಕರ್ನಾಟಕದಲ್ಲಿ ಪಂಚೆ ಹಾಕುವುದು ನಮ್ಮ ಉಡುಪು. ಆಂಧ್ರದಲ್ಲಿ, ತಮಿಳುನಾಡಿನಲ್ಲಿ ದಕ್ಷಿಣ ಭಾರತದಲ್ಲಿ ಪಂಚೆ ಹಾಕ್ತಾರೆ. ಪಂಚೆ ಉಡೋದನ್ನು ಗೌರವಿಸಬೇಕು. ನಮ್ಮೂರಲ್ಲೇ ಇದನ್ನು ಗೌರವಿಸದೆ ಹೋದ್ರೆ ಅದು ಅಪಮಾನವಾಗುತ್ತೆ. ಬೆಂಗಳೂರಿನ ಕೆಲವು ಕ್ಲಬ್ಗಳಲ್ಲಿ ಇಂತ ಘಟನೆಗಳು ನಡೆದಿವೆ ಎಂದರು.
ಕನ್ನಡಿಗರಿಗೆ ಮೀಸಲಾತಿ ನೀಡುವ ವಿಚಾರಕ್ಕೆ ಸರ್ಕಾರದ ಯು-ಟರ್ನ್ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಲ್ ಮಾಡಿ ತಯಾರು ಮಾಡಿಕೊಂಡಿದ್ದೆವು. ಒಂದಿಷ್ಟು ಅಭಿಪ್ರಾಯಗಳನ್ನು ತೆಗೆದು ಮಾಡಬೇಕೆಂದು ತಡೆಹಿಡಿದಿದ್ದಾರೆ. ಅದನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರುತ್ತೇವೆ ಎಂದರು.
ಬಿಜೆಪಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅವರಿಗೆ ಬೇರೆ ಏನಿಲ್ಲಾ ಅಭಿವೃದ್ಧಿ ಬಗ್ಗೆ ಮಾತಾಡಿದ್ರಾ?. ಜನಗಳ ಬದುಕಿನ ಬಗ್ಗೆ, ರೈತರ ಸಮಸ್ಯೆ ಬಗ್ಗೆ ಮಾತಾಡಿದ್ರಾ? ಕೇಂದ್ರ ಸರ್ಕಾರ ರೈತರ ಮೂರು ಮಸೂದೆಗಳನ್ನ ಮಾಡಿ, ವರ್ಷಾನುಗಟ್ಟಲೆ ಅವರ ಪ್ರಾಣ ತೆಗೆದು ಅದನ್ನು ಹಿಂತೆಗೆದುಕೊಂಡಿದ್ರು. ಅಂತದ್ರಲ್ಲಿ ಇಂಥ ಘಟನೆಗಳನ್ನು ಉಲ್ಲೇಖಿಸಿ ಪ್ರತಿಭಟನೆ ಮಾಡೊದು ಎಷ್ಟು ಸರಿ? ಇಂಥ ಘಟನೆಗಳ ವಿಚಾರದ ಬಗ್ಗೆ ಪ್ರತಿಭಟನೆ ಮಾಡೋದು ಎಷ್ಟು ಸರಿ? ಪ್ರತಿಭಟನೆ ಮಾಡೋದು ಅವರ ಹಕ್ಕು. ಅವರು ಯಾವ ವಿಚಾರಕ್ಕೆ ಮಾಡ್ತಾರೆ ಅನ್ನೋದು ಮುಖ್ಯ. ಜನಪರ ಹೋರಾಟ ಮಾಡಲಿ ಎಂದರು.