ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಶಾಸಕ ಜಿ. ಟಿ. ದೇವೇಗೌಡ ಬಹಿರಂಗ ಸವಾಲು ಹಾಕಿದ್ದಾರೆ.
"ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಏನು ಕಡಿದು ಕಟ್ಟೆ ಹಾಕಿದ್ದಾರೆ" ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕ ಅವರು, ವರುಣ ಕ್ಷೇತ್ರಕ್ಕೆ ಸಿಎಂ ಅವರು ರಾಜೀನಾಮೆ ಕೊಡಲಿ, ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ರಾಜೀನಾಮೆ ಕೊಡುವೆ. ಬಳಿಕ ಇಬ್ಬರೂ ಸೇರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಪಚುನಾವಣೆಗೆ ಸ್ಫರ್ಧಿಸೋಣ ಯಾರು ಗೆಲ್ತಾರೆ ನೋಡೋಣಾ ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಬಳಿಕ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯರಿಗೆ ಅಭಿವೃದ್ಧಿ ಅಂದರೆ ಏನೂ ಎಂಬುದು ಗೊತ್ತಿಲ್ಲ. ಅಭಿವೃದ್ಧಿ ಮಾಡದೆ ರಾಜಕೀಯದಲ್ಲಿ ಬೆಳೆದಿದ್ದು ಅಂದರೆ ಅದು ಸಿದ್ದರಾಮಯ್ಯ ಮಾತ್ರ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ನೀವು ಮಾಡಿದ ಅಭಿವೃದ್ಧಿ ಕಾರ್ಯದ ಶ್ವೇತ ಪತ್ರ ಹೊರಡಿಸಿ ಎಂದು ಆಗ್ರಹಿಸಿದರು. ಚಾಮುಂಡೇಶ್ವರಿ ಉಪ ಚುನಾವಣೆ ವೇಳೆ ನಾನು ಜೆಡಿಎಸ್ ಪರ ಪ್ರಚಾರಕ್ಕೆ ಹೋಗಲಿಲ್ಲ. ಹಾಗಾಗಿ ಆಗ ನೀವು ಗೆದ್ದದ್ದು. ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಲು ಎಷ್ಟು ಸಲ ಪ್ರಯತ್ನ ಪಟ್ರಿ? ನನ್ನ ಕಾಯೋಕೆ ದೈವ ಇಲ್ವಾ?, ಧರ್ಮ ಇಲ್ವಾ? ಅದು ಹೇಗೆ ಸೋಲಿಸ್ತಿರಿ ನೀವು ನನ್ನ? ನೀವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಮೇಲೆ ಮುಗಿದು ಹೋಯ್ತು. 35 ಸಾವಿರ ಮತಗಳ ಅಂತರದಿಂದ ನಾನು ನಿಮ್ಮನ್ನು ಸೋಲಿಸಿದ್ದಾಗಲೂ ನಿಮ್ಮ ಬಗ್ಗೆ ಅಗೌರವದಿಂದ ಮಾತಾಡಿಲ್ಲ ಎಂದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಬಿಇಒ, ತಹಶೀಲ್ದಾರರು ಎಲ್ಲಾ ಸಿಎಂ ಬಂಧುಗಳೆ. ಹೆಸರಿಗೆ ಮಾತ್ರ ನಾನು ಶಾಸಕ. ಎಷ್ಟು ದಿನ ಸಿಎಂ ಆಗಿ ಇರ್ತಿರಿ? ಎಷ್ಟು ದಿನ ಅಧಿಕಾರದಲ್ಲಿರ್ತಿರಾ ನೀವು? ನೋಡೋಣ. ಎಷ್ಟು ನೋವು ಕೊಡ್ತಾ ಇದ್ದಿರಿ ನೀವು ನನಗೆ ಪದೇ ಪದೇ ಯಾಕೆ ಈ ರೀತಿ ಚುಚ್ಚಿ ಮಾತಾನಾಡುತ್ತೀರಿ? ಎಂದು ಬೇಸರ ವ್ಯಕ್ತ ಪಡಿಸಿದರು. ನಮ್ಮ ಕ್ಷೇತ್ರದಲ್ಲಿ ಗುತ್ತಿಗೆದಾರರು ನಿಮ್ಮ ಪುತ್ರನಿಗೆ ಕಮೀಷನ್ ಕೊಡಬೇಕು. ಯತೀಂದ್ರ ಕಮೀಷನ್ ದಂಧೆ ಮಾಡುತ್ತಿದ್ದಾರೆ. 60% ಸರಕಾರ ಇದು ಎಂದು ಜಿ ಟಿ ದೇವೇಗೌಡ ಆರೋಪಿಸಿದರು.