ಹುಬ್ಬಳ್ಳಿ: ''ಜೀವಕ್ಕೆ ಗ್ಯಾರಂಟಿ ಇಲ್ಲದ ಸರ್ಕಾರ ಅಂದರೆ, ಅದು ಸಿದ್ದು ಸರ್ಕಾರ. ಯಾರನ್ನೋ ಸಸ್ಪೆಂಡ್ ಮಾಡಿ ಕೈ ತೊಳೆದುಕೊಂಡರಷ್ಟೇ ಸಾಲದು. ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ವಿಚಾರಣೆ ನಡೆಸಬೇಕು'' ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು.
ಭಾನುವಾರ ಅಂಜಲಿ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಹಿಂದೆ ನಡೆದಿದ್ದ ಘಟನೆಯ ತನಿಖೆಯೂ ಆಗಬೇಕು. ಎಲ್ಲಿ ಮಾಫಿಯಾ ಕ್ರಿಯಾಶೀಲವಾಗಿದೆಯೋ ಅಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಬೇಕು. ಮಾಹಿತಿ ನೀಡಿದ ಜನರ ಹೆಸರು ಗೌಪ್ಯವಾಗಿಡಬೇಕು. ಕ್ರಿಮಿನಲ್ಗಳಿಗೆ ಭಯ ಹುಟ್ಟಿಸುವ ರೀತಿ ಕ್ರಮ ಆಗಬೇಕು. ಇದು ಸರ್ಕಾರ, ಗೃಹ ಸಚಿವರ ವೈಫಲ್ಯ. ಇಲ್ಲಿ ಎಷ್ಟೋ ವರ್ಷಗಳಿಂದ ಬೀಡು ಬಿಟ್ಟಿರುವ ಅನೇಕ ಪೊಲೀಸ್ ಅಧಿಕಾರಿಗಳಿದ್ದಾರೆ. ಹೊಸ, ದಕ್ಷ ಅಧಿಕಾರಿಗಳನ್ನು ಅವಳಿ ನಗರಕ್ಕೆ ನಿಯೋಜಿಸಬೇಕು'' ಎಂದರು.
ಹು-ಧಾ ಪೊಲೀಸ್ ಕಮಿಷನರ್ ಹುದ್ದೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಅದು ಮೊದಲು ಐಜಿ ಕೇಡರ್ ಇತ್ತು. ಈಗ ಅದು ಎಸ್ಪಿ ಕೇಡರ್ ಮಟ್ಟಕ್ಕೆ ಬಂದಿದೆ. ಇದು ನಾನ್ಸೆನ್ಸ್ ಅಲ್ಲವೇ? ಹಿಂದೆ ಹೀಗೆ ಎಂದೂ ಆಗಿರಲೇ ಇಲ್ಲ. ಕನಿಷ್ಠ ಡಿಐಜಿ ಕೇಡರ್ ಇರುತ್ತಿತ್ತು. ಆದ್ರೆ ಅದನ್ನೀಗ ಎಸ್ಪಿ ಕೇಡರ್‌ಗೆ ತಂದಿಟ್ಟಿದ್ದಾರೆ'' ಎಂದು ಜೋಶಿ ಕಿಡಿಕಾರಿದರು.
ಫೋಟೋ ಪೋಸ್ ಕೊಡುವ ಅವಶ್ಯಕತೆ ಇಲ್ಲ ಎಂಬ ಶಾಸಕ ಪ್ರಸಾದ ಅಬ್ಬಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ''ಇದು ಫೋಟೋ ಪೋಸ್ ಅಲ್ಲವೇ ಅಲ್ಲ. ಎಲ್ಲರೂ ಸಂವೇದನಾಶೀಲವಾಗಿ ನಡೆದುಕೊಳ್ಳಬೇಕು. ಈ ಬಗ್ಗೆ ಹಗುರವಾಗಿ ಮಾತಾಡಬಾರದು. ತಡವಾಗಿ ಭೇಟಿ ಮಾಡಿದ್ದಕ್ಕೆ ಕಾರಣ ಏನೇ ಇರಬಹುದು. ಆದ್ರೆ, ಹಾಗೆ ಯಾವತ್ತೂ ಮಾತನಾಡಬಾರದು. ಕೊಲೆ ನಡೆದ ದಿನವೇ ನಾನು ಎಲ್ಲರಿಗೂ ಮಾತನಾಡಿದ್ದೇನೆ. ಅಧಿಕಾರಿಗಳೊಂದಿಗೆ ಅವತ್ತೇ ಮಾತಾಡಿದ್ದೇನೆ. ಅವತ್ತೇ ಎಲ್ಲ ಮಾಹಿತಿ ಪಡೆದಿದ್ದೇನೆ. ನಾನು ಬಹಳ ದೂರವಿದ್ದಿದ್ದರಿಂದ ಬರಲಿಲ್ಲ. ಇದೀಗ ನೇರವಾಗಿ ಬಿಹಾರದಿಂದ ಇಲ್ಲಿಗೇ ಬಂದಿದ್ದೇನೆ. ನೇಹಾ ಪ್ರಕರಣವನ್ನು ಸಿಬಿಐಗೆ ನೀಡಬೇಕು. ಇದು ನಮ್ಮ ಆಗ್ರಹ ನೇಹಾ, ಅಂಜಲಿ ಎರಡೂ ಕೊಲೆ ಪ್ರಕರಣಗಳನ್ನು ಸಿಬಿಐಗೆ ಕೊಡಿ'' ಎಂದು ಒತ್ತಾಯಿಸಿದರು.
''ಅಂಜಲಿ ಅನ್ನೋ ಅಮಾಯಕ ಹುಡುಗಿ ಹತ್ಯೆಯಾಗಿದೆ. ಇದೀಗ ಬಿಹಾರದಿಂದ ನೇರವಾಗಿ ಬಂದಿದ್ದೇನೆ. ಕುಟುಂಬದವರು ಹೇಳಿದ ಮಾಹಿತಿಯಿಂದ ಬಹಳ ಅಘಾತ ಉಂಟಾಗಿದೆ. ಗಿರೀಶ್ ಓರ್ವ ಕ್ರಿಮಿನಲ್ ಈ ಹಿಂದೆ ಅಪ್ರಾಪ್ತೆಯನ್ನು ಪಟಾಯಿಸಿದ್ದ. ಬಳಿಕ ಆಕೆಯ ತಾಯಿಯ ಬಂಗಾರ ಲಪಟಾಯಿಸಿದ್ದ. ಐದೂವರೆ ತೊಲೆ ಬಂಗಾರ ಲಪಟಾಯಿಸಿದ್ದ. ಆಗಿನ ಇನಸ್ಪೆಕ್ಟರ್ ಕ್ರಮ ತೆಗೆದುಕೊಂಡಿರಲಿಲ್ಲ. ಆಗ ಕಾಂಪ್ರಮೈಸ್ ಮಾಡಿಸಿದ್ದರಂತೆ. ಅದರ ತನಿಖೆಯೂ ಈಗ ಆಗಬೇಕಿದೆ. ಆಗಿನ ಅಧಿಕಾರಿ ವಿರುದ್ಧವೂ ತನಿಖೆ ಆಗಬೇಕು. ನೇಹಾ ಪ್ರಕರಣದಲ್ಲಿ ಜನಾಂದೋಲನ ನಡೆದಿತ್ತು. ಬಳಿಕವಷ್ಟೇ ಸಿಎಂ ಎಚ್ಚೆತ್ತುಕೊಂಡರು. ನೇಹಾಳದ್ದು ವೈಯಕ್ತಿಕ ಕಾರಣಕ್ಕೆ ಕೊಲೆ ಅಂದಿದ್ದರು. ಇದರಿಂದ ಕೊಲೆಗಡುಕರಿಗೆ ಪ್ರೋತ್ಸಾಹ ಸಿಗುತ್ತೆ. ಅವರಿಗೆ ಕುಮ್ಮಕ್ಕು ಕೊಡುವ ರೀತಿ ವರ್ತಿಸುತ್ತಾರೆ. ಇದೇ ರೀತಿ ಸಿದ್ದರಾಮಯ್ಯ ಈ ಘಟನೆಯನ್ನು ವೈಯಕ್ತಿಕ ಅಂದಿದ್ದಾರೆ. ಅವರ ಹೊಣೆಗೇಡಿತನದ ಪರಿಣಾಮ ಇದೆಲ್ಲ ಆಗುತ್ತಿದೆ. ಸರ್ಕಾರ ಈ ಬಗ್ಗೆ ಗಂಭೀರತೆ ತೋರುತ್ತಿಲ್ಲ'' ಎಂದು ಆರೋಪಿಸಿದರು.
''ಕಳೆದ ನಾಲ್ಕು ತಿಂಗಳಲ್ಲಿ 430 ಕೊಲೆ, 692 ರೈತ ಆತ್ಮಹತ್ಯೆ ನಡೆದಿವೆ. ಇದನ್ನು ಹೇಳಿದ ಕೂಡಲೇ ಹಿಂದಿನ ದಾಖಲೆ ಹುಡುಕುವ ಕೆಲಸ ಮಾಡುತ್ತಾರೆ. ಹಿಂದೆ ಕೊಲೆಯಾಗಿದ್ದರೂ ಇಷ್ಟು ಭೀಕರ ಆಗಿರಲಿಲ್ಲ. ಕಾಲೇಜು, ಮನೆಗೆ ನುಗ್ಗಿ ಕೊಲೆ ಮಾಡಲಾಗುತ್ತಿದೆ. ವರ್ಗಾವಣೆಯಲ್ಲಿ ದುಡ್ಡು ತೆಗೆದುಕೊಳ್ಳಲಾಗುತ್ತಿದೆ. ಪೊಲೀಸರ ವರ್ಗಾವಣೆಯಲ್ಲಿ ದಂಧೆ ನಡೆದಿದೆ. ಇದರ ಪರಿಣಾಮ ಗಾಂಜಾ ಮಾರಾಟ ಹೆಚ್ಚಾಗಿದೆ. ಇದನ್ನು ಹೇಳಿದರೆ ಮಾಹಿತಿ ಕೊಡಿ ಅಂತಾ ಸರ್ಕಾರ ಹೇಳುತ್ತೆ. ಸರ್ಕಾರದ ಬಳಿ ಇಂಟಲಿಜೆನ್ಸಿ ಇಲ್ಲವೇ? ಅಭಿವೃದ್ಧಿಯ ಸಮಾಧಿ, ಹತ್ಯೆ, ಆತ್ಮಹತ್ಯೆ ಈ ಸರಕಾರದ ಟ್ರೇಡ್ ಮಾರ್ಕ್ ಆಗಿದೆ. ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅನೇಕರು ಮಕ್ಕಳನ್ನು ಶಾಲೆಗೆ ಕಳಿಸಲು ಭಯಪಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಅಂಜಲಿ, ನೇಹಾ ಹಿರೇಮಠ ನಿವಾಸಕ್ಕೆ ಎಡಿಜಿಪಿ ಭೇಟಿ: ಯುವತಿಯರ ಹತ್ಯೆ ಬಗ್ಗೆ ಹೇಳಿದ್ದೇನು? - ADGP Meets Neha Parents