ಹುಬ್ಬಳ್ಳಿ: ಹುಬ್ಬಳ್ಳಿಯ ಗೋಕುಲ್ ರಸ್ತೆಯ ಎಸ್.ಆರ್.ಬೊಮ್ಮಾಯಿ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಗಳಾದ ವಿರೇಶಗೌಡ ಪಾಟೀಲ್ ಮತ್ತು ಹನುಮಂತ ಹೊಸಮನಿ ಮಂಡಿಸಿದ್ದ 'ಹೆದ್ದಾರಿಯಲ್ಲಿ ಬಲಿಯಾಗುತ್ತಿರುವ ಪ್ರಾಣಿಗಳ ಸಾವು ತಡೆಯುವಲ್ಲಿ ತಂತ್ರಜ್ಞಾನದ ಬಳಕೆ' ಸಂಶೋಧನೆಗೆ ರಾಜ್ಯಮಟ್ಟದಲ್ಲಿ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ ದೊರೆತಿದೆ.
ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಂಡಿದ್ದ 300ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳಲ್ಲಿ 30 ಯೋಜನೆಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಈ ಪೈಕಿ ಟಾಪ್ 4ರಲ್ಲಿ ಈ ಯುವ ವಿಜ್ಞಾನಿಗಳು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಈ ವಿದ್ಯಾರ್ಥಿಗಳು ಫ್ಯಾಸಿವ್ ಇನ್ಫ್ರಾರೆಡ್ (ಪಿಐಆರ್) ಸೆನ್ಸಾರ್ ಸಂಶೋಧನೆ ಮಾಡಿದ್ದಾರೆ. ಇದರಿಂದ 500 ಮೀಟರ್ ಮುಂಚಿತವಾಗಿ ವಾಹನ ಸವಾರರಿಗೆ ಪ್ರಾಣಿಗಳ ಚಲನವಲನಗಳ ಬಗ್ಗೆ ಮುನ್ಸೂಚನೆ ದೊರೆಯುತ್ತದೆ. 15 ವರ್ಷಗಳ ನಂತರ ಧಾರವಾಡ ಜಿಲ್ಲಾ ರಾಜ್ಯ ವಿಜ್ಞಾನ ಪರಿಷತ್ತಿಗೆ ಈ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ ಎಂದು ವೀರೇಶಗೌಡ ಹೇಳಿದರು.
ಜೂನ್ನಲ್ಲಿ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶವು ಚೆನ್ನೈ ಅಥವಾ ದೆಹಲಿಯಲ್ಲಿ ನಡೆಯಲಿದ್ದು, ಅದರಲ್ಲಿ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಕಲ್ಬುರ್ಗಿಯ ಸೇಡಂ ನಗರದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮಂಡಿಸಿದ್ದ ಸಂಶೋಧನೆಗೆ ಪ್ರಥಮ ಪ್ರಶಸ್ತಿ ದೊರೆತಿದೆ ಎಂದು ತಿಳಿಸಿದರು.
ಯೋಗದಲ್ಲಿ ತೇಜಸ್ವಿನಿ ಸಾಧನೆ: ಗೋಕುಲರಸ್ತೆಯ ಕೇಶವ ವಿದ್ಯಾಕೇಂದ್ರದ 7ನೇ ತರಗತಿಯ ವಿದ್ಯಾರ್ಥಿನಿ ತೇಜಸ್ವಿನಿ ಪಂಚಗಟ್ಟಿ ನಾಲ್ಕು ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ವಿಜೇತರಾಗಿದ್ದು, ಮೂರು ಬಾರಿ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಎರಡು ಬಾರಿ ರಾಷ್ಟ್ರಮಟ್ಟದ ಯೋಗ ಚಾಂಪಿಯನ್ ಆಗಿದ್ದಾರೆ. ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ಯೋಗ ಚಾಂಪಿಯನ್ ಶಿಪ್ನಲ್ಲಿ ದ್ವಿತೀಯ ಸ್ಥಾನ ಹಾಗೂ ಗೋವಾದಲ್ಲಿ ನಡೆದ ರಾಷ್ಟ್ರೀಯ ಯೋಗ ಚಾಂಪಿಯನ್ನಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ದ್ವಿತೀಯ ಸ್ಥಾನ ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಮುಂದಿನ ತಿಂಗಳು ಥೈಲ್ಯಾಂಡ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಖೇಲೋ ಇಂಡಿಯಾ, ನ್ಯಾಷನಲ್ ಗೇಮ್ಸ್, ರಾಷ್ಟ್ರೀಯ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕೆಂಬ ಹೆಬ್ಬಯಕೆ ಅವರದ್ದು.
ಇದನ್ನೂ ಓದಿ: ಪರಿಸರ ಸ್ನೇಹಿ ಎಲೆಕ್ಟ್ರಿಕ್ ಗೋ ಕಾರ್ಟಿಂಗ್ ಆವಿಷ್ಕರಿಸಿದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು