ಶಿವಮೊಗ್ಗ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಪ್ರಸ್ತಾಪ ನಮ್ಮ ಸರ್ಕಾರದ ಮುಂದೆ ಇಲ್ಲ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ವಿಚಾರ ಪ್ರಸ್ತಾಪ ಮಾಡಿದ್ದು ಬಸವರಾಜ ಬೊಮ್ಮಾಯಿ ಸರ್ಕಾರ. ಅಂದಾಜು ವೆಚ್ಚದ ಪ್ರಸ್ತಾವ ಬಿಟ್ಟರೆ ಬೇರೆ ಏನೂ ಸಹ ನಮ್ಮ ಸರ್ಕಾರದಲ್ಲಿ ಆಗಿಲ್ಲ. ನಾನು ಈ ಕುರಿತು ಸಿಎಂ ಹಾಗೂ ಡಿಸಿಎಂ ಅವರ ಜೊತೆ ಚರ್ಚೆ ನಡೆಸಿದ್ದೇನೆ. ನೀರು ನಮ್ಮ ಜಿಲ್ಲೆಯ ಭಾವನಾತ್ಮಕ ವಿಷಯ ಎಂದರು.
ಸಂಸದರು ಶರಾವತಿ ಸಂತ್ರಸ್ತರ ಪರ ಧ್ವನಿಯಾಗಿಲ್ಲ: ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಸಂಸದರು ಧ್ವನಿಯಾಗಿಲ್ಲ. ಅವರವರ ಆಸ್ತಿ ಉಳಿಸಿಕೊಳ್ಳಲು ಮಾತ್ರ ಹೋರಾಟ ನಡೆಸಿದ್ದಾರೆ ಅಷ್ಟೇ. ರೈತರ ಪರವಾಗಿ ಇವರು ಹೋರಾಟ ನಡೆಸಿಲ್ಲ. ಸಂತ್ರಸ್ತರ ಪರವಾಗಿ ನಮ್ಮ ಸರ್ಕಾರ ಇದೆ. ನಾವು ರೈತರ ಪರ ಇದ್ದೇವೆ. ಕೋರ್ಟ್ನಲ್ಲಿ ಇರುವವುದನ್ನು ಮಾತ್ರ ಒಕ್ಕಲೆಬ್ಬಿಸುತ್ತಿದ್ದೇವೆ. ಹೊಸ ಉಳುಮೆ ಮಾಡಲು ಅವಕಾಶ ಇಲ್ಲ, ರೈತರು ಹೆದರುವ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನನಗೆ ಬಿಜೆಪಿಯಲ್ಲಿ ಶತ್ರುಗಳಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ಬಿಜೆಪಿಯಲ್ಲಿ ಒಳಜಗಳ ಶುರುವಾಗಿದೆ. ಈಶ್ವರಪ್ಪ ಮತ್ತು ಯತ್ನಾಳ್ ಸೇರಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಸಲು ಪ್ರತ್ನಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಇದನ್ನೂ ಓದಿ: ಬೆಂಗಳೂರಿನ ಮಳೆಹಾನಿ ಪರಿಹಾರಕ್ಕೆ 1 ಸಾವಿರ ಕೋಟಿ ರೂ ಬಿಡುಗಡೆ ಮಾಡಿ: ಆರ್.ಅಶೋಕ್