ತುಮಕೂರು: ರಾಜ್ಯಾದ್ಯಂತ ಗಣೇಶನನ್ನು ಶ್ರದ್ಧಾ ಭಕ್ತಿಯಿಂದ ಪ್ರತಿಷ್ಠಾಪಿಸಿ ಪೂಜಿಸಿ ನಿಮಜ್ಜನ ಮಾಡಿ ದಿನಗಳೇ ಕಳೆದಿವೆ. ಆದರೆ ಇಲ್ಲಿನ ಗ್ರಾಮಸ್ಥರು ಮಾತ್ರ ದೀಪಾವಳಿ ಹಬ್ಬದ ಸಂಭ್ರಮದೊಂದಿಗೆ ಬೃಹತ್ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ ಭಕ್ತಿ ಪ್ರದರ್ಶಿಸುತ್ತಾರೆ.
ತುಮಕೂರು ತಾಲೂಕಿನ ಗೂಳೂರು ಗ್ರಾಮಸ್ಥರು ದೀಪಾವಳಿ ಸಮಯದಲ್ಲಿ ಗಣೇಶನ ಹಬ್ಬವನ್ನೂ ಆಚರಿಸಿ ಗಮನ ಸೆಳೆದಿದ್ದಾರೆ. ಜಿಲ್ಲೆಯ ಗೂಳೂರು ಗಣಪತಿಗೆ ಇಲ್ಲಿ ಅನೇಕ ವಿಶೇಷತೆಗಳಿವೆ. ಭೃಗು ಮಹರ್ಷಿಯಿಂದ ಪೂಜಿಸಲ್ಪಟ್ಟ ಗಣಪತಿಗೆ ಇಲ್ಲಿ ವಿಶೇಷ ಆರಾಧನೆ ನಡೆಯುತ್ತದೆ. ದೀಪದಿಂದ ದೀಪ ಹಚ್ಚಿ ಶುಭ್ರ ಮನಸ್ಸಿನೊಂದಿಗೆ ಬೆಳಕಿನ ಹಬ್ಬ ಆಚರಣೆಯಲ್ಲಿ ಇಡೀ ರಾಜ್ಯದ ಜನರು ತಲ್ಲೀನರಾಗಿರುತ್ತಾರೆ. ಆದರೆ, ಗೂಳೂರಿನಲ್ಲಿ ಮಾತ್ರ ಬಲಿಪಾಡ್ಯ ಹಬ್ಬದ ಸಂಭ್ರಮದಲ್ಲಿ ವಿಘ್ನ ವಿನಾಶಕ ಪ್ರವೇಶ ಕೊಡುತ್ತಾನೆ.
ಗಣೇಶನ ಹಬ್ಬದ ಸಂಭ್ರಮದಲ್ಲಿ ಗೂಳೂರಿನ ಜನ ಗಣೇಶ ಚತುರ್ಥಿಯಂದು ಪುಟ್ಟದಾದ ವಿಘ್ನೇಶನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ. ನೈವೇದ್ಯವನ್ನಿರಿಸಿ ವಿಧಿ ವಿಧಾನದಂತೆ ವಿಗ್ರಹಕ್ಕೆ ಪೂಜೆ ಮಾಡಲಾಗುತ್ತದೆ. ಅನಂತರ ಗ್ರಾಮದ 18 ಸಮುದಾಯದ ಜನರು ಕೆರೆಯಿಂದ ಮಣ್ಣು ತಂದು ವಿನಾಯಕನ ವಿಗ್ರಹ ಮಾಡಲು ಪ್ರಾರಂಭಿಸುತ್ತಾರೆ. ಮೂರು ತಿಂಗಳ ಕಾಲ ನಿರಂತರವಾಗಿ 18 ಅಡಿ ಎತ್ತರ ಹಾಗೂ 18 ಅಡಿ ಅಗಲದ ಗಜಗಣಪತಿ ವಿಗ್ರಹವನ್ನು ತಯಾರಿಸುತ್ತಾರೆ. ದೀಪಾವಳಿಯಂದು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ.

ಈಗಿನ ಗೂಳೂರು ಹಿಂದೆ ಗೂಳಿಊರು ಎಂದೇ ಪ್ರಸಿದ್ಧಿಯಾಗಿತ್ತಂತೆ. ಬಹಳ ವರ್ಷಗಳ ಹಿಂದೆ ಭೃಗು ಮಹರ್ಷಿಗಳು ಈ ಭಾಗದಲ್ಲಿ ಸಂಚಾರ ನಡೆಸುತ್ತಿದ್ದಾಗ ಇಲ್ಲಿ ಮೂರು ತಿಂಗಳ ಕಾಲ ತಪೋನುಷ್ಠಾನ ಕೈಗೊಂಡಿದ್ದರಂತೆ. ಆದರೆ, ಅವರ ತಪಸ್ಸು ಪೂರ್ಣಗೊಳ್ಳುವ ವೇಳೆಗೆ ಚೌತಿ ಮುಗಿದು ದೀಪಾವಳಿ ಸಮಯ ಬಂದಿತ್ತಂತೆ. ಹೀಗಾಗಿ, ದೀಪಾವಳಿಯ ದಿನದಂದೇ ಗ್ರಾಮದ ಜನರನ್ನು ಒಗ್ಗೂಡಿಸಿ ಗಣಪತಿ ಪ್ರತಿಷ್ಠಾಪನೆ ಮಾಡಿ ಪೂಜಿಸಿದ್ದರಂತೆ. ಅಂದಿನಿಂದ ಈವರೆಗೆ ಈ ಪದ್ಧತಿ ಮುಂದುವರೆದುಕೊಂಡು ಬಂದಿದೆ ಅಂತಾರೆ ದೇವಸ್ಥಾನದ ಪುರೋಹಿತ ಶಿವಕುಮಾರ್ ಶಾಸ್ತ್ರಿ.

ಒಂದು ತಿಂಗಳ ಕಾಲ ನಿರಂತರವಾಗಿ ವಿವಿಧ ಪೂಜೆ ಸಲ್ಲಿಸಲಾಗುತ್ತದೆ. ಗಣಪತಿಯನ್ನು ಗೂಳೂರು ಕೆರೆಯಲ್ಲಿ ನಿಮಜ್ಜನ ಮಾಡಲಾಗುತ್ತದೆ. ದೀಪಾವಳಿಯಂದು ದೀಪ ಹಚ್ಚುವ ಜೊತೆಗೆ ಗಣಪತಿ ಪೂಜೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎನ್ನುತ್ತಾರೆ ಗ್ರಾಮಸ್ಥರಾದ ಚಂದ್ರಶೇಖರ್.

ಇಂದು ಗಣೇಶ ಮೂರ್ತಿಯನ್ನು ವಿಧಿ ವಿಧಾನಗಳೊಂದಿಗೆ ಅದ್ಧೂರಿಯಾಗಿ ಗಣೇಶ ಮೂರ್ತಿಯನ್ನು ನಿಮಜ್ಜನೆ ಮಾಡಲು ಸರ್ವ ತಯಾರಿ ನಡೆಸಿದ್ದಾರೆ ಗ್ರಾಮದ ಜನರು.
ಇದನ್ನೂ ಓದಿ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮರಥಾರೋಹಣ: ಚಂಪಾ ಷಷ್ಠಿ ಮಹೋತ್ಸವ ಸಂಪನ್ನ