ಬೆಂಗಳೂರು: ಗೌರಿ-ಗಣೇಶ ಹಬ್ಬ ಹಿನ್ನೆಲೆಯಲ್ಲಿ ನಗರ ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಇಂದು ಶಾಂತಿ ಸೌಹಾರ್ದತೆ ಸಭೆ ನಡೆಸಿದರು. ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಂಬರುವ ಗೌರಿ-ಗಣೇಶ ಹಬ್ಬದ ನಿಮಿತ್ತ ಪಾಲಿಸಬೇಕಾದ ಸೂಚನೆಗಳನ್ನು ನೀಡಲಾಯಿತು. ಇದೇ ವೇಳೆ ಸಾರ್ವಜನಿಕರಿಂದ ಸಲಹೆಗಳನ್ನು ಪಡೆದ ಅಧಿಕಾರಿಗಳು, ಅವುಗಳನ್ನು ಅನುಷ್ಠಾನ ಮಾಡುವುದಾಗಿಯೂ ಭರವಸೆ ನೀಡಿದರು.
ಪ್ರತೀ ವರ್ಷದಂತೆ ಈ ಬಾರಿಯೂ ಹಬ್ಬದ ವೇಳೆ ಶಾಂತಿ-ಸುವ್ಯವಸ್ಥೆ ಪಾಲನೆ, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಾತನಾಡಿ, ಹಬ್ಬ ಯಾವ ರೀತಿ ಆಚರಿಸಬೇಕು ಸೇರಿದಂತೆ ಏನೆಲ್ಲಾ ನಿಬಂಧನೆಗಳ ಪಾಲಿಸಬೇಕು ಹಾಗೂ ತಾಂತ್ರಿಕವಾಗಿ ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಚರ್ಚಿಸಲಾಗಿದೆ. ಅಲ್ಲದೆ ಸಾರ್ವಜನಿಕರು ಕುಂದುಕೊರತೆ ತಿಳಿಸಿದ್ದು, ಈ ಬಗ್ಗೆ ಆಲಿಸಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಮಾರ್ಗಸೂಚಿ ಹೊರಡಿಸುವುದಾಗಿ ತಿಳಿಸಿದರು.
ಹಬ್ಬದ ವೇಳೆ ಧ್ವನಿವರ್ಧಕ ಬಳಕೆ, ಶಾಮಿಯಾನ, ಮೆರವಣಿಗೆ ಮಾರ್ಗ, ಗಣೇಶ ಮೂರ್ತಿ ಕೂರಿಸುವುದು ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅನುಮತಿ ಪಡೆದುಕೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತ ಹಾಗೂ ಸಂಚಾರ ದಟ್ಟಣೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ನಗರ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಎಚ್ಚರಿಕೆ ಇರುವಂತೆ ಹೇಳಲಾಗಿದೆ. ಅನುಮಾನಸ್ಪಾದ ವ್ಯಕ್ತಿಗಳು ಕಂಡುಬಂದರೆ ಮಾಹಿತಿ ನೀಡಬೇಕು ಹಾಗೂ ರೌಡಿಶೀಟರ್ ಗಳ ಚಲನವಲನಾಗಳ ಬಗ್ಗೆ ಹೆಚ್ಚಿನ ನಿಗಾವಹಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪೊಲೀಸ್ ಇಲಾಖೆಗೆ 5 ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಸೇರ್ಪಡೆ - Royal Enfield Bikes To Police Dept