ಹಾವೇರಿ: ಪ್ರತಿವರ್ಷ ಗಣೇಶ ಚತುರ್ಥಿಗೆ ವಿಭಿನ್ನವಾಗಿ ಅಲಂಕಾರ ಮಾಡುವ ಮೂಲಕ ಗಮನ ಸೆಳೆಯುವ ರಾಣೆಬೆನ್ನೂರಿನ ವಂದೇ ಮಾತರಂ ಸಂಸ್ಥೆ, ಈ ವರ್ಷ ಹೆಣ್ಣುಮಕ್ಕಳ ಯಶೋಗಾಥೆ ಬಗ್ಗೆ ಹೇಳುತ್ತಿದೆ. ರಾಣೆಬೆನ್ನೂರು ಕಾ ರಾಜ (ಗಣೇಶ)ನನ್ನು ಪ್ರತಿಷ್ಠಾಪನೆ ಮಾಡಿರುವ ತಾಲೂಕು ಮೈದಾನದಲ್ಲಿ ಜಿಲ್ಲೆ, ರಾಜ್ಯ ಹಾಗೂ ದೇಶದ 37 ಮಹಾನ್ ಸಾಧಕಿಯರ ಕಥೆಯನ್ನು ಗಣೇಶ ದರ್ಶನಕ್ಕೆ ಬರುವ ಭಕ್ತರಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ ಸಂಸ್ಥೆಯ ಪ್ರಕಾಶ್ ಬುರಡಿಕಟ್ಟಿ.
ಮಹಿಳೆಯರ ಸಾಧನೆ ಅನಾವರಣ; ಇನ್ಫೋಸಿಸ್ನ ಸುಧಾಮೂರ್ತಿ ಸೇರಿದಂತೆ ಹಾವೇರಿ ಜಿಲ್ಲೆಯ 9 ಮಹಾನ್ ಸಾಧಕಿಯರ ಚಿತ್ರ ಬಿಡಿಸಲಾಗಿದ್ದು, ಅವರ ಕುರಿತ ಸಂಕ್ಷಿಪ್ತ ಮಾಹಿತಿಯನ್ನು ಸಹ ಹಾಕಲಾಗಿದೆ. ಜೊತೆಗೆ ಸಾಲುಮರದ ತಿಮ್ಮಕ್ಕ, ಒನಕೆ ಓಬವ್ವ, ಚಿಂದೋಡಿ ಲೀಲಾ, ಇತ್ತೀಚಿಗೆ ನಿಧನರಾದ ನಿರೂಪಕಿ ಅಪರ್ಣಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರ ಯಶೋಗಾಥೆ ಭಕ್ತರ ಗಮನ ಸೆಳೆಯುತ್ತಿವೆ.
ಈ ಹಿಂದೆ 2000ರಲ್ಲಿ ನಡೆದ ಸಿಡ್ನಿ ಒಲಿಂಪಿಕ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಕರ್ಣಂ ಮಲ್ಲೇಶ್ವರಿ, ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ ಬೇಡಿ, ಕಂಪ್ಯೂಟರ್ ಮಹಿಳೆ ಶಕುಂತಲಾ ದೇವಿ, ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿ, ಸಾವಿತ್ರಾ ಬಾಯಿ ಪುಲೆ, ಕಸ್ತೂರಬಾ, ರಾಮಕೃಷ್ಣ ಪರಮಹಂಸ ಅವರ ಮಡದಿ ಶಾರದಾ, ಅಹಲ್ಯಾಬಾಯಿ ಹೋಳ್ಕರ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಮೀರಾಬಾಯಿ, ಜೀಜಾಬಾಯಿ, ಮಹಾರಾಣಿ ರಾಣಿ ಲಕ್ಷ್ಮಿ ಅಮ್ಮಣ್ಣಿ ದೇವಿ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕದೇವಿ, ಕೆಳದಿ ಚೆನ್ನಮ್ಮ, ಹೊಯ್ಸಳರ ನಾಟ್ಯ ಶಾಂತಲೆ, ಕಿತ್ತೂರು ರಾಣಿ ಚೆನ್ನಮ್ಮ, ಚೆನ್ನಕ್ಕ ಪಾವಟೆ, ಮೈಲಾರ ಮಹದೇವರ ಪತ್ನಿ ಸಿದ್ದಮ್ಮ ಮೈಲಾರ, ಬಳ್ಳಾರಿಯ ಸಿದ್ದಮ್ಮ, ರಾಣೆಬೆನ್ನೂರಿನ ಮೊದಲ ಶಾಸಕಿ ಯಲ್ಲಮ್ಮ ಸಾಂಬ್ರಾಣಿ, ಮಹಾತ್ಮ ಗಾಂಧೀಜಿ ಮಾನಸಪುತ್ರಿ ಸಂಗೂರು ವೀರಮ್ಮ, ನಾಗಮ್ಮ ಪಾಟೀಲ್, ಗುತ್ತಲದ ರಾಣಿ ಪದ್ಮಾವತಿ ಸೇರಿದಂತೆ 37 ಮಹಾನ್ ಸಾಧಕಿಯರ ಪರಿಚಯವನ್ನು ಗಣೇಶ ದರ್ಶನಕ್ಕೆ ಬಂದ ಭಕ್ತರು ಪಡೆಯುತ್ತಿದ್ದಾರೆ.
ಈ ವಿಭಾಗಕ್ಕೆ ಪ್ರಾತಃ ಸ್ಮರಾಮಿ ಎಂದು ಹೆಸರಿಟ್ಟಿರುವ ಸಂಸ್ಥೆ ಇದಕ್ಕೆ ಮರೆತೇನೆಂದರ ಮರೆಯಲಿ ಹೆಂಗಾ ಶಿರೋನಾಮೆ ನೀಡಿದೆ. ಈ ಎಲ್ಲ ಮಹಿಳೆಯರನ್ನು ಮುಂಜಾನೆ ಏಳುತ್ತಲೇ ನೆನಪಿಸಿಕೊಳ್ಳಬೇಕು ಎನ್ನುತ್ತಾರೆ ಸಂಸ್ಥೆಯ ಪ್ರಕಾಶ್ ಬುರಡಿಕಟ್ಟಿ.
ಭಕ್ತರಿಗೆ ಉಚಿತ ಪುಸ್ತಕ ವಿತರಣೆ; ಮನೆಗೆ ತೆರಳಿದ ನಂತರ ಭಕ್ತರು ಮರೆಯಬಾರದು ಎಂದು ಪ್ರಾತಃ ಸ್ಮರಾಮಿ ಎಂಬ ಪುಸ್ತಕ ಸಹ ಮುದ್ರಿಸಿದ್ದು, ಗಣೇಶ ದರ್ಶನಕ್ಕೆ ಬರುವ ಭಕ್ತರಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಇದರಲ್ಲಿ 37 ಸಾಧಕ ಮಹಿಳೆಯರ ಜೀವನ ಚರಿತ್ರೆಯನ್ನು ಬರೆಯಲಾಗಿದೆ. ಇದಾದ ನಂತರ ಗಣೇಶ ಮಂಟಪದ ಪಕ್ಕದಲ್ಲಿಯೇ ನವದುರ್ಗೆಯರ ವೈಭವ ರಚಿಸಲಾಗಿದೆ. ಅರಮನೆಯ ಆವರಣದಲ್ಲಿ ನವದುರ್ಗೆಯರ ಮೂರ್ತಿಗಳನ್ನು ನಿರ್ಮಿಸಲಾಗಿದೆ. ಶ್ರೀಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಾ, ಸ್ಕಂಧಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿಧಾತ್ರಿ ದೇವಿಯರ ಮೂರ್ತಿಗಳು ಗಣೇಶ ಚತುರ್ಥಿಯಲ್ಲಿಯೇ ದಸರೆಯ ಸಂಭ್ರಮ ತಂದುಕೊಟ್ಟಿವೆ.
ಜೊತೆಗೆ ಭುವನೇಶ್ವರಿ, ಶಾರದಾ ಮಾತೆ ಮತ್ತು ಭಾರತಾಂಬೆ ಮೂರ್ತಿಗಳು ಆಕರ್ಷಣೀಯವಾಗಿದ್ದು ದೇಶಪ್ರೇಮ ಮೆರೆಯುವಂತೆ ಮಾಡುತ್ತವೆ. ಇನ್ನು, ಗಣೇಶ ಚತುರ್ಥಿಯ ಪ್ರಮುಖ ಆಕರ್ಷಣೆಯಾದ ಗಣೇಶನನ್ನು ಪಾರ್ವತಿ ಮಡಿಲಲ್ಲಿ ಇರುವಂತೆ ನಿರ್ಮಿಸಲಾಗಿದೆ. ಪಾರ್ವತಿ ಪರಮೇಶ್ವರ, ಷಣ್ಮುಖ, ನಂದಿ, ಈಶ್ವರ, ಕೈಲಾಸ ಪರ್ವತದಲ್ಲಿ ಆಸೀನರಾಗಿರುವ ಪ್ರತಿಕೃತಿ ಗಮನ ಸೆಳೆಯುತ್ತಿದೆ. ಪ್ರತಿವರ್ಷ ವಿವಿಧ ರೀತಿಯಲ್ಲಿ ಭಕ್ತರಿಗೆ ಮನರಂಜನೆ ಜೊತೆಗೆ ಜಾಗೃತಿ ಮೂಡಿಸುತ್ತಿರುವ ವಂದೇ ಮಾತರಂ ಸಂಸ್ಥೆಯ ಪ್ರಕಾಶ್ ಬುರಡಿಕಟ್ಟಿ ಅವರ ಕಾರ್ಯಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿದಿರಿನ ರಥದಲ್ಲಿ ಏಕದಂತ; ರಾಣೆಬೆನ್ನೂರಲ್ಲಿ ಭಕ್ತರ ಕಣ್ಮನ ಸೆಳೆಯುತ್ತಿರುವ ಗಣೇಶ - Bamboo chariot