ಬೆಂಗಳೂರು: ಹಾಸನ ಪೆನ್ಡ್ರೈವ್ ವಿಡಿಯೋ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ಇದಕ್ಕೆ ಪ್ರತ್ಯೇಕವಾದ ತನಿಖಾ ಟೀಂ ಮಾಡಿ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಡಿಯೋದಲ್ಲಿ ಇರುವ ರಾಜಕೀಯ ನಾಯಕ ದೇಶ ಬಿಟ್ಟಿದ್ದಾರೆ ಎಂಬ ಸುದ್ದಿ ಬಂದಿದೆ. ಹೀಗಾಗಿ SIT ಕ್ರಮಕೈಗೊಳ್ಳಲಿದೆ, ಅವರನ್ನು ಕರೆ ತರುವ ಪ್ರಯತ್ನ ಮಾಡಿ, ತನಿಖೆ ಪ್ರಾರಂಭಿಸುತ್ತೇವೆ. ಮಹಿಳಾ ಆಯೋಗಕ್ಕೆ ಹಾಸನ ಜಿಲ್ಲೆಯ ನೊಂದ ಮಹಿಳೆಯರು ಪತ್ರ ಬರೆದಿದ್ದಾರೆ. ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗ ಸಿಎಂಗೆ ಮತ್ತು ನನಗೆ ಪತ್ರ ಬರೆದಿದ್ದಾರೆ ಎಂದರು.
ಮಹಿಳಾ ಆಯೋಗ ಪತ್ರ ಬರೆದಾಗ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಪೆನ್ ಡ್ರೈವ್ ವಿಚಾರ ಈಗ ಬೆಳಕಿಗೆ ಬಂದಿದೆ, ಹೀಗಾಗಿ ಈಗ ಕ್ರಮ ಕೈಗೊಂಡಿದ್ದೇವೆ. ಪೆನ್ ಡ್ರೈವ್ ವಿಚಾರ ತನಿಖೆಯಲ್ಲಿ ಹೊರ ಬರುತ್ತೆ. ಯಾರ ಪಾತ್ರ ಇದೆ ಅನ್ನೋದು ತಿಳಿಯುತ್ತೆ ಎಂದು ಸಚಿವ ಪರಮೇಶ್ವರ್ ತಿಳಿಸಿದರು.
ದೇಶದ ಇತಿಹಾಸದಲ್ಲೇ ದೊಡ್ಡ ಲೈಂಗಿಕ ಪ್ರಕರಣ: ''ಈ ಪ್ರಕರಣ ಆದರೂ ಬಿಜೆಪಿಯವರು ಖಂಡಿಸುತ್ತಿಲ್ಲ. ಅದನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಾರೆ. ಪ್ರಪಂಚದ ಅತಿ ದೊಡ್ಡ ಹಗರಣವನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ. ದೇಶದ ಮಾಜಿ ಪ್ರಧಾನಿ ದೇವೇಗೌಡರು ಉತ್ತರ ಕೊಡಬೇಕು. ಮಹಿಳೆಯರ ಕುಲಕ್ಕೆ ಅಮಾನ ಮಾಡಿದ್ದಾರೆ. ಇಷ್ಟು ದಿನ ಏನು ಮಾಡುತ್ತಿದ್ದಿರಿ. ಅವನನ್ನು ಪುಸಲಾಯಿಸುವ ಕೆಲಸ ಮಾಡಿದಿರಿ. ಉಂಡ ಮನೆಗೆ ನೀವು ಕನ್ನ ಹಾಕಿದ್ದಿರಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು'' ಎಂದು ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು.
''ಕನ್ನಡ ಮಹಿಳೆಯರ ಮಾಂಗಲ್ಯ ಕಸಿದ ಈ ಸಂಸದರ ಬಗ್ಗೆ ನರೇಂದ್ರ ಮೋದಿ ಏನು ಮಾಡುತ್ತೀರಿ. ನಿಮ್ಮ ಕಣ್ಣ ಮುಂದೆ ಮಾಂಗಲ್ಯ ಕಿತ್ತು ಹಾಕುತ್ತಿದ್ದಾರೆ. ಎಲ್ಲಿದೆ ನಿಮ್ಮ ಇಡಿ, ಐಟಿ, ಸಿಬಿಐ?. ದೇಶದ ಮಹಿಳೆಯರು ನಿಮಗೆ ಮತ ಹಾಕಿಲ್ವಾ?. ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಅಂತ ಕುಮಾರಸ್ವಾಮಿ ಹೇಳ್ತಾರೆ. ಈಗ ದಾರಿ ತಪ್ಪಿದ್ದು ಯಾರು?. ಅವರ ಮನೆಯ ಮಗನೇ ದಾರಿ ತಪ್ಪಿದ್ದಾನೆ. ಎಷ್ಟು ಮಾಂಗಲ್ಯ ಕಿತ್ತಿದ್ದಾರೆ ಅಂತ ಮೋದಿ ಹೇಳ್ತಾರೆ. ಈ ಬಗ್ಗೆ ಪ್ರಧಾನಿ ಮೋದಿ ಉತ್ತರ ಕೊಡ್ಬೇಕು. ಇವತ್ತು ರಾಜ್ಯಕ್ಕೆ ಮೋದಿ ಬರ್ತಿದ್ದಾರೆ. ಎಷ್ಟು ಜನರ ತಾಳಿ ಕಸಿದಿದ್ದಾರೆ'' ಅಂತ ಅವರೇ ಹೇಳ್ಬೇಕು ಎಂದು ವಾಗ್ದಾಳಿ ನಡೆಸಿದರು.
''ಇದು ದೇಶದ ಇತಿಹಾಸದಲ್ಲೇ ದೊಡ್ಡ ಲೈಂಗಿಕ ಹಗರಣ. ನೂರಾರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿರೋದು ಖಂಡನೀಯ. ಇಷ್ಟೆಲ್ಲ ಮಾಡಿದ್ರೂ ಅವರಿಗೆ ಗೊತ್ತೇ ಇಲ್ವಾ?. ಅಥವಾ ಗೊತ್ತಿದ್ರೂ ಈ ಕೃತ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ರಾ?. ಅವರ ತಾಯಿ, ತಂದೆ ಇದಕ್ಕೆಲ್ಲ ಉತ್ತರ ಕೊಡ್ಬೇಕು. ಅವರ ಕುಟುಂಬಕ್ಕೆ ಅಧಿಕಾರ ಇದ್ದರೆ ಸಾಕು. ಅಪ್ಪನಿಗೆ PWD ಇಲಾಖೆಯೇ ಬೇಕು, ಅಧಿಕಾರ ದಾಹ. ಚಿಕ್ಕಪ್ಪ, ಮಗ, ಅತ್ತೆ, ಸೊಸೆ ಎಲ್ಲರಿಗೂ ಅಧಿಕಾರ ಬೇಕು. ಸಿಬಿಐ ಏನು ಮಾಡ್ತಾ ಇತ್ತು?. ಸುಮೋಟೊ ಕೇಸ್ ದಾಖಲಿಸಿಕೊಳ್ಳಬೇಕಿತ್ತು'' ಎಂದು ಆಗ್ರಹಿಸಿದರು.
ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಪ್ರಕರಣ: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ - Hassan Video Case