ಬೆಂಗಳೂರು: ಮಾಜಿ ಸಂಸದ ಮುದ್ದಹನುಮೇಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿ ಬಳಿಯ ಭಾರತ್ ಜೋಡೋ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಕಾಂಗ್ರೆಸ್ ಪಕ್ಷಕ್ಕೆ ಮರಳಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ. ಜಿ.ಪರಮೇಶ್ವರ್, ಎನ್.ರಾಜಣ್ಣ ಸಮ್ಮುಖದಲ್ಲಿ ಮುದ್ದಹನುಮೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಆ ಮೂಲಕ ತುಮಕೂರಿನಿಂದ ಲೋಕಸಭೆ ಚುನಾವಣೆಗೆ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಖ ಖಚಿತವಾಗಿದೆ. ಮತ್ತೊಂದೆಡೆ, ಹಿರಿಯ ನಾಯಕ ಟಿ.ಬಿ. ಜಯಚಂದ್ರ ಕಾರ್ಯಕ್ರಮಕ್ಕೆ ಗೈರಾಗಿರುವುದು ಅಸಮಾಧಾನದ ಅನುಮಾನ ಮೂಡಿಸಿದೆ.
ತಪ್ಪಿನ ಅರಿವಾಗಿ ಕಾಂಗ್ರೆಸ್ಗೆ ಮರಳಿದ್ದೇನೆ: ಇದೇ ವೇಳೆ ಮಾತನಾಡಿದ ಮುದ್ದಹನುಮೇಗೌಡ, ನಾನು ಪಕ್ಷಾಂತರ ಮಾಡಿದ್ದಕ್ಕೆ ನನಗೆ ಮುಜುಗರ ಆಗಿದೆ. ಚುನಾವಣೆಗೆ ಸ್ಪರ್ಧೆ ಮಾಡಲು ಪಕ್ಷಾಂತರ ಮಾಡಿದ್ದೆ. ತಪ್ಪಿನ ಅರಿವು ಆಗಿ, ಯಾವ ಪಕ್ಷ ರಾಜಕೀಯ ಜೀವ ಕೊಟ್ಟಿದೆ, ಆ ಪಕ್ಷದಲ್ಲಿ ಸೇವೆ ಸಲ್ಲಿಸಬೇಕು ಎಂದು ಕಾಂಗ್ರೆಸ್ಗೆ ಬಂದಿದ್ದೇನೆ. ಸಾರ್ವಜನಿಕ ಬದುಕಿನಲ್ಲಿ ಸ್ವಲ್ಪ ಹೆಸರು ಮಾಡಿ ಉಳಿಸಿಕೊಳ್ಳಬೇಕು. ನಾನು ಕಾಂಗ್ರೆಸ್ ಪಕ್ಷಕ್ಕೆ ಅಭಾರಿಯಾಗಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ನನ್ನ ಮುಂದಿನ ಸಾರ್ವಜನಿಕ ಬದುಕು ನಡೆಸುತ್ತೇನೆ ಎಂದು ತಿಳಿಸಿದರು.
ಕನಿಷ್ಠ 20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು: ಮುದ್ದಹನುಮೇಗೌಡ ಸೇರ್ಪಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 20 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತದೆ. ಯಾರು ಏನೇ ಹೇಳಿದರೂ ನಾವು ನೂರಕ್ಕೆ ನೂರು ಗೆಲ್ಲುತ್ತೇವೆ. ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ, ಅದನ್ನು ಮರೆತು ಒಗ್ಗಟ್ಟಿನಿಂದ ಗೆಲ್ಲಲೇಬೇಕು ಎಂಬ ಛಲದಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಮುದ್ದುಹನುಮೇಗೌಡರು ಮೂಲತಃ ಕಾಂಗ್ರೆಸ್ನವರು. ಕಳೆದ ವಿಧಾನಸಭೆಗೂ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ತಪ್ಪಿನ ಅರಿವಾಗಿ ಪಕ್ಷಕ್ಕೆ ಮರಳಿ ಸೇರ್ಪಡೆಯಾಗಿದ್ದಾರೆ. ತಪ್ಪು ಮಾಡಿದ್ದೇನೆ, ಕ್ಷಮೆ ಇರಲಿ ಎಂದು ಅವರು ಹೇಳಿದ್ದಾರೆ. ತಪ್ಪು ಮಾಡಿದ ಮೇಲೆ ಪಶ್ಚಾತ್ತಾಪ ಮುಖ್ಯ. ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ. ಪಕ್ಷಕ್ಕೆ ಯಾರೇ ಬಂದರೂ, ಬೇರೆ ನಮ್ಮ ಪಕ್ಷದವರನ್ನೂ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ಎಲ್ಲ ಜಿಲ್ಲೆಯ ಮುಖಂಡರೆಲ್ಲರೂ ಸೇರಿ ಅವರನ್ನು ಸೇರಿಸಿಕೊಳ್ಳಲು ಒಪ್ಪಿದ್ದಾರೆ ಎಂದು ಸಿಎಂ ತಿಳಿಸಿದರು.
ಷರತ್ತು ಇಲ್ಲದೇ ಪಕ್ಷ ಸೇರ್ಪಡೆ: ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಮುದ್ದಹನುಮೇಗೌಡರು ಇಂದು ಯಾವುದೇ ಷರತ್ತು ಹಾಕದೇ ಪಕ್ಷಕ್ಕೆ ಸೇರಿದ್ದಾರೆ. ನಾವು ಯಾರಿಗೆ ಟಿಕೆಟ್ ನೀಡುತ್ತೇವೋ ಅವರ ಪರವಾಗಿ ಕೆಲಸ ಮಾಡಬೇಕು. ಇದು ಕಾಂಗ್ರೆಸ್ ಪಕ್ಷದ ಶಿಸ್ತು. ಮುದ್ದಹನುಮೇಗೌಡರ ಪಕ್ಷ ಸೇರ್ಪಡೆ ವಿಚಾರವಾಗಿ ರಾಜಣ್ಣ, ವಾಸು ಸೇರಿದಂತೆ ಜಿಲ್ಲೆಯ ಎಲ್ಲ ನಾಯಕರು ನಮ್ಮ ಜತೆ ಚರ್ಚೆ ಮಾಡಿ ಈ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಕೇವಲ ಈ ಐದು ವರ್ಷ ಮಾತ್ರವಲ್ಲ. ಮುಂದಿನ ಐದು ವರ್ಷಕ್ಕೂ ನಿಮ್ಮದೇ ಸರ್ಕಾರ ಅಧಿಕಾರದಲ್ಲಿರಲಿದೆ. ರಾಜಕಾರಣ ಹೇಗೆ ಮಾಡಬೇಕು ಎಂದು ಗೊತ್ತಿದೆ. ನೀವು ಧೈರ್ಯವಾಗಿರಿ. ನೀವು ಲೋಕಸಭೆ ಚುನಾವಣೆ ಬಗ್ಗೆ ಗಮನಹರಿಸಿ. ನೀವೆಲ್ಲರೂ ಪ್ರತಿ ಬೂತ್ನಲ್ಲಿ ಜನರನ್ನು ಸಂಪಾದಿಸಬೇಕು. ಬೂತ್ಗಳಲ್ಲಿ ನಮಗೆ ಮುನ್ನಡೆ ತಂದುಕೊಡುವವರೇ ನಮ್ಮ ನಾಯಕರು. ನಮ್ಮ ಪಕ್ಷಕ್ಕೆ ಮಾಜಿ ಶಾಸಕ ಗೌರಿಶಂಕರ್ ಅವರನ್ನು ಸೇರಿಸಿಕೊಂಡಿದ್ದೇವೆ. ತುಮಕೂರು ಜಿಲ್ಲೆಯಲ್ಲಿ ಅನೇಕರು ನಮ್ಮ ಪಕ್ಷ ಸೇರಲು ಉತ್ಸುಕರಾಗಿದ್ದಾರೆ. ನೀವೆಲ್ಲರೂ ಸೇರಿ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ವಾರದೊಳಗೆ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸಚಿವ ಸತೀಶ್ ಜಾರಕಿಹೊಳಿ