ಬೆಂಗಳೂರು : ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಬಿಜೆಪಿಯಿಂದಲೇ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಬಿಜೆಪಿಯಿಂದಲೇ ಪುತ್ರನನ್ನು ರಾಜಕೀಯಕ್ಕೆ ತರುತ್ತೇನೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಈಗಾಗಲೇ ಕಾಂಗ್ರೆಸ್ನಲ್ಲಿ 40 ವರ್ಷ ರಾಜಕಾರಣ ಮಾಡಿ ಬಿಜೆಪಿಗೆ ಬಂದಿದ್ದೇನೆ. ಬಿಜೆಪಿಗೆ ಬಂದ ನಂತರ ನಡೆದ ಉಪ ಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆ ಸೇರಿ ಎರಡು ಬಾರಿ ಸೋತಿದ್ದೇನೆ. ಆದರೆ ಯಾವ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ಬಿಜೆಪಿ ಬಿಡುತ್ತೇನೆ ಎನ್ನುವುದು ಕೇವಲ ವದಂತಿಯಷ್ಟೆ. ನಾನು ಇಲ್ಲೇ ಇದ್ದು, ಬಿಜೆಪಿಯಿಂದಲೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಮಗ ನಿತಿನ್ ಪುರುಷೋತ್ತಮ್ನನ್ನ ರಾಜಕೀಯಕ್ಕೆ ತರುವ ಉದ್ದೇಶ ಇದೆ. ಬಿಜೆಪಿಯಿಂದಲೇ ಅವನನ್ನ ರಾಜಕೀಯಕ್ಕೆ ತರುತ್ತೇನೆ ಎಂದರು.
ಬಿಜೆಪಿಯಲ್ಲಿ ಕುರುಬರಿಗೆ ಟಿಕೆಟ್ ಕೊಡದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಎಂಟಿಬಿ ನಾಗರಾಜ್, ನಾವೆಲ್ಲಾ ಸೇರಿ ಸುಧಾಕರ್‌ಗೆ ಟಿಕೆಟ್ ಕೊಡಿ ಅಂತ ಒಮ್ಮತದ ಅಭಿಪ್ರಾಯ ಹೇಳಿದ್ದೆವು. ನಾನು ಮೊದಲು ಟಿಕೆಟ್ ಕೇಳಿದ್ದೆ. ಹೈಕಮಾಂಡ್ ಲಿಸ್ಟಲ್ಲಿ ನಾನೇ ಮೊದಲು ಇದ್ದೆ. ಆದರೆ ಆರೋಗ್ಯದ ದೃಷ್ಟಿಯಿಂದ ನಾನು ಸ್ಪರ್ಧೆ ಮಾಡಲಿಲ್ಲ. ಈಶ್ವರಪ್ಪ ತಮ್ಮ ಮಗನಿಗೆ ಕೇಳಿದ್ದರು. ಕಾರಣಾಂತರಗಳಿಂದ ಅವರಿಗೆ ಟಿಕೆಟ್ ಕೊಡಲಿಲ್ಲ. ಅದು ಹೈಕಮಾಂಡ್ ನಿರ್ಧಾರವಾಗಿದೆ. ನಾನು ವಿಧಾನಪರಿಷತ್ ಸದಸ್ಯ ಆಗಿದ್ದೇನೆ. ಕುಷ್ಟಗಿಯಲ್ಲಿ ನಮ್ಮ ಸಮುದಾಯದ ಒಬ್ಬ ಎಂಎಲ್‌ಎ ಇದ್ದಾರೆ ಎಂದು ಸ್ಪಷ್ಟಪಡಿಸಿದರು.
ಈ ದೇಶಕ್ಕೆ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕು. ದೇಶಕ್ಕೆ ಸಮರ್ಥ ನಾಯಕ ಬೇಕು. ಜಾತಿ, ಮತ, ಧರ್ಮಾತೀತವಾಗಿ ಮತದಾರರು ಈ ಬಾರಿ ಮತ ಹಾಕುತ್ತಾರೆ. ದೇಶಕ್ಕೆ ಸುರಕ್ಷತೆ ಬೇಕು, ಸುಭದ್ರತೆ ಬೇಕು. ಮೋದಿ ಅವರು ದೇಶಕ್ಕೆ ಸೂಕ್ತ ಪ್ರಧಾನಿ. ಎದುರು ಪಕ್ಷದಲ್ಲಿ ಯಾರು ಇದ್ದಾರೆ ತಿಳಿಸಿ ನೋಡೋಣ. ಎಲ್ಲ ಎಜುಕೇಟೆಡ್‌ಗೆ ಗೊತ್ತು, ಯಾರು ಪ್ರಧಾನಿ ಆಗಬೇಕು ಅಂತ. ಜನತೆಯಲ್ಲಿ ಸ್ಪಷ್ಟತೆ ಇದೆ. ಈ ದೇಶದಲ್ಲಿ ಮೂರು ಬಾರಿ ಮುಖ್ಯಮಂತ್ರಿ, ಮೂರು ಬಾರಿ ಪ್ರಧಾನಿ ಆಗಿರೋ ದಾಖಲೆ ಇದೆಯಾ? ಯಾರಾದರೂ ತೋರಿಸಿ. ನೆಹರು ಅವರು ಮೂರು ಬಾರಿ, ಇಂದಿರಾ ಗಾಂಧಿ ಮೂರು ಬಾರಿ ಪ್ರಧಾನಿ ಆಗಿದ್ದರು. ಈಗ ಮೋದಿ ಅವರು ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಈಶ್ವರಪ್ಪ ಕುರಿತ ಪ್ರಶ್ನೆಗೆ ಎಂಟಿಬಿ ಉತ್ತರಿಸಿದ್ದು ಹೀಗೆ; ಈಶ್ವರಪ್ಪ ಅಸಮಾಧಾನದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಅವರು ಆರ್.ಎಸ್.ಎಸ್ ಹಿನ್ನಲೆಯಿಂದ ಬಂದವರು. ಬಿಜೆಪಿಯಲ್ಲಿ ಎಲ್ಲ ಅಧಿಕಾರ ಅನುಭವಿಸಿದ್ದಾರೆ. ಈ ಚುನಾವಣೆಯಲ್ಲಿ ಅವಕಾಶ ತಪ್ಪಿದೆ ಅನ್ನೋ ಬೇಸರ ಇದೆ. ಯಡಿಯೂರಪ್ಪ ಆಗಲಿ, ಬೇರೆಯವರಾಗಲಿ ತಪ್ಪಿಸಿಲ್ಲ. ಅದು ಪಾರ್ಲಿಮೆಂಟರಿ ಬೋರ್ಡ್ ನಿರ್ಧಾರ. ಅವರಿಗೆ ಅವಕಾಶ ತಪ್ಪಿದೆ. ಹಾಗಾಗಿ ಬೇಸರ ಇದೆ. ನಾನು ಈಶ್ವರಪ್ಪ ಅವರಿಗೆ ಮನವಿ ಮಾಡಿದೆ. ಆದರೆ ಅವರು ಈಗಾಗಲೇ ನಾನು ನನ್ನ ನಿರ್ಧಾರ ತೆಗೆದುಕೊಂಡಿದ್ದೇನೆ ಸುಮ್ಮನಿರಪ್ಪ ಅಂದರು. ಆಯ್ತು ಅಂತ ಬಿಟ್ಟೆ. ನಾನು, ಈಶ್ವರಪ್ಪ ಸಮಕಾಲೀನ ರಾಜಕಾರಣಿಗಳು. ನಲವತ್ತು ವರ್ಷಗಳ ಕಾಲ ರಾಜಕಾರಣ ಮಾಡಿದ್ದೇನೆ ಎಂದರು.
ಈಶ್ವರಪ್ಪ ಬಳಿಕ ಕುರುಬ ನಾಯಕ ಯಾರು ಅನ್ನೋ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಎಂಟಿಬಿ ನಾಗರಾಜ್, ನಾನಿದ್ದೇನೆ. ನನ್ನ ಮಗನನ್ನ ತರ್ತೀನಿ. ಬೈರತಿ ಬಸವರಾಜ್ ಇದ್ದಾರೆ. ಈಗ ಪ್ರಜಾಪ್ರಭುತ್ವ ಮೊದಲಿನಂತೆ ಇಲ್ಲ. ಈಗ ಎಲ್ಲವೂ ಬದಲಾಗಿದೆ. ನನ್ನನ್ನೂ ಸೇರಿದಂತೆ ಹೇಳುತ್ತಿದ್ದೇನೆ ಎಂದು ವಂಶಪಾರಂಪರ್ಯ ರಾಜಕಾರಣವನ್ನು ಸಮರ್ಥಿಸಿಕೊಂಡರು.
ಪ್ರಜ್ವಲ್ ರೇವಣ್ಣ ವಿಚಾರವನ್ನು ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ನೀಡಿದ್ದಾರೆ. ರೇವಣ್ಣ ಅವರ ಬಂಧಿಸಿ ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಸ್ತ್ರೀಯರಿಗೆ ಬೆದರಿಕೆ ಯಾರೂ ಹಾಕಬಾರದು. ಯಾರೇ ಮಾಡಿದರೂ ಕಾನೂನು ರೀತಿ ಕ್ರಮ ಆಗಬೇಕು. ಕಾನೂನು ಕ್ರಮ ಆಗದಿದ್ದರೆ ಮುಂದೆ ಹೆಣ್ಣು ಮಕ್ಕಳಿಗೆ ಭದ್ರತೆ ಇರಲ್ಲ. ದೇವೇಗೌಡರು, ಕುಮಾರಸ್ವಾಮಿ ಇಬ್ಬರೂ ಅದನ್ನೇ ಹೇಳಿದ್ದಾರೆ. ರಾಜ್ಯದಲ್ಲಿ ಪೊಲೀಸ್ ಇದೆ. ಇಂಟಲಿಜೆನ್ಸಿ ಇದೆ. ಏರ್ಪೋರ್ಟ್ನಲ್ಲಿ ಪೊಲೀಸರೇ ಇದ್ದಾರೆ. ಆದರೂ ಪ್ರಜ್ವಲ್ ವಿದೇಶಕ್ಕೆ ಹೋಗುವುದನ್ನು ಏಕೆ ತಡೆಯಲಿಲ್ಲ. ಈ ಕೃತ್ಯವನ್ನ ನೂರಕ್ಕೆ ನೂರು ಖಂಡಿಸುತ್ತೇನೆ ಎಂದರು.
ಚುನಾವಣೆ ನಂತರ ಹೆಚ್ಡಿಕೆ ಪೆನ್ ಡ್ರೈವ್ ರಿಲೀಸ್ ಮಾಡಬಹುದು: ಪೆನ್‌ಡ್ರೈವ್ ಬಹಿರಂಗ ಹಿಂದೆ ಮಹಾ ನಾಯಕ ಇದ್ದಾರೆಂಬ ಕುಮಾರಸ್ವಾಮಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಎಂಟಿಬಿ, ಇದ್ದರೂ ಇರಬಹುದು. ಕುಮಾರಸ್ವಾಮಿ ಹೇಳಿದ್ದಾರೆ ಅಂದರೆ ಅದು ಸತ್ಯವೇ ಇರಬಹುದು. ಕುಮಾರಸ್ವಾಮಿ ಅವರೂ ಒಂದು ಪೆನ್‌ಡ್ರೈವ್ ಅಧಿವೇಶನದ ವೇಳೆ ತೋರಿಸಿದ್ದರು. ಅವರು ಅದನ್ನು ಚುನಾವಣೆ ನಂತರ ರಿಲೀಸ್ ಮಾಡಬಹುದು ಎಂದು ಹೇಳಿದರು.
ಲೋಕಸಭೆ ನಂತರ ಸರ್ಕಾರ ಬೀಳುತ್ತೆ ಎಂಬ ಕುಮಾರಸ್ವಾಮಿ, ವಿಜಯೇಂದ್ರ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಎಂಟಿಬಿ, ಅವರು ಹಾಗೆ ಹೇಳುತ್ತಿದ್ದಾರೆ ಅಂದರೆ ಅವರಿಗೆ ಏನೋ ಮಾಹಿತಿ ಇರಬಹುದು. ಲೋಕಸಭೆ ಫಲಿತಾಂಶದ ಮೇಲೆ ಎಲ್ಲ ನಿಂತಿದೆ. ಏನಾಗುತ್ತದೋ ನೋಡೋಣ. ಕಾಂಗ್ರೆಸ್ನಲ್ಲೂ ಎಲ್ಲರೂ ಸಮಾಧಾನದಲ್ಲಿ ಇಲ್ಲ. ಅವರವರಲ್ಲೇ ಕಿತ್ತಾಟ ಇದೆ. ಆದರೂ 135 ಸ್ಥಾನ ಬಂದು, ಗ್ಯಾರಂಟಿ ಹೆಸರಲ್ಲಿ ಸರ್ಕಾರ ನಡೆಯುತ್ತಿದೆ ಎಂದರು.
ಸರ್ಕಾರ ಹೇಗೆ ಬೀಳಲು ಸಾಧ್ಯ ಎನ್ನುವ ಚರ್ಚೆಯೂ ಇದೆ. ಚುನಾವಣೆ ಬಳಿಕ ಒಬ್ಬರ ಅಧಿಕಾರ ಬದಲಾಗುತ್ತದೆ ಅಂತ ಸಚಿವರು ಹೇಳ್ತಾರೆ. ಡಿ ಕೆ ಶಿವಕುಮಾರ್ ಸಿಎಂ ಆಗ್ತಾರೆ ಅಂತಾರೆ. ಯಾವುದೆಲ್ಲಾ ಆಗುತ್ತದೆ ಅಂತ ಗೊತ್ತಾಗುತ್ತದೆ. ಈಗ ಯಾವುದೇ ಪಕ್ಷದಲ್ಲೂ ತತ್ವ, ಸಿದ್ಧಾಂತ ಇಲ್ಲ. ಎಲ್ಲರಿಗೂ ಅಧಿಕಾರ ಬೇಕು. ಎಲ್ಲರೂ ಅಧಿಕಾರ ಹಿಡಿಯಬೇಕು. ಎಲ್ಲವನ್ನೂ ಖರೀದಿ ಮಾಡಬೇಕು ಅಷ್ಟೇ ಎಂದು ಹೇಳಿದರು.
ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿ ನಮ್ಮ ಹೊಸಕೋಟೆ ಕ್ಷೇತ್ರದ ಬೂತ್‌ಗಳಲ್ಲಿ ಗಲಾಟೆ ಆಗಿದೆ. ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಎಫ್ಐಆರ್ ಆಗಿದೆ. ಮೊದಲ ಬಾರಿ ಸ್ಪರ್ಧೆ ಮಾಡಿದಾಗ, 2004ರಲ್ಲಿ ಆ ಕ್ಷೇತ್ರದಲ್ಲಿ ಗಲಾಟೆ ಆಗಿತ್ತು. ನಮ್ಮ ಕ್ಷೇತ್ರ ಒಂದು ರೀತಿ ಬಿಹಾರದ ರೀತಿ. ಯಾರೂ ಕೂಡ ಬೂತ್ ಏಜೆಂಟ್ ಆಗಿ ಕೂರಲು ಬರುತ್ತಿರಲಿಲ್ಲ. ಮೊನ್ನೆ ನಡೆದ ಚುನಾವಣೆಯಲ್ಲಿ ಬೂತ್ ನಂ 23 ಬೆಂಡಗಾನಹಳ್ಳಿಯಲ್ಲಿ ಯಾರೂ ಬೂತ್ ಏಜೆಂಟ್ ಆಗಿ ಕೂರುತ್ತಿರಲಿಲ್ಲ.
ಈಗ ಮೊನ್ನೆ ಕೂತಿದ್ದರು. ಆಗ ಓಟ್ ಲೀಸ್ಟ್ ನಲ್ಲಿ ಹೆಸರು ಇಲ್ಲದವರೂ ಓಟ್ ಹಾಕಲು ಹೋಗಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ನಂತರ ಚುನಾವಣಾ ಅಧಿಕಾರಿಗಳು ಪರಿಶೀಲಿಸಿದಾಗ ಮತ ಹಾಕಲು ಬಂದಿದ್ದ ವ್ಯಕ್ತಿ ಪಟ್ಟಿಯಲ್ಲಿರುವ ವ್ಯಕ್ತಿ ಅಲ್ಲ ಅಂತ ಸ್ಪಷ್ಟವಾಗಿದೆ. ಆಗ ಬೇಕಂತಲೇ ಅಲ್ಲಿ ಗಲಾಟೆ ಮಾಡಿ, ಹಲ್ಲೆ ಮಾಡಿದ್ದಾರೆ. ನಾನು ಎಸ್ಪಿ ಅವರಿಗೆ ಕರೆ ಮಾಡಿ ತಿಳಿಸಿದಾಗ, ರಿಸರ್ವ್ ವ್ಯಾನ್ ಮೂಲಕ ಭದ್ರತೆ ನೀಡಿದ್ದರು. ಬಳಿಕ ಏಜೆಂಟ್ಗಳನ್ನ ಪೊಲೀಸ್ ವಾಹನದಲ್ಲಿ ಮನೆಗೆ ಬಿಡಲಾಗಿದೆ. ಚುನಾವಣಾ ಅಕ್ರಮ ಆಗಿದೆ.
ಆಯೋಗ, ರಾಜ್ಯಪಾಲರಿಗೆ ದೂರು: ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ರಾಜ್ಯಪಾಲರಿಗೂ ದೂರು ನೀಡಿದ್ದೇವೆ. ಸೂಕ್ತ ತನಿಖೆ ನಡೆಯಬೇಕು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅಕ್ರಮ ನಡೆಯುತ್ತಿದೆ. ಅದನ್ನ ತಡೆಯುವ ಕೆಲಸ ಆಗುತ್ತಿಲ್ಲ. ಸ್ಥಳೀಯ ಶಾಸಕ ಶರತ್ ಬಚ್ಚೇಗೌಡ ಹಾಗೂ ಅವರ ಸಂಬಂಧಿಕರು ಹಲ್ಲೆ ಮಾಡಿಸಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ವಿರುದ್ಧ ನೇರ ಆರೋಪ ಮಾಡಿದರು.
ಹಲವರ ಹೆಸರನ್ನ ಓದಿ ಹೇಳಿದ ಎಂಟಿಬಿ ನಾಗರಾಜ್, ಸಿಸಿ ಕ್ಯಾಮೆರಾ ವಿಡಿಯೋ ಫೂಟೇಜ್ ಪಡೆದು ತನಿಖೆ ಮಾಡಬೇಕು. ವೋಟ್ ಹಾಕಲು ಬಂದಂತ ಸಂದರ್ಭದಲ್ಲಿ ಈ ಗಲಾಟೆ ಆಗಿದೆ. ಈ ರೀತಿ ಘಟನೆ ನಡೆದಿರುವ ಬಗ್ಗೆ ತನಿಖೆ ಆಗಬೇಕು.ಮತ್ತೆ ಈ ರೀತಿ ಘಟನೆ ಮರುಕಳಿಸಬಾರದು. ನಕಲಿ ವೋಟ್ ಹಾಕೋದನ್ನ ತಡೆಯಲು ಮುಂದಾಗಿದ್ದಕ್ಕೆ ಗಲಾಟೆ ಆಗಿದೆ. ಸತ್ತವರ ಓಟು ಹಾಗೂ ಬೇರೆಯವರ ಓಟ್ ಹಾಕಲು ಬಂದಿದ್ದವರನ್ನ ತಡೆದಿದ್ದಕ್ಕೆ ಗಲಾಟೆ ಆಗಿದೆ. ಈ ವಿಚಾರದಲ್ಲಿ ತನಿಖೆ ಅಗತ್ಯ ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾನ ಚೆನ್ನಾಗಿ ನಡೆದಿದೆ. ಚುನಾವಣೆಯಲ್ಲಿ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ ಸುಧಾಕರ್ ಗೆಲ್ಲೋದು 100% ನಿಶ್ಚಿತ. ಹೊಸಕೋಟೆಯಲ್ಲಿ 5 ಸಾವಿರ ಬಿಜೆಪಿ ಲೀಡ್ ಬರಬಹುದು ಅಥವಾ ಸಮ ಬರಬಹುದು. ದೇವನಹಳ್ಳಿ, ಚಿಕ್ಕಬಳ್ಳಾಪುರ, ಯಲಹಂಕ, ಗೌರಿ ಬಿದನೂರು, ದೊಡ್ಡಬಳ್ಳಾಪುರ ಎಲ್ಲೆಡೆ ಬಿಜೆಪಿಗೆ ಲೀಡ್ ಬರಲಿದೆ. ಕ್ಷೇತ್ರದಲ್ಲಿ ಯಲಹಂಕ ಶಾಸಕ ಎಸ್. ಆರ್ ವಿಶ್ವನಾಥ್ ಅಸಮಾಧಾನ ವಿಚಾರ ಇತ್ತು. ಆದರೆ ಓಟ್ ಹಾಕೋರು ಮತದಾರ. ಅದನ್ನ ಯಾರೂ ತಡೆಯೋಕೆ ಆಗಲ್ಲ. ನಮ್ಮ ಅಭ್ಯರ್ಥಿ ಸುಧಾಕರ್ ಒಂದೂವರೆ ಲಕ್ಷ ಮತಗಳಿಂದ ಗೆಲ್ಲುತ್ತಾರೆ ಎಂದರು.
ವಕೀಲ ಲೋಕೇಶ್ ಮಾತನಾಡಿ, ಗಣೇಶ್ ಬಿ. ಎಸ್ ಅನ್ನೋರು ಬೆಂಡಿಗಾನಹಳ್ಳಿ ಬೂತ್ ನಂ 23ರ ಏಜೆಂಟ್ ಆಗಿದ್ದರು. ಇಂದು ಗಣೇಶ್ ಅವರೇ ಬರಬೇಕಿತ್ತು. ಆದರೆ ಅವರು ಬರದಂತೆ ತಡೆದಿದ್ದಾರೆ. ಅವರ ಪರವಾಗಿ ನಾನು ಹೇಳುತ್ತಿದ್ದೇನೆ. ಬೂತ್ ಏಜೆಂಟ್ ಆಗಿ ಕೂರದಂತೆ ಅವರನ್ನು ತಡೀತಾರೆ. ಉದ್ದೇಶ ನಕಲಿ ಮತದಾನ ಮಾಡಿಸಬೇಕು ಎನ್ನುವುದಾಗಿತ್ತು. ಬೂತ್ ಏಜೆಂಟ್ ಆಗಿ ಕೂರೋಕೆ ಬಂದಾಗ ಗಲಾಟೆ ಮಾಡಿದ್ದಾರೆ. 23ರ ಮತಗಟ್ಟೆಗೆ ಸಂಬಂಧ ಇಲ್ಲದವರು ಬಂದು ಮತ ಹಾಕಲು ಬಂದಿದ್ದಾರೆ.
ಬೂತ್ ಏಜೆಂಟ್ ಕೂರೋದು ಮತದಾರರ ಗುರುತು ಮಾಡೋಕೆ. ನಕಲಿ ಮತದಾರ ಅಂತ ಗಣೇಶ್ ತಡೆದಿದ್ದಾರೆ. ಚಾಲೆಂಜ್ ವೋಟ್ ಮಾಡಲು ಮುಂದಾಗಿದ್ದಾರೆ. ಆಗ ವೋಟರ್, ಆಧಾರ್ ಚೆಕ್ ಮಾಡಿದ್ದಾರೆ. ಅವರು ಅಲ್ಲ ಅಂತ ಗೊತ್ತಾದ ಬಳಿಕ ವಾಪಸ್ ಕಳುಹಿಸಿದ್ದಾರೆ. ಇದರಿಂದ ಮತಗಟ್ಟೆ ಬಳಿ ಗಲಾಟೆ ಮಾಡಿದ್ದಾರೆ. ಪೊಲೀಸರು ಗಲಾಟೆ ವೇಳೆ ಮಧ್ಯಪ್ರವೇಶ ಮಾಡಿದ್ದಾರೆ. ಅವರೇ ಸೊಮೋಟೋ ಕೇಸ್ ಹಾಕಿಕೊಳ್ಳಬಹುದಿತ್ತು. ಆದರೆ ಹಾಕಿಕೊಂಡಿಲ್ಲ. ತನಿಖೆ ನಡೆಯಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ : ಲೋಕಸಭಾ ಚುನಾವಣೆ ವಿಚಾರ: ಎಂಟಿಬಿ ನಾಗರಾಜ್ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ