ದಾವಣಗೆರೆ: ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಬಂಡಾಯ ಅಭ್ಯರ್ಥಿಯಾಗಿ ಜಿ.ಬಿ. ವಿನಯ್ ಕುಮಾರ್ ಸ್ಪರ್ಧೆ ಮಾಡುತ್ತಿರುವುದು ಕೈ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ಗೆ ತಲೆನೋವು ತಂದಿದೆ. ಈ ಬೆಳವಣಿಗೆ ನಡುವೆ ಇಂದು ಮಾಜಿ ಸಚಿವ ಹೆಚ್.ಎಂ. ರೇವಣ್ಣ ನೇತೃತ್ವದ ಕಾಂಗ್ರೆಸ್ ನಿಯೋಗ ವಿನಯ್ ಕುಮಾರ್ ಅವರ ದಾವಣಗೆರೆಯ ನಿವಾಸಕ್ಕೆ ಭೇಟಿ ನೀಡಿ ಬಂಡಾಯ ಶಮನಕ್ಕೆ ಪ್ರಯತ್ನ ನಡೆಸಿದರೂ ಅದು ಸಫಲವಾಗಿಲ್ಲ.
ಈ ಕುರಿತು ಮಾಜಿ ಸಚಿವ ಹೆಚ್.ಎಂ. ರೇವಣ್ಣ ಈಟಿವಿ ಭಾರತ್ ಜೊತೆಗೆ ಮಾತನಾಡಿ, ಜಿ.ಬಿ. ವಿನಯ್ ಕುಮಾರ್ ತಮ್ಮ ಅಕ್ಕ - ಪಕ್ಕದವರ ಮಾತು ನಂಬಿ ಮೋಸ ಹೋಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಕಾಗಿನೆಲೆ ಶ್ರೀಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಸಭೆ ಮಾಡಿ ಅವರ ಮನವೊಲಿಸಿದ್ದರು, ಆಗ ಒಪ್ಪಿಗೆ ಸೂಚಿಸಿ, ಈಗ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದು ಸರಿಯಲ್ಲ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ನಮ್ಮ ಸಮಾಜಕ್ಕೂ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಸ್ಪರ್ಧೆ ಮಾಡಬೇಡ ಎಂದು ಮನವಿ ಮಾಡಿದರೂ ಆತ ನಮ್ಮ ಮಾತು ಕೇಳುತ್ತಿಲ್ಲ. ಯಾವ ಆಧಾರದ ಮೇಲೆ ಚುನಾವಣೆಗೆ ನಿಲ್ಲುತ್ತಿದ್ದಾರೆ ಅನ್ನೋದು ಗೊತ್ತಿಲ್ಲ. ನಾನು ನಮ್ಮ ಸಮಾಜ ಮತ್ತು ಅಹಿಂದ ವೋಟ್ಗಳನ್ನು ನಂಬಿಗೊಂಡಿದ್ದೇನೆ ಎಂದು ವಿನಯ್ ಹೇಳುತ್ತಿದ್ದಾರೆ ಎಂದರು.
ಜಿ.ಬಿ.ವಿನಯ್ ಕುಮಾರ್ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವ ಯಾವಾಗ ತೆಗೆದುಕೊಂಡಿದ್ದಾರೆ ಗೊತ್ತ?. ಎಷ್ಟು ವರ್ಷ ಕಾಂಗ್ರೆಸ್ ಪಕ್ಷಕ್ಕೆ ದುಡ್ಡಿದಿದ್ದಾರೆ. ಅವರು ಗ್ರೌಂಡ್ ಲೆವೆಲ್ನಿಂದ ಬಂದಿದ್ದಾರಾ ಎಂದು ಅವರಿಗೆ ಕೇಳಿ. ಅವರು ಕೆಲವು ದಿನಗಳಿಂದೀಚೆಗೆ ನಾನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದರು. ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರು ಕೊಡ ಇತ್ತು. ನಾನು ಸೆಲೆಕ್ಷನ್ ಕಮಿಟಿಯಲ್ಲಿ ಇದ್ದೆ. ಜಾತಿ ಸಮೀಕರಣ ನೋಡಿ ಟಿಕೆಟ್ ಕೊಡುವಾಗ ವ್ಯತ್ಯಾಸವಾಗಿದೆ. ನಾವು ಅವರಿಗೆ ಟಿಕೆಟ್ ಕೊಡಬೇಕು ಎಂದುಕೊಂಡಿದ್ದೆವು. ಆದರೆ ಈಗ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಇದರ ಪರಿಣಾಮವನ್ನು ಅವರು ಅನುಭವಿಸುತ್ತಾರೆ ಎಂದು ಹೇಳಿದರು.
ವಿನಯ್ ಕುಮಾರ್ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಬಗ್ಗೆ ಪ್ರತಿಕ್ರಿಯಿಸಿ, ಇದರ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. ಇನ್ನೂ ನಾಮಪತ್ರ ವಾಪಸ್ ಪಡೆಯಲು ಅವಕಾಶ ಇದೆ ಎಂದರು.