ಶಿವಮೊಗ್ಗ: ಭದ್ರಾವತಿ ತಾಲೂಕು ಮಾವಿನಕೆರೆ, ಶಿವಪುರ ಗ್ರಾಮ ಹಾಗೂ ಅಡ್ಲಘಟ್ಟ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಇಲಾಖೆ ಇಟ್ಟಿದ್ದ ಬೋನ್ಗೆ ಚಿರತೆ ಶುಕ್ರವಾರ ಬಿದ್ದಿದ್ದು, ಇದೀಗ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಅರಣ್ಯ ಇಲಾಖೆಯು ಅಡ್ಲಘಟ್ಟ ಗ್ರಾಮದ ಹೊರ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಸೆರೆಗೆ ಬೋನ್ ಇಟ್ಟಿದ್ದರು.
ಮಾವಿನಕೆರೆ, ಮಾವಿನಕೆರೆ ಕಾಲೋನಿ, ಶಿವಪುರ ಹಾಗೂ ಅಡ್ಲಘಟ್ಟ ಗ್ರಾಮಗಳು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮಗಳಾಗಿವೆ. ಇದರಿಂದ ಈ ಭಾಗದಲ್ಲಿ ಚಿರತೆಗಳ ಕಾಟ ಹೆಚ್ಚಿದೆ. ಕಳೆದ 6 ತಿಂಗಳುಗಳಿಂದ ಚಿರತೆಯು ಗ್ರಾಮದ ನಾಯಿಗಳನ್ನು ಬಲಿ ಪಡೆಯುತ್ತಿತ್ತು. ನಾಯಿಗಳು ಖಾಲಿಯಾದ ನಂತರ ಕರುಗಳನ್ನು ತಿನ್ನಲು ಪ್ರಾರಂಭಿಸಿತ್ತು. ಅಲ್ಲದೆ, ಕೊಟ್ಟಿಗೆಯಲ್ಲಿದ್ದ ಜಾನುವಾರುಗಳನ್ನು ಸಹ ಬೇಟೆಯಾಡಿತ್ತು. ಇದು ಇಲ್ಲಿನ ಜನರಲ್ಲಿ ಜೀವ ಭಯವನ್ನುಂಟು ಮಾಡಿತ್ತು.
ಭದ್ರಾವತಿ ಅರಣ್ಯ ವಿಭಾಗದ ಡಿಎಫ್ಓ ದಿನೇಶ್ ಕುಮಾರ್ ಹಾಗೂ ತಂಡ ಕಳೆದ 6 ತಿಂಗಳಿನಿಂದ ಚಿರತೆ ಹಿಡಿಯಲು ಹರಸಾಹಸ ಪಡುತ್ತಿದ್ದರು. ಅರಣ್ಯ ಇಲಾಖೆರವರ ಅದೃಷ್ಟ, ಚಿರತೆಯ ದುರಾದೃಷ್ಟಕ್ಕೆ ಚಿರತೆಯು ಶುಕ್ರವಾರ ಅರಣ್ಯ ಇಲಾಖೆರವರು ಇರಿಸಿದ್ದ ಬೋನ್ಗೆ ಬಿದ್ದಿದೆ. ಸುಮಾರು 6 ವರ್ಷದ ಹೆಣ್ಣು ಚಿರತೆ ಇದಾಗಿದೆ.
ಚಿರತೆ ಸೆರೆ ಹಿಡಿದಿರುವ ಕುರಿತು ಡಿಎಫ್ಓ ದಿನೇಶ್ ಕುಮಾರ್ ಅವರು ಈಟಿವಿ ಭಾರತ್ಗೆ ದೂರವಾಣಿಯಲ್ಲಿ ಮಾಹಿತಿ ನೀಡಿದ್ದು, "ಚಿರತೆ ಕಳೆದ 6 ತಿಂಗಳಿನಿಂದ ನಾಯಿ, ಕರುಗಳು ಹಾಗೂ ಜಾನುವಾರುಗಳನ್ನು ತಿನ್ನುತ್ತಿತ್ತು. ಇವುಗಳಿಗೆ ನಮ್ಮ ಇಲಾಖೆಯಿಂದ ಪರಿಹಾರ ನೀಡಲಾಗಿತ್ತು. ಸಾಕಷ್ಟು ಪ್ರಯತ್ನದ ನಂತರ ಚಿರತೆಯನ್ನು ಸೆರೆ ಹಿಡಿಯಲಾಗಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಬೆಳ್ಳಂಬೆಳಿಗ್ಗೆ ಗಜರಾಜ ಪ್ರತ್ಯಕ್ಷ: ಆತಂಕಗೊಂಡ ಜನರು