ಮಂಗಳೂರು: ದುಬೈ ಮತ್ತು ನೆರೆಯ ಮಧ್ಯಪ್ರಾಚ್ಯ ದೇಶಗಳಲ್ಲಿ ಭಾರಿ ಮಳೆಯ ಪರಿಣಾಮ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಬುಧವಾರ ಮಂಗಳೂರು ಸೇರಿದಂತೆ ದೇಶದ ವಿವಿಧೆಡೆಗಳಿಂದ ವಿಮಾನ ಸಂಚಾರ ರದ್ದು ಮಾಡಲಾಗಿತ್ತು. ಮಂಗಳೂರು - ದುಬೈ ಮಾರ್ಗದ ನಾಲ್ಕು ವಿಮಾನಗಳು ರದ್ದುಗೊಂಡಿದ್ದವು.
ಸಾಮಾನ್ಯವಾಗಿ ಶುಷ್ಕ ಹವಾಮಾನ ಮತ್ತು ಸುಡುಬಿಸಿಲು ಕಂಡುಬರುವ ದುಬೈನಲ್ಲಿ ಮಂಗಳವಾರ ಭಾರಿ ಮಳೆಯಾಗಿದೆ. ದುಬೈ ನಗರವು ಇತಿಹಾಸದಲ್ಲಿ ಅತ್ಯಂತ ಆರ್ದ್ರ ದಿನಕ್ಕೆ ಸಾಕ್ಷಿಯಾಗಿದ್ದು, ಮರುಭೂಮಿ ದೇಶದಲ್ಲಿ ಭೀಕರ ಪ್ರವಾಹ ಉಂಟಾಗಿದೆ. ತಿರುಚಿರಾಪಳ್ಳಿಯಿಂದ ಮಂಗಳೂರು ಮಾರ್ಗದ ಮತ್ತೊಂದು ವಿಮಾನದ ಹಾರಾಟವನ್ನೂ ಸಹ ರದ್ದುಗೊಳಿಸಲಾಗಿದೆ. ಇಲ್ಲಿಂದ ಜೆಡ್ಡಾಕ್ಕೆ ತೆರಳುವ ವಿಮಾನದ ಹಾರಾಟದಲ್ಲಿಯೂ ವಿಳಂಬವಾಗಿದೆ.
ರದ್ದುಗೊಂಡ ವಿಮಾನಗಳು: ಬುಧವಾರ (ಏ.17) IX814 - DXB-IXE, IX 813 IXE-DXB, IX384 DXB-IXE, IX383 IXE - DXB ಹಾಗೂ IX 1499 TRZ-IXE ವಿಮಾನಗಳು ರದ್ದುಗೊಂಡಿದ್ದು, ಗುರುವಾರ IX 814 DXB-IXE ವಿಮಾನ ಸೇವೆ ರದ್ದುಗೊಳಿಸಲಾಗಿದೆ.
ದುಬೈನಿಂದ ಮಂಗಳೂರಿಗೆ ತೆರಳಬೇಕಿದ್ದ ಫ್ಲೈಟ್ ನಂಬರ್ 814, ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ಫ್ಲೈಟ್ ನಂಬರ್ 813, ದುಬೈನಿಂದ ಮಂಗಳೂರಿಗೆ ತೆರಳಬೇಕಿದ್ದ ವಿಮಾನ 384 ಮತ್ತು ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ಫ್ಲೈಟ್ ನಂಬರ್ 383 ಅನ್ನು ರದ್ದುಗೊಳಿಸಲಾಗಿದೆ. ಅದೇ ರೀತಿ ಮಂಗಳೂರಿನಿಂದ ಜಿದ್ದಾಗೆ ತೆರಳುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಹಾರಾಟ ವಿಳಂಬವಾಗಿದೆ.
ಮತ್ತೊಂದೆಡೆ, ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಗುರುವಾರ ರದ್ದುಗೊಳಿಸಲಾಗಿದೆ. ಜೆಡ್ಡಾದಿಂದ ಮಂಗಳೂರಿಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸಂಖ್ಯೆ 796 ಮತ್ತು ಮಂಗಳೂರಿನಿಂದ ತಿರುಚಿರಾಪಳ್ಳಿಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕೂಡಾ ವಿಳಂಬವಾಗಲಿದೆ. ಏಪ್ರಿಲ್ 15 ರ ಮಧ್ಯರಾತ್ರಿಯಿಂದ ದುಬೈನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಜಲಾವೃತವಾಗಿದ್ದು, ವಿಮಾನ ಪ್ರಯಾಣಕ್ಕೆ ಅಡ್ಡಿ ಉಂಟಾಗಿದೆ.
ಹಲವು ವಿಮಾನ ಹಾರಾಟ ರದ್ದು: ಭಾರತೀಯ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ, ಇಂಡಿಗೋ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ದೇಶದ ವಿವಿಧೆಡೆಯಿಂದ ದುಬೈಗೆ ಸೇವೆಯನ್ನು ಸ್ಥಗಿತಗೊಳಿಸಿವೆ. ಅಲ್ಲದೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕೂಡ ಹಲವು ವಿಮಾನಗಳನ್ನು ರದ್ದುಗೊಳಿಸಿದೆ.
ಹಲವಾರು ಪ್ರಯಾಣಿಕರು ದುಬೈಗೆ ತೆರಳುವ ವಿಮಾನಗಳಲ್ಲಿನ ಅಡಚಣೆ ಬಗ್ಗೆ ಎಕ್ಸ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸಂಕಟ ಹಂಚಿಕೊಂಡಿದ್ದಾರೆ. ಇದೇ ವೇಳೆ ವಿಮಾನಯಾನ ಸಂಸ್ಥೆಗಳೂ ವಿಳಂಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಕ್ಷಮೆಯಾಚಿಸಿವೆ. ತ್ವರಿತ ನಿರ್ಗಮನಕ್ಕಾಗಿ ಯತ್ನ ನಡೆಯುತ್ತಿದೆ. ತಕ್ಷಣದ ಸಹಾಯಕ್ಕಾಗಿ, ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ಅಲ್ಲಿನ ಸಿಬ್ಬಂದಿಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.