ಬೆಂಗಳೂರು: ಮೊಬೈಲ್ ಫೋನ್ನಲ್ಲಿ ಖಾಸಗಿ ಪೋಟೋ ಇರುವುದಾಗಿ ಶಂಕಿಸಿದ ಯುವತಿಯೊಬ್ಬಳು, ಮಾಜಿ ಪ್ರಿಯಕರ ತನ್ನೊಂದಿಗೆ ಇರುವಾಗಲೇ ಆತನ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಗುದ್ದಿಸಿ ಆತನ ಮೇಲೆ ಹಲ್ಲೆ ಮಾಡಿಸಿ ಮೊಬೈಲ್ ಸುಲಿಗೆ ಮಾಡಿಸಿರುವ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಠಾಣೆ ಪೊಲೀಸರು ಯುವತಿ ಸೇರಿ ಐವರನ್ನು ಬಂಧಿಸಿದ್ದಾರೆ.
ಮಾಜಿ ಪ್ರಿಯಕರ ವಂಶಿಕೃಷ್ಣ ರೆಡ್ಡಿ ಎಂಬಾತ ನೀಡಿದ ದೂರಿನ ಮೇರೆಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪಿ.ಶ್ರುತಿ (29) ಹಾಗೂ ದೂರುದಾರನ ಮೊಬೈಲ್ ಸುಲಿಗೆ ಮಾಡಲು ಸುಪಾರಿ ಪಡೆದುಕೊಂಡಿದ್ದ ಮನೋಜ್ ಕುಮಾರ್, ಸುರೇಶ್ ಕುಮಾರ್, ಹೊನ್ನಪ್ಪ, ಹಾಗೂ ವೆಂಕಟೇಶ್ ಬಂಧಿತ ಆರೋಪಿಗಳು. ಶ್ರುತಿ ಮನೆಯಲ್ಲಿ ಈ ಹಿಂದೆ ಮನೋಜ್ ಪೈಂಟಿಂಗ್ ಕೆಲಸ ಮಾಡಿದ್ದ. ಇದೇ ಪರಿಚಯದ ಆಧಾರದ ಮೇರೆಗೆ 1.15 ಲಕ್ಷ ರೂಪಾಯಿ ಸುಪಾರಿ ನೀಡಿದ್ದಳು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿಗಳೆಲ್ಲರೂ ಕೊಡತಿ ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು ಪ್ರೀತಿ ಬಳಿಕ ವಿರಸ: ಒಡಿಶಾ ಮೂಲದ ವಂಶಿಕೃಷ್ಣ ನಗರದ ಸಿಂಗಸಂದ್ರದಲ್ಲಿ ವಾಸವಾಗಿದ್ದು, ಕಳೆದ ಎರಡು ವರ್ಷಗಳಿಂದ ಶ್ರುತಿಯನ್ನು ಪ್ರೀತಿಸುತ್ತಿದ್ದ. ಈಕೆಯೂ ಪ್ರೀತಿಯಲ್ಲಿದ್ದಳು. ಮನೆಯವರ ಅನುಮತಿ ಪಡೆದು ಮದುವೆ ಮಾಡಿಕೊಳ್ಳಲು ಇಬ್ಬರು ಮುಂದಾಗಿದ್ದರು. ಈ ಮಧ್ಯೆ ಕೆಲ ವರ್ಷಗಳ ಹಿಂದೆ ಬೇರೆ ಯುವಕನೊಂದಿಗೆ ಸಂಬಂಧ ಇದ್ದ ಬಗ್ಗೆ ಶ್ರುತಿ ಪ್ರಸ್ತಾಪಿಸಿದ್ದಳು. ಇದಕ್ಕೆ ಅಸಮಾಧಾನಗೊಂಡ ದೂರುದಾರ ವಂಶಿಕೃಷ್ಣ, ಯುವತಿಯೊಂದಿಗೆ ಮದುವೆಗೆ ಒಲ್ಲೆ ಎಂದಿದ್ದ. ಇದೇ ವಿಚಾರಕ್ಕಾಗಿ ಇಬ್ಬರು ಜಗಳವಾಡಿ ದೂರವಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆಲ ತಿಂಗಳ ಹಿಂದೆ ಬ್ರೇಕಪ್ ಮಾಡಿಕೊಂಡಿದ್ದ ಯುವತಿಯು ತನ್ನ ಖಾಸಗಿ ಫೋಟೊ ಹಾಗೂ ವಿಡಿಯೋಗಳು ಮಾಜಿ ಪ್ರಿಯಕರನ ಮೊಬೈಲ್ನಲ್ಲಿರುವುದಾಗಿ ಭಾವಿಸಿದ್ದಳು. ಇದರಿಂದ ಮುಂದೆ ತೊಂದರೆಯಾಗಲಿದೆ ಎಂದು ಅರಿತು ಪರಿಚಿತ ಮನೋಜ್ ಕುಮಾರ್ಗೆ ವಂಶಿಕೃಷ್ಣನ ಮೊಬೈಲ್ ಸುಲಿಗೆ ಮಾಡಲು 1.15 ಲಕ್ಷ ಸುಪಾರಿ ನೀಡಿದ್ದಳು. ಇದರಂತೆ ವ್ಯೂಹ ರಚಿಸಿದ ಆರೋಪಿಗಳು ಸೆ.20ರ ಸಂಜೆ 7.30ರ ವೇಳೆ ಶ್ರುತಿ ಜೊತೆಗಿರಬೇಕಾದರೆ ಕಾರಿನಿಂದ ಬಂದು ಆತನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಹಲ್ಲೆ ಮಾಡಿದ್ದರು. ಅಲ್ಲದೇ ಆತ ಬಳಸುತ್ತಿದ್ದ ಮೊಬೈಲ್ ಹಾಗೂ ಮಾಜಿ ಪ್ರಿಯಕರನಿಗೆ ನಂಬಿಕೆ ಬರಿಸಲು ಈಕೆಯ ಮೊಬೈಲ್ ಸಹ ಸುಲಿಗೆಯಾಗುವಂತೆ ನೋಡಿಕೊಂಡಿದ್ದಳು. ಹಲ್ಲೆ ಹಾಗೂ ಸುಲಿಗೆ ಸಂಬಂಧ ದೂರು ನೀಡಿದ ಮೇರೆಗೆ ಬೆಳ್ಳಂದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಸಿಸಿಟಿವಿ ಆಧರಿಸಿ ಆರೋಪಿಗಳ ಬಂಧನ: ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ಆಧರಿಸಿ ಆರೋಪಿಗಳನ್ನು ಬಂಧಿಸಿದಾಗ ಶ್ರುತಿಯತ್ತ ಬೊಟ್ಟು ಮಾಡಿದ್ದರು. ಈಕೆಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿ ಯುವತಿಯ ಕರಾಮತ್ತು ಬಯಲಾಗಿದೆ. ಸುಲಿಗೆ ಮಾಡಿಕೊಂಡಿದ್ದ ಮೊಬೈಲ್ ಪಾಸ್ವರ್ಡ್ ಓಪನ್ ಮಾಡಲಾಗದೆ ನಾಶಪಡಿಸಿ ಸಿಂಗಸಂದ್ರ ಕೆರೆಯಲ್ಲಿ ಎಸೆದಿದ್ದಾರೆ. ಸದ್ಯ ಆರೋಪಿಗಳೆಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಣ್ಣಿಗೆ ಕಾರದ ಪುಡಿ ಎರಚಿ ಸಿನಿಮೀಯ ರೀತಿಯಲ್ಲಿ ದರೋಡೆ: ಹೆಡ್ ಕಾನ್ಸ್ಟೇಬಲ್ ಸೇರಿ ಏಳು ಆರೋಪಿಗಳ ಬಂಧನ - Robbery Case