ಕಾರವಾರ(ಉತ್ತರ ಕನ್ನಡ): ಅರಬ್ಬಿ ಸಮುದ್ರದಲ್ಲಿ ತೂಫಾನ್ ಮುಂದುವರಿದ ಹಿನ್ನಲೆಯಲ್ಲಿ ನಗರದ ಬೈತಖೋಲ್ ಬಂದರು ಹಾಗೂ ಟ್ಯಾಗೋರ್ ಕಡಲತೀರದಲ್ಲಿ ಸ್ಥಳೀಯ ಹಾಗೂ ಹೊರ ರಾಜ್ಯದ ನೂರಾರು ಬೋಟ್ಗಳಿಗೆ ಲಂಗರು ಹಾಕಿವೆ.
ಗಾಳಿ - ಮಳೆ ಜೋರಾದ ಹಿನ್ನಲೆಯಲ್ಲಿ ಆ. 20 ರಿಂದ ಆಳ ಸಮುದ್ರ ಮೀನುಗಾರಿಕೆ ಸ್ಥಬ್ದಗೊಂಡಿದೆ. ಪರಿಣಾಮ ಆಳಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಮಲ್ಪೆ, ಮಂಗಳೂರು, ತಮಿಳುನಾಡು, ಗೋವಾ ಸೇರಿದಂತೆ ಸ್ಥಳೀಯ ಮೀನುಗಾರರ ಬೋಟ್‌ಗಳು ಇದೀಗ ನಗರದ ಟ್ಯಾಗೋರ್ ಹಾಗೂ ಬೈತಖೋಲ್ ಮೀನುಗಾರಿಕಾ ಬಂದರು ಪ್ರದೇಶಗಳಲ್ಲಿ ಲಂಗರು ಹಾಕಿವೆ.
ಆಳ ಸಮುದ್ರದಲ್ಲಿ 45 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಕಾರಣದಿಂದ ಮೀನುಗಾರಿಕೆಯಲ್ಲಿ ತೊಡಗಿದ್ದ ಬೋಟ್‌ಗಳು ಹತ್ತಿರದ ಬಂದರು ಪ್ರದೇಶಗಳಿಗೆ ತೆರಳಿ ಲಂಗರು ಹಾಕಿವೆ. ಆದರೆ ಕಳೆದ ಮೂರ್ನಾಲ್ಕು ದಿನದಲ್ಲಿ ಗಾಳಿ ಕಡಿಮೆಯಾಗಬಹುದೆಂದು ಎದುರು ನೋಡುತ್ತಿದ್ದೇವೆ. ಇತ್ತ ಮೀನುಗಾರಿಕೆಗೆ ತೆರಳುವ ಬಗ್ಗೆ ಹವಾಮಾನ ಇಲಾಖೆಯಿಂದಲೂ ಯಾವುದೇ ಮುನ್ಸೂಚನೆ ಇಲ್ಲ ಎಂದು ಮೀನುಗಾರರು ಅಳಲು ತೋಡಿಕೊಂಡರು.
ಬೋಟ್ ಮಾಲೀಕ ಚೇತನ್ ಹರಿಕಂತ್ರ ಮಾತನಾಡಿ, "ನಾವು ಈ ಭಾರಿಯಾದರೂ ಉತ್ತಮ ಮೀನುಗಾರಿಕೆ ನಡೆಯಬಹುದೆಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಈ ಬಾರಿಯೂ ಮೀನುಗಾರಿಕೆ ನಡೆಸಲು ಸಾಧ್ಯವಾಗಿಲ್ಲ. ತೂಫಾನ್ ನಡುವೆ ಮೀನುಗಾರಿಕೆಗೆ ತೆರಳಿದ ಬೋಟ್‌ಗಳು ಬರಿಗೈಯಲ್ಲಿ ವಾಪಸ್ ಆಗಿವೆ. ಇದರಿಂದ ಕಾರ್ಮಿಕರಿಗೆ ಕೂಲಿ ಪಾವತಿಸುವುದು ಮಾಲೀಕರಿಗೆ ಹೊರೆಯಾಗುತ್ತಿದೆ. ಇನ್ನಾದರೂ ತೂಫಾನ್ ಕಡಿಮೆಯಾಗಿ ಮೀನುಗಾರಿಕೆ ನಡೆಸುವಂತಾದರೇ ಮಾತ್ರ ಮೀನುಗಾರರು ಬದುಕಲು ಸಾಧ್ಯವಿದೆ. ಇಲ್ಲವಾದಲ್ಲಿ ಮಾಡಿರುವ ಸಾಲವೇ ನಮಗೆ ಹೊರೆಯಾಗಲಿದೆ" ಎಂದು ಹೇಳಿದರು.
ಜಿಲ್ಲೆಯಲ್ಲಿ ಮುಂದುವರೆದ ಮಳೆ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಕೊಂಚ ಜೋರಾಗಿದೆ. ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನ ಕೆಲ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ. ಕರಾವಳಿಯ ಕಾರ, ಅಂಕೋಲಾ, ಹೊನ್ನಾವರದಲ್ಲಿ ಉತ್ತಮ ಮಳೆಯಾಗಿದೆ. ಉಳಿದಂತೆ ಮಲೆನಾಡಿನ ಶಿರಸಿ, ಸಿದ್ದಾಪುರ, ಜೋಯಿಡಾದಲ್ಲಿಯೂ ಉತ್ತಮ ಮಳೆಯಾಗಿದೆ.
ಕಾರವಾರದ 1 ಮತ್ತು ಕುಮಟಾದ 1 ಸೇರಿದಂತೆ ಒಟ್ಟು 2 ಕಾಳಜಿ ಕೇಂದ್ರಗಳಲ್ಲಿ 88 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ. ಇನ್ನು ಹವಾಮಾನ ಇಲಾಖೆ ಮುಂಜಾನೆ ವರದಿಯಂತೆ ಜಿಲ್ಲೆಯ ಅಂಕೋಲಾದಲ್ಲಿ 107.5 ಮಿ.ಮೀ, ಭಟ್ಕಳ 37, ದಾಂಡೇಲಿ 63.8, ಹಳಿಯಾಳ 30.4, ಹೊನ್ನಾವರ 127.7, ಜೋಯಿಡಾ 38, ಕಾರವಾರ 47.9, ಕುಮಟಾ 58.8, ಮುಂಡಗೋಡ 48.4, ಸಿದ್ದಾಪುರ 61.4, ಶಿರಸಿ 72.5, ಯಲ್ಲಾಪುರ 5.4 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 743.8 ಮಿ.ಮೀ ಮಳೆ ದಾಖಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ 7 ದಿನ ಮಳೆಯ ಮುನ್ಸೂಚನೆ: ಐದು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ - rain forecast