ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಬೈಲೂರು ವಲಯ ವ್ಯಾಪ್ತಿಯ ಕೆ ಕೆ ಡ್ಯಾಂ ಬಳಿ ಅರಣ್ಯಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಅಪಾರ ಪ್ರಮಾಣದ ಅರಣ್ಯ ನಾಶವಾಗಿದೆ. ಶನಿವಾರ ಬೆಳಗ್ಗೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಬೈಲೂರು ವಲಯದ ಕೆ ಕೆ ಡ್ಯಾಂ ಬಳಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಈ ವೇಳೆ, ಮತ್ತೊಂದು ಕಡೆ ಬೆಂಕಿ ಕಾಣಿಸಿಕೊಂಡಿದ್ದು, 60 ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸಲು ಕಾರ್ಯಪ್ರವೃತ್ತರಾಗಿದ್ದಾರೆ.
ಈ ಸಂದರ್ಭದಲ್ಲಿ ಜೋರಾದ ಗಾಳಿ ಬೀಸಿದ್ದು, ಬೆಂಕಿಯ ಕೆನ್ನಾಲಿಗೆ ತನ್ನ ವ್ಯಾಪ್ತಿ ವಿಸ್ತರಿಸುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಕುರುಚಲು ಗಿಡ, ಹುಲ್ಲು ಜಾತಿಯ ಗಿಡಗಳು ಸಂಪೂರ್ಣ ನಾಶವಾಗಿವೆ. ಈ ಭಾಗದಲ್ಲಿ ಹೆಚ್ಚಾಗಿ ಹುಲ್ಲಿನ ಜಾತಿಯ ಗಿಡಗಳಿದ್ದು, ಬೇಸಿಗೆ ಹಿನ್ನೆಲೆ ಸಂಪೂರ್ಣವಾಗಿ ಒಣಗಿವೆ. ಇದರಿಂದ ವೇಗವಾಗಿ ಬೆಂಕಿ ಹರಡುತ್ತಿದೆ. ಟವರ್‌ಗಳ ಮೂಲಕ ಸಿಬ್ಬಂದಿ ಬೆಂಕಿ ಕಾಣಿಸಿಕೊಳ್ಳುವ ಕಡೆಗಳಿಗೆ ತೆರಳಿ ಬೆಂಕಿ ನಂದಿಸಲು ಮುಂದಾಗಿದ್ದಾರೆ.
ಕಿಡಿಗೇಡಿಗಳಿಂದ ಕೃತ್ಯ: ಬೈಲೂರು ವಲಯ ವ್ಯಾಪ್ತಿ ಕೆ.ಕೆ.ಡ್ಯಾಂ ಬಳಿ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪುಣಜನೂರು, ಯಳಂದೂರು ವಲಯಗಳಲ್ಲೂ ಅರಣ್ಯಕ್ಕೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಅರಣ್ಯ ನಾಶವಾಗಿತ್ತು. ಮತ್ತೆ ಇದು ಮುಂದುವರೆದಿದೆ. ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದು, ಬೆಂಕಿ ಹಚ್ಚಿದವರ ಪತ್ತೆ ಕಾರ್ಯದಲ್ಲಿಯೂ ತೊಡಗಿದ್ದಾರೆ.
ಡ್ರೋನ್ ಮೂಲಕ ಕಾರ್ಯಾಚರಣೆ: ಕೆ ಕೆ ಡ್ಯಾಂ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಹಿನ್ನೆಲೆ ವಿವಿಧ ಕಡೆ ನಿಗಾ ಇಡಲು ಡ್ರೋನ್ ಸಹಾಯ ಪಡೆದು ಕಾರ್ಯಾಚರಣೆ ಮಾಡಲಾಗುತ್ತಿದೆ. ಬೆಂಕಿ ಹರಡುವ ಕಡೆಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಡ್ರೋನ್ ಸಹಾಯದಿಂದ ಪರಿಶೀಲಿಸುತ್ತಿದ್ದಾರೆ. ಈಗಾಗಲೇ ಕೆಲವು ಕಡೆಗಳಲ್ಲಿ ಬೆಂಕಿ ಹತೋಟಿಗೆ ಬಂದಿದೆ. ಉಳಿದಂತೆ ಕೆಲವು ಕಡೆಗಳಲ್ಲಿ ಬೆಂಕಿ ಬಹಳ ವೇಗವಾಗಿ ಹರಡುತ್ತಿದೆ.
ಬೈಲೂರು ವಲಯ ವ್ಯಾಪ್ತಿಯ ಕೆ ಕೆ ಡ್ಯಾಂ ಬಳಿ ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರೆದಿದೆ. ಎಷ್ಟು ಎಕರೆ ಪ್ರದೇಶ ನಾಶವಾಗಿದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈಗಾಗಲೇ ಸ್ಥಳದಲ್ಲಿ ಸಿಬ್ಬಂದಿ ಬೀಡು ಬಿಟ್ಟು ಬೆಂಕಿ ನಂದಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕಿ ದೀಪ್ ಜೆ.ಕಂಟ್ರಾಕ್ಟರ್ ತಿಳಿಸಿದ್ದಾರೆ.
ಇದನ್ನೂಓದಿ:ಕಡಲಿನಲ್ಲಿ ಮತ್ಸ್ಯಕ್ಕೂ ಬರ: ಬಂದರಿನಲ್ಲಿ ಲಂಗರು ಹಾಕುತ್ತಿರುವ ಬೋಟ್ಗಳು - fish famine