ಬೆಂಗಳೂರು: ಮುಸ್ಲಿಂ ಧರ್ಮೀಯರ ಮತದಾನದ ಹಕ್ಕಿನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಮರಾಜಪೇಟೆಯ ವಾಲ್ಮೀಕಿನಗರದ ನಿವಾಸಿ ಸೈಯದ್ ಅಬ್ಬಾಸ್ ಎಂಬವರು ನೀಡಿರುವ ದೂರಿನನ್ವಯ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಸಾರಾಂಶ: ''ಫೇಸ್‌ಬುಕ್‌ನಲ್ಲಿ ನೋಡುತ್ತಿರುವಾಗ ಮುಸ್ಲಿಂರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು - ಚಂದ್ರಶೇಖರ ಸ್ವಾಮೀಜಿ ಎಂಬ ಶೀರ್ಷಿಕೆಯಿದ್ದ ಲಿಂಕ್ ಗಮನಿಸಿದೆ. ಲಿಂಕ್ ತೆರೆದು ನೋಡಿದಾಗ, ಭಾರತೀಯ ಕಿಸಾನ್ ಸಂಘದ ವತಿಯಿಂದ ನವೆಂಬರ್ 26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಅವರು ಆ ರೀತಿ ಮಾತನಾಡಿರುವುದು ಕಂಡು ಬಂದಿದೆ'' ಎಂದು ದೂರಲಾಗಿದೆ.
''ಚಂದ್ರಶೇಖರ ಸ್ವಾಮೀಜಿಯವರು ಮುಸ್ಲಿಂರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು, ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು, ಆಗ ಭಾರತೀಯರೆಲ್ಲರೂ ನೆಮ್ಮದಿಯಿಂದಿರಲು ಸಾಧ್ಯ. ರೈತರ ಜಮೀನು ಉಳಿಸಲು ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸುವ ತುರ್ತು ಸಂದರ್ಭ ಎದುರಾಗಿದೆ. ಸರ್ಕಾರ ಹೋದರೂ ತೊಂದರೆ ಇಲ್ಲ. ವಕ್ಫ್ ಮಂಡಳಿ ರದ್ದು ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು' ಎಂದು ಚಂದ್ರಶೇಖರ ಸ್ವಾಮೀಜಿಯವರು ದ್ವೇಷದ ಭಾಷಣ ಮಾಡಿದ್ದಾರೆ'' ಎಂದು ಸೈಯದ್ ಅಬ್ಬಾಸ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಭಾರತೀಯ ಪ್ರಜೆಗಳಾದ ನಾವು ಸಂವಿಧಾನಕ್ಕೆ ಬದ್ಧರಾಗಿ ದೇಶದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಆದರೆ, ಚಂದ್ರಶೇಖರ ಸ್ವಾಮೀಜಿಯವರು ಮುಸ್ಲಿಂ ಧರ್ಮವನ್ನ ಗುರಿಯಾಗಿಸಿಕೊಂಡು ಮಾತನಾಡುವ ಮೂಲಕ ನಮ್ಮ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಧರ್ಮಗಳ ನಡುವೆ ಮತೀಯ ದ್ವೇಷ, ವೈರತ್ವ ಮೂಡುವಂತೆ ಪ್ರಚೋದನಕಾರಿ ಭಾಷಣ ಮಾಡಿರುವ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಯದ್ ಅಬ್ಬಾಸ್ ಮನವಿ ಮಾಡಿದ್ದಾರೆ. ದೂರಿನ ಅನ್ವಯ ಚಂದ್ರಶೇಖರ ಸ್ವಾಮಿಜಿಯವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 299 (ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಕ್ಫ್ ಮಂಡಳಿಯು ರೈತರಿಗೆ ನೀಡಿರುವ ನೋಟಿಸ್‌ಗಳನ್ನು ಖಂಡಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಸಂಯೋಜಿತವಾಗಿರುವ ರೈತ ಸಂಘಟನೆಯಾದ ಭಾರತೀಯ ಕಿಸಾನ್ ಸಂಘ ಮಂಗಳವಾರ ಬೆಂಗಳೂರಿನಲ್ಲಿ ರೈತ ಘರ್ಜನೆ ಪ್ರತಿಭಟನಾ ರ್ಯಾಲಿ ಆಯೋಜಿಸಿತ್ತು. ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಚಂದ್ರಶೇಖರನಾಥ ಸ್ವಾಮೀಜಿಯವರು ಈ ಹೇಳಿಕೆ ನೀಡಿದ್ದರು.
ಶ್ರೀಗಳ ವಿವಾದಾತ್ಮಕ ಹೇಳಿಕೆ: "ರಾಜಕಾರಣಿಗಳು ವೋಟ್ ಬ್ಯಾಂಕ್ ರಾಜಕೀಯ ಮತ್ತು ಮುಸ್ಲಿಮರನ್ನು ತುಷ್ಟೀಕರಿಸುವಲ್ಲಿ ತೊಡಗಿದ್ದಾರೆ. ಹೀಗಾಗಿ ಮುಸ್ಲಿಮರನ್ನು ಮತದಾನದ ಅಧಿಕಾರದಿಂದ ವಂಚಿತರಾಗುವಂತೆ ಮಾಡಬೇಕು. ಇದರಿಂದ ವೋಟ್ ಬ್ಯಾಂಕ್ ರಾಜಕೀಯ ಕೊನೆಗೊಂಡು ದೇಶದ ಪ್ರಗತಿಗೆ ಸಹಾಯವಾಗಲಿದೆ" ಎಂದು ಅವರು ಹೇಳಿದ್ದರು.
ಪಾಕಿಸ್ತಾನದಲ್ಲಿ ಮುಸ್ಲಿಂ ಬಹುಸಂಖ್ಯಾತರನ್ನು ಹೊರತುಪಡಿಸಿ ಇತರ ಧರ್ಮಗಳ ಜನರಿಗೆ ಮತ ಚಲಾಯಿಸುವ ಅಧಿಕಾರವಿಲ್ಲ ಎಂದು ಹೇಳಿದ ಸ್ವಾಮಿಜಿ, "ಇದನ್ನೇ ಭಾರತದಲ್ಲಿ ಅಳವಡಿಸಿಕೊಂಡರೆ ಮುಸ್ಲಿಮರು ತಮ್ಮ ಪಾಡಿಗೆ ತಾವು ಉಳಿಯುತ್ತಾರೆ ಮತ್ತು ದೇಶದಲ್ಲಿ ಶಾಂತಿ ನೆಲೆಸುತ್ತದೆ. ಹೀಗಾದಾಗ ಎಲ್ಲರೂ ಶಾಂತಿಯಿಂದ ಬದುಕಬಹುದು" ಎಂದು ಅವರು ಹೇಳಿದ್ದರು. ಶ್ರೀಗಳ ಹೇಳಿಕೆ ವೈರಲ್ ಆಗಿ ರಾಜ್ಯದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ವಿಷಾದ ವ್ಯಕ್ತಪಡಿಸಿದ ಶ್ರೀಗಳು: ಗುರುವಾರ ಶ್ರೀಗಳು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ, ಮುಸ್ಲಿಮರು ಭಾರತೀಯ ನಾಗರಿಕರೇ ಆಗಿದ್ದು ಅವರು ಬೇರೆ ದೇಶಕ್ಕೆ ಸೇರಿದವರಲ್ಲ ಎಂದು ಹೇಳಿದರು. ಬಾಯಿ ತಪ್ಪಿ ಅಂಥ ಹೇಳಿಕೆ ನೀಡಿರುವುದಾಗಿ ಹೇಳಿದ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು.
"ವಕ್ಫ್ ಮಂಡಳಿಯಿಂದ ತೊಂದರೆಗೀಡಾದ ರೈತರ ಸಂಕಷ್ಟಗಳನ್ನು ಪರಿಹರಿಸುವ ಬಗ್ಗೆ ವೇದಿಕೆಯಲ್ಲಿ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ನಾನು ಈ ಹೇಳಿಕೆ ನೀಡಿದ್ದೇನೆ. ಅದು ಬಾಯಿ ತಪ್ಪಿ ಆಡಿದ ಮಾತಾಗಿತ್ತು. ನಾನು ಆ ಹೇಳಿಕೆ ನೀಡಬಾರದಿತ್ತು. ಮುಸ್ಲಿಮರು ಭಾರತೀಯ ನಾಗರಿಕರು ಮತ್ತು ಅವರು ಬೇರೆ ದೇಶಕ್ಕೆ ಸೇರಿದವರಲ್ಲ. ಈ ಹಂತದಲ್ಲಿ ಈ ವಿಷಯವನ್ನು ಕೊನೆಗೊಳಿಸಿ ಮತ್ತು ಅದನ್ನು ಮತ್ತಷ್ಟು ಬೆಳೆಸಬೇಡಿ ಎಂದು ನಾನು ವಿನಂತಿಸುತ್ತೇನೆ" ಎಂದು ಶ್ರೀಗಳು ಮಾಧ್ಯಮಗಳಿಗೆ ತಿಳಿಸಿದ್ದರು.
ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿಗೆ ಸೋಲು: ಇಬ್ಬರು ಬಿಜೆಪಿ ಮುಖಂಡರ ಉಚ್ಛಾಟನೆಗೆ ಆಕ್ರೋಶ