ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಐಜಿಪಿ ಕಚೇರಿಯು ತಮ್ಮದೇ ಎಂದು ಹೇಳಿ ಕಚೇರಿಯ ಒಳಭಾಗದಲ್ಲಿ ಅನುಮತಿಯಿಲ್ಲದೆ ವಿಡಿಯೋ ಮಾಡಿ, ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಆರು ಮಂದಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಜಿಲ್ಲಾ ನಿಯಂತ್ರಣ ಕೊಠಡಿಯ ಇನ್ಸ್ಪೆಕ್ಟರ್ ಸಂತೋಷ್ ಎಂಬುವರು ನೀಡಿದ ದೂರಿನ ಮೇರೆಗೆ ಹನೀಫ್, ರಾಜಶೇಖರ್, ಮೊಹಮ್ಮದ್ ನದೀಂ, ಮೋಹನ್ ಶೆಟ್ಟಿ, ಗಣಪತಿ ಹಾಗೂ ಜಮೀರ್ ಅಹಮದ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜೂನ್ 3 ರಂದು ಅನಧಿಕೃತವಾಗಿ ಕಚೇರಿ ಪ್ರವೇಶಿಸಿ ಹನೀಫ್ ಹಾಗೂ ಆತನ ತಂಡ ವಿಡಿಯೋ ಮಾಡುವಾಗ ಈ ಬಗ್ಗೆ ಇನ್ಸ್ಪೆಕ್ಟರ್ ಸಂತೋಷ್ ಪ್ರಶ್ನಿಸಿದ್ದರು. ಹೊರಗೆ ಹೋಗಿ ವಿಡಿಯೋ ಮಾಡುವಂತೆ ಹೇಳಿದಾಗ, ಈ ಜಾಗ ನಿನ್ನದೇನು? ಇದರ ದಾಖಲಾತಿಗಳು ನಮ್ಮ ಬಳಿಯಿವೆ. ಅಸಲಿ ಜಾಗ ದಾಖಲಾತಿಗಳು ಮೋಹನ್ ಶೆಟ್ಟಿ ಹಾಗೂ ರಾಜಶೇಖರ್ ಅವರ ಹೆಸರಿನಲ್ಲಿವೆ. ಅಲ್ಲದೆ ವಾರಸುದಾರರಿಂದ ಸ್ವತ್ತಿನ ಜಾಗವನ್ನ ಜಿಪಿಎ (ಅಟಾರ್ನಿ) ಮಾಡಿಸಿಕೊಂಡಿಸಿದ್ದೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ದಾಖಲಾತಿಗಳನ್ನು ನೀಡಿಲ್ಲ. ಆಸ್ತಿ ಮಾರಾಟ ಮಾಡುವ ಉದ್ದೇಶದಿಂದ ನಕಲಿ ದಾಖಲಾತಿ ಸೃಷಿಸಿದ್ದಾರೆ. ಅಲ್ಲದೆ ಕಚೇರಿಗೆ ಅನಧಿಕೃತವಾಗಿ ಪ್ರವೇಶಿಸಿ, ವಿಡಿಯೋ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರು ನೀಡಿದ ಮೇರೆಗೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಹನೀಫ್, ರಾಜಶೇಖರ್ ಸೇರಿ ಮೂವರಿಗೆ ದಾಖಲಾತಿ ಸಮೇತ ವಿಚಾರಣೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ವಾಲ್ಮಿಕಿ ಅಭಿವೃದ್ಧಿ ನಿಗಮದ ಹಗರಣ: ಸಿಬಿಐನಿಂದ ಎಫ್ಐಆರ್ ದಾಖಲು - Valmiki Corporation Case