ಬೆಂಗಳೂರು: ನಕಲಿ ಅಂಕಪಟ್ಟಿ ಸಲ್ಲಿಸಿದ ಆರೋಪ ಮೇರೆಗೆ ಕ್ರೀಡಾ ಕೋಟಾದಡಿ ಪಿಎಸ್ಐ ಆಗಿ ನೇಮಕವಾಗಿದ್ದ ಕಾನ್ಸ್‌ಟೇಬಲ್ ವಿರುದ್ಧ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯ ನೇಮಕಾತಿ ವಿಭಾಗದ ಮಹಿಳಾ ಅಧಿಕಾರಿ ಸಹನಾ ಎಂಬುವರು ನೀಡಿದ ದೂರಿನ ಮೇರೆಗೆ ಭಾರತಿನಗರ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಫೈಗಂಬರ್ ನದಾಫ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 336 ಹಾಗೂ 336ರ ಸೆಕ್ಷನ್ ಗಳಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟಿ.ಹೆಚ್. ಮಾಹಿತಿ ನೀಡಿದ್ದಾರೆ.
2021ರಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ನೇಮಕವಾಗಿದ್ದ ಅವರು ಬಳಿಕ ಕ್ರೀಡಾ ಕೋಟಾದಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕಾತಿಯಾಗಿದ್ದರು. ನದಾಫ್ ನೀಡಿದ ಪದವಿ ಅಂಕಪಟ್ಟಿ ನೈಜತೆ ಪರಿಶೀಲನೆಗಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿತ್ತು. ಪರಿಶೀಲನೆ ವೇಳೆ ಅಂಕಪಟ್ಟಿ ನಕಲಿ ಎಂದು ತಿಳಿದುಬಂದಿದೆ. ಈ ಸಂಬಂಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ಧಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಆಟವಾಡುತ್ತಿದ್ದ ಮಕ್ಕಳು ಬಾವಿಗೆ ಬಿದ್ದು ಶವವಾಗಿ ಪತ್ತೆ!