ಬೆಳಗಾವಿ: ಮನೆಯಲ್ಲಿ ಪಂಚಮಿ ಹಬ್ಬದ ಸಂಭ್ರಮವಿಲ್ಲ. ವಿಧಿಯಾಟಕ್ಕೆ ಮಗ ಬಲಿಯಾಗಿದ್ದು, ಸೂತಕದ ಛಾಯೆ ಆವರಿಸಿದೆ. ಕುಟುಂಬಕ್ಕೆ ಆಧಾರವಾಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಇಡೀ ಕುಟುಂಬ ಬೇಸರದಲ್ಲಿದೆ. ಬೆಳಗಾವಿಯಲ್ಲಿ ಇತ್ತೀಚೆಗೆ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮಾರ್ಕಂಡೇಯ ನಗರದ ಯಲಗೊಂಡ ಸಣ್ಣಯಲ್ಲಪ್ಪ ಗುಂಡ್ಯಾಗೋಳ ಸಾವನ್ನಪ್ಪಿದ್ದಾನೆ. ಕುಟುಂಬದಲ್ಲಿ ದುಃಖ ಮನೆ ಮಾಡಿದೆ.
ಪಿಯುಸಿ ಶಿಕ್ಷಣ ಮುಗಿಯುತ್ತಿದ್ದಂತೆ ಓದು ಸಾಕು, ಕೆಲಸಕ್ಕೆ ಹೋಗಿ ನಿಮ್ಮನ್ನು ಸಾಕುತ್ತೇನೆ ಎಂದು ತಂದೆ ತಾಯಿಗೆ ಭರವಸೆ ನೀಡಿದ್ದು. ಆದರೆ, ಆ ಭರವಸೆ ಹುಸಿಯಾಗಿದೆ. ಇದೀಗ ಎದೆಯೆತ್ತರಕ್ಕೆ ಬೆಳೆದು ನಿಂತಿದ್ದ ಮಗನನ್ನು ಕಳೆದುಕೊಂಡ ತಂದೆ ಸಣ್ಣಯಲ್ಲಪ್ಪ ಅವರು ಕಂಪನಿಯವರು 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
2 ಕೋಟಿ ರೂ. ಪರಿಹಾರ ಕೊಡಿ: ಮೃತ ಯುವಕನ ತಂದೆ ಸಣ್ಣಯಲ್ಲಪ್ಪ ಗುಂಡ್ಯಾಗೋಳ ಈಟಿವಿ ಭಾರತ ಜೊತೆಗೆ ಮಾತನಾಡಿ, "ಮಗ ಮಧ್ಯಾಹ್ನ 2 ಗಂಟೆಗೆ ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ. ರಾತ್ರಿ 10 ಗಂಟೆಗೆ ಮನೆಗೆ ಬರಬೇಕಿತ್ತು. ಆದರೆ, ಅಷ್ಟರೊಳಗೆ ಬೆಂಕಿ ಹತ್ತಿದೆ. ಘಟನೆಯಲ್ಲಿ ನನ್ನ ಮಗ ಸಂಪೂರ್ಣ ಸುಟ್ಟು ಕರಕಲಾಗಿದ್ದಾನೆ. ನನಗೆ ಅವನೊಬ್ಬನೇ ಗಂಡು ಮಗ. ನಮ್ಮ ಇಡೀ ಮನೆ ಜವಾಬ್ದಾರಿ ಅವನೇ ಹೊತ್ತಿದ್ದ. ಫ್ಯಾಕ್ಟರಿ ಯಾವೊಬ್ಬರೂ ನಮ್ಮ ಮನೆಗೆ ಬಂದು ಸಾಂತ್ವನ ಹೇಳಿಲ್ಲ. ಧೈರ್ಯ ತುಂಬಿಲ್ಲ. ಮಗ ಹೋದ ಬಳಿಕ ನಮ್ಮನ್ನು ಸಾಕುವವರು ಯಾರು? ನಮಗೆ ಕಂಪನಿಯವರು 2 ಕೋಟಿ ರೂ. ಪರಿಹಾರ ನೀಡಬೇಕು. ಮಗನ ಬಗ್ಗೆ ಬಹಳಷ್ಟು ಕನಸು ಕಟ್ಟಿಕೊಂಡಿದ್ದೆ. ಅವು ಈಡೇರುವ ಮುನ್ನವೇ ಮಗನನ್ನು ನಮ್ಮ ಕೈಯಿಂದ ದೇವರು ಕಸಿದುಕೊಂಡ" ಎಂದು ಕಣ್ಣೀರು ಹಾಕಿದರು.
ಮಗನ ಅಸ್ತಿ ಕೈಚೀಲದಲ್ಲೇ ಒಯ್ದೆ: ಮೃತ ಯಲಗೊಂಡ ದೊಡ್ಡಪ್ಪ ದೊಡ್ಡಯಲ್ಲಪ್ಪ ಗುಂಡ್ಯಾಗೋಳ ಮಾತನಾಡಿ, "ತಮ್ಮನ ಮಗನ ಮೃತದೇಹದ ಅವಶೇಷಗಳನ್ನು ಚೀಲದಲ್ಲಿ ಹಾಕಿ ಕೊಡೋದು ನೋಡಿ ತುಂಬಾ ದುಃಖವಾಯಿತು. ಮನುಷ್ಯನ ರೂಪ ಮಾಡಿಕೊಡಿ ಎಂದು ನಾವು ಕೇಳಿಕೊಂಡೆವು. ಇಲ್ಲ ಆ ರೀತಿ ಮಾಡಲು ಬರೋದಿಲ್ಲ ಎಂದರು. ಆಗ ಡಾಕ್ಟರ್ ಬಂದು ನಮ್ಮ ಮಗನ ಒಂದಿಷ್ಟು ಎಲುಬಿನ ತುಕಡಿಗಳನ್ನು ಇಟ್ಟುಕೊಂಡು, ಇನ್ನುಳಿದ ಎಲುಬುಗಳನ್ನು ಮಡಿಕೆಯಲ್ಲಿ ಹಾಕಿ ಕೊಟ್ಟರು. ಅದಕ್ಕೆ ಬಟ್ಟೆ ಸುತ್ತಿದ್ದರು. ಕೈಯಲ್ಲಿ ಹಿಡಿದುಕೊಳ್ಳಲು ಅನುಕೂಲ ಆಗಲಿ ಎಂದು ಕೈಚೀಲ ಕೊಟ್ಟರು. ಗಟ್ಟಿಮುಟ್ಟಾದ ಮಗನನ್ನು ಕೈಚೀಲದಲ್ಲಿ ಒಯ್ಯೋ ಪರಿಸ್ಥಿತಿ ಬಂತು" ಎಂದು ಆ ಕ್ಷಣ ನೆನೆದು ದುಃಖಿಸಿದರು.
ಜಿಲ್ಲಾಡಳಿತವೂ ಸಾಂತ್ವನ ಹೇಳಿಲ್ಲ: "ಇಷ್ಟು ದೊಡ್ಡ ಬೆಂಕಿ ಅವಘಡದಲ್ಲಿ ಮಗ ಭೀಕರವಾಗಿ ಸಾವನ್ನಪ್ಪಿದ್ದಾನೆ. ಅಂತ್ಯಕ್ರಿಯೆಗೆ ಫ್ಯಾಕ್ಟರಿಯಿಂದ ಯಾರೂ ಬಂದಿಲ್ಲ. ತಹಶೀಲ್ದಾರ್, ಜಿಲ್ಲಾಧಿಕಾರಿ ಕೂಡ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಫೋನ್ ಮಾಡಿ ನಿಮ್ಮ ಜೊತೆ ಇದ್ದೇವೆ ಎಂದು ಧೈರ್ಯ ತುಂಬಿದ್ದಾರೆ. ಯಲಗೊಂಡನಿಗೆ ಅನ್ಯಾಯ ಆಗಿದೆ. ಫ್ಯಾಕ್ಟರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ ಕೊಟ್ಟರೆ ತಂದೆ - ತಾಯಿ ಜೀವನ ನಡೆಯುತ್ತದೆ. ಇಲ್ಲದಿದ್ದರೆ ಅವರು ಜೀವನ ನಡೆಸುವುದೇ ಕಷ್ಟವಾಗುತ್ತದೆ" ಎಂದು ದೊಡ್ಡಯಲ್ಲಪ್ಪ ಗುಂಡ್ಯಾಗೋಳ ಆಗ್ರಹಿಸಿದರು.
ಜಿಲ್ಲಾಡಳಿತ ವಿರುದ್ಧ ಟೀಕೆ: ಮಡಿಕೆಯಲ್ಲಿ ಮೃತ ಯಲಗೊಂಡ ದೇಹದ ಭಾಗಗಳನ್ನು ಹಾಕಿ, ಕೈ ಚೀಲಿನಲ್ಲಿ ಮುಚ್ಚಿಟ್ಟು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಕ್ಕೆ ಜಿಲ್ಲಾಡಳಿತದ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಗೌರವಯುತವಾಗಿ ಯುವಕನ ಅಂತ್ಯಕ್ರಿಯೆ ಮಾಡಬೇಕಿತ್ತು ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.