ಉಡುಪಿ: ಕೋಟ ಸಮೀಪದ ಮಣೂರಿನ ಉದ್ಯಮಿಯೊಬ್ಬರ ಮನೆಗೆ ಬೆಳ್ಳಂಬೆಳಗ್ಗೆ ನಕಲಿ ಐಟಿ ಅಧಿಕಾರಿಗಳು ಮತ್ತು ಪೊಲೀಸರ ಸೋಗಿನಲ್ಲಿ ಬಂದ ಅಪರಿಚಿತರ ತಂಡವೊಂದು ಊರಿನಲ್ಲಿ ಆತಂಕ ಸೃಷ್ಟಿಸಿದ್ದು, ಈ ಬಗ್ಗೆ ಮನೆ ಮಾಲಕಿ ಕವಿತಾ ಎಂಬವರು ಕೋಟ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಯ ವಿವರ: ಜುಲೈ 25ರಂದು ಬೆಳಿಗ್ಗೆ 8.30 ಗಂಟೆಗೆ ಮನೆಯ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದವಾಗಿತ್ತು. ತಕ್ಷಣಕ್ಕೆ ನಿರ್ಲಕ್ಷಿಸಿ 9 ಗಂಟೆಗೆ ಹೊರಬಂದು ನೋಡಿದಾಗ ಯಾರೂ ಅಲ್ಲಿರಲಿಲ್ಲ. ಈ ನಡುವೆ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಕೃಷ್ಣ ಅವರು ಕರೆ ಮಾಡಿ, ನಿಮ್ಮ ಮನೆಗೆ ಸ್ವಿಫ್ಟ್ ಮತ್ತು ಇನೋವಾ ಕಾರಿನಲ್ಲಿ 6-8 ಜನ ಮಂದಿ ಆಗಮಿಸಿ ಗೇಟು ತೆರೆಯಲು ಯತ್ನಿಸಿದ್ದರು. ಸಾಧ್ಯವಾಗದೇ ಇದ್ದಾಗ ಕಾಂಪೌಂಡ್ ಹಾರಿ ಮನೆಗೆ ಬಂದು ಬಾಗಿಲು ಹಾಗೂ ಕಿಟಕಿಯನ್ನು ಬಲಾತ್ಕಾರವಾಗಿ ತೆಗೆಯಲು ಪ್ರಯತ್ನಿಸಿದರು. ಅದೂ ಸಾಧ್ಯವಾಗದೇ ಇದ್ದಾಗ ವಾಪಸ್ ಹೋಗಿರುವುದಾಗಿ ತಿಳಿಸಿದ್ದಾರೆ.
ಬಂದವರು ಯಾರೆನ್ನುವ ನಿಟ್ಟಿನಲ್ಲಿ ಪೊಲೀಸ್ ತನಿಖೆ ನಡೆಯುತ್ತಿದೆ. ಎರಡು ಪ್ರತ್ಯೇಕ ತಂಡಗಳು ಬೇರೆ ಬೇರೆ ಕಡೆ ಹೋಗಿ ತನಿಖೆ ನಡೆಸುತ್ತಿವೆ. ದರೋಡೆ ಮಾಡುವ ಉದ್ದೇಶವಿತ್ತೇ ಎನ್ನುವುದು ಸದ್ಯದ ಅನುಮಾನ. ಐಟಿ, ಇಡಿ ಮೊದಲಾದ ಸರ್ಕಾರಿ ಇಲಾಖೆ ಅಧಿಕಾರಿಗಳೇ ಆಗಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ತೆರೆಸುತ್ತಿದ್ದರು ಅಥವಾ ಬಾಗಿಲು ತೆರೆಯಲು ಬೇಕಾದ ಸೂಕ್ತ ಕಾನೂನು ವ್ಯವಸ್ಥೆ ಮಾಡುತ್ತಿದ್ದರು. ಆಗಂತುಕರು ವಿಗ್ ಇತ್ಯಾದಿ ಧರಿಸಿ ಗುರುತು ಮರೆಮಾಚುವಂತೆ ಕಂಡುಬರುತ್ತಿತ್ತು.
ವಾಹನದಲ್ಲಿ ಸಫಾರಿ ಧರಿಸಿ ಅಧಿಕಾರಿಯಂತೆ ಕಾಣುವ ಒಬ್ಬ ಮತ್ತು ನಾಲ್ವರು ಹಾಗೂ ಇನ್ನೊಂದು ವಾಹನದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿದವರು ಇದ್ದರು. ಇದು ಐಟಿ, ಇಡಿಯವರು ಆಗಿರಬಹುದು ಎಂಬ ಅನುಮಾನ ಮನೆಯವರಲ್ಲಿತ್ತು. ಒಟ್ಟು 8 ಮಂದಿ ಇದ್ದರು ಎಂದು ಶಂಕಿಸಲಾಗಿದೆ. 6 ಜನ ಇರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಳೆ ಬರುತ್ತಿದ್ದಾಗ ಕಾರಿನಿಂದಿಳಿದ ತಂಡ, ಗೇಟು ತೆರೆಯಲು ಯತ್ನಿಸಿದೆ. ಸಾಧ್ಯವಾಗದಿದ್ದಾಗ ಗೇಟಿಗೆ ಗುದ್ದಿ ಸದ್ದು ಮಾಡಿದೆ. ಆ ಬಳಿಕ ಇನ್ನೊಂದು ಮಗ್ಗುಲಿನಿಂದ ಹೋಗಿ ಕಾಂಪೌಂಡ್ನಿಂದ ಬಾವಿಕಟ್ಟೆಗೆ ಇಳಿದು ಅಂಗಳಕ್ಕೆ ಹೋಗಿ ಮುಖ್ಯ ಬಾಗಿಲ ಬಳಿ ಹೋಗಿದೆ. ಆಗಲೂ ಬಾಗಿಲು ತೆರೆಯದಿದ್ದಾಗ ತಂಡ ಮರಳಿದೆ.
ಮನೆಯವರು ಬಾಗಿಲು ತೆರೆಯದ ಕಾರಣ ಮರಳಿದ ಆಗಂತುಕರು ಸಾಸ್ತಾನ ಟೋಲ್ ಮಾರ್ಗದಲ್ಲಿ ಸಾಗದೆ. ಬಾರ್ಕೂರು ರಸ್ತೆ ಮೂಲಕ ಟೋಲ್ ತಪ್ಪಿಸಿ ಹೋಗಿದ್ದಾರೆ. ವಾಹನ ಅತಿವೇಗದಲ್ಲಿ ಸಾಗಿದ್ದು, ಕಾರಿನ ನಂಬರ್ ಪ್ಲೇಟ್‌ಗಳ ಗುರುತು ಹಚ್ಚಲೂ ಸಾಧ್ಯವಿಲ್ಲದಂತೆ ತಂಡ ತಯಾರಿ ಮಾಡಿಕೊಂಡಿತ್ತು.
ಈ ಬಗ್ಗೆ 'ಈಟಿವಿ ಭಾರತ'ದ ಜೊತೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್, ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿದ್ದು, ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಐಟಿ ರಿಟರ್ನ್ಸ್ ಪಡೆಯಲು ಉತ್ಪ್ರೇಕ್ಷಿತ, ನಕಲಿ ಬಿಲ್ ನೀಡುವುದು ಶಿಕ್ಷಾರ್ಹ ಅಪರಾಧ: ಐಟಿ ಇಲಾಖೆ - IT REFUNDS