ಬೆಳಗಾವಿ: ಸರ್ಕಾರ ಯಾವುದೇ ಅರ್ಹ ಬಿಪಿಎಲ್ ಕುಟುಂಬದವರ ಪಡಿತರ ಚೀಟಿ ರದ್ದು ಪಡಿಸಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, "ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆಯುವ ಬಗ್ಗೆ 2017ರಲ್ಲಿ ಮಾನದಂಡಗಳನ್ನು ರೂಪಿಸಲಾಗಿದೆ. ಇದರ ಅನ್ವಯ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳ ನೌಕರರು ಬಿಪಿಎಲ್ ಕಾರ್ಡ ಪಡೆಯುವಂತಿಲ್ಲ. ಇದರೊಂದಿಗೆ ಆದಾಯ ತೆರಿಗೆ, ಸೇವಾ ತೆರಿಗೆ, ಜಿಎಸ್‌ಟಿ, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು ಸಹ ಬಿಪಿಎಲ್ ನಡಿ ಬರುವುದಿಲ್ಲ" ಎಂದರು.
"ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ, ನಗರ ಪ್ರದೇಶಗಳಲ್ಲಿ 1,000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವವರು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವವರು, ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳನ್ನು ಬಿಪಿಎಲ್ ಪಡಿತರ ಚೀಟಿಯಿಂದ ಹೊರಗಿಡಲಾಗುವುದು" ಎಂದು ತಿಳಿಸಿದರು.
"ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಡುಗಳನ್ನು ಆಯಾ ಜಿಲ್ಲೆಯ ಅಧಿಕಾರಿಗಳು ನೀಡುತ್ತಾರೆ. ಕೇಂದ್ರ ಸರ್ಕಾರದ ಮಾನದಂಡಗಳ ಅಡಿಯಲ್ಲಿಯೇ ಕಾರ್ಡ್ ಗಳನ್ನು ಪರಿಷ್ಕರಣೆ ಮಾಡಲಾಗಿದೆ. ಯಾವುದೇ ಅನಗತ್ಯ ಗೊಂದಲ ಬೇಡ. ರದ್ದಾದ ಆರೋಗ್ಯ ಸಂಬಂಧ ಬಿಪಿಎಲ್ ಕಾರ್ಡುಗಳನ್ನು ತಕ್ಷಣ ಪುನರ್ ಸ್ಥಾಪಿಸಲಾಗಿದೆ. ಯಾವುದೇ ಅರ್ಹರಿಗೆ ಗೊಂದಲವಾಗದಂತೆ ಕಾರ್ಡ್ಗಳನ್ನು ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದು ತಿಳಿಸಿದರು.
ಹೊಸ ಬಿಪಿಎಲ್ ಕಾರ್ಡ್ ವಿತರಿಸಲು ಕ್ರಮ: "ಪೋಷಕರ ಆದಾಯ ಹೆಚ್ಚಿದ್ದರೂ, ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ವಾಸವಿದ್ದು ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರಿದ್ದಲ್ಲಿ ಪಡಿತರ ಚೀಟಿ ನೀಡಲು ಕ್ರಮವಹಿಸಲಾಗುವುದು. ಅರ್ಹ ಕುಟುಂಬ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ರಾಜ್ಯದಲ್ಲಿ 03 ಲಕ್ಷ ಕಾರ್ಡ್ಗಳನ್ನು ಪುನರ್ ಸ್ಥಾಪಿಸುವ ಕಾರ್ಯ ಮಾಡಲಾಗಿದೆ. ಆದಾಯ ತೆರಿಗೆ ಪಾವತಿಸುವ 98,473 ಪಡಿತರ ಚೀಟಿಗಳು ಹಾಗೂ 4036 ಸರ್ಕಾರಿ ನೌಕರರು ಪಡೆದಿದ್ದ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲಾಗಿದೆ. ಯಾವುದೇ ಅರ್ಹ ಬಿಪಿಎಲ್ ಕಾಡ್ದಾರರಿಗೆ ತೊಂದರೆಯಾಗದಂತೆ ಈಗಾಗಲೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ತಹಶೀಲ್ದಾರ್ ನೀಡುವ ಆದಾಯ ಪ್ರಮಾಣ ಪತ್ರ ಮತ್ತು ಇನ್ನಿತರ ದಾಖಲೆಗಳನ್ನು ಪಡೆದು ಸ್ಥಳ ಪರಿಶೀಲನೆ ಮಾಡಿ, ಹೊಸ ಬಿಪಿಎಲ್ ಕಾರ್ಡು ವಿತರಿಸಲು ಕ್ರಮ ವಹಿಸಲಾಗವುದು" ಎಂದು ಹೇಳಿದರು.
ಇದನ್ನೂ ಓದಿ: ಪ್ರಯಾಣ ದರ ಹೆಚ್ಚಳ ಮಾಡದ ಕಾರಣ 649 ಕೋಟಿ ರೂ. ಬಿಎಂಟಿಸಿ ಸಂಚಾರ ಆದಾಯ ಖೋತಾ: ಸಿಎಜಿ ವರದಿ