ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಆರೋಪ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳಿಂದ ಬಂಧಿತರಾಗಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರ ವಿಚಾರಣೆ ಮುಂದುವರೆದಿದೆ. ನಾಗೇಂದ್ರ ಸೇರಿದಂತೆ ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿನ ವಹಿವಾಟಿನ ವಿವರ ಪಡೆದಿರುವ ಇ.ಡಿ ಅಧಿಕಾರಿಗಳು, ಪ್ರತಿಯೊಂದು ವ್ಯವಹಾರದ ಕುರಿತು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಾಗೇಂದ್ರ ಹಾಗೂ ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿನ ಕಳೆದ ಒಂದು ವರ್ಷದ ಹಣದ ವ್ಯವಹಾರದ ವಿವರಗಳನ್ನು ಪಡೆದಿರುವ ಇ.ಡಿ ಅಧಿಕಾರಿಗಳು, ಅವುಗಳನ್ನು ಮುಂದಿಟ್ಟು ಪ್ರಶ್ನಿಸುತ್ತಿದ್ದಾರೆ. ಆದರೆ, ನಾಗೇಂದ್ರ ಅವರು ಮಾತ್ರ 'ತನಗೇನು ಗೊತ್ತಿಲ್ಲ, ವಕೀಲರೊಂದಿಗೆ ಮಾತನಾಡಬೇಕು' ಎಂದು ಉತ್ತರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತೊಂದೆಡೆ, ನ್ಯಾಯಾಂಗ ಬಂಧನದಲ್ಲಿರುವ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ಅವರನ್ನು ವಿಚಾರಣೆ ನಡೆಸಿರುವ ಇ.ಡಿ ಅಧಿಕಾರಿಗಳು, ಆರೋಪಿಗಳಾದ ನೆಕ್ಕುಂಟಿ ನಾಗರಾಜ್, ನಾಗೇಂದ್ರ ಅವರ ಸಂಬಂಧಿ ನಾಗೇಶ್ವರ್ ರಾವ್, ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ನಗರದ ಖಾಸಗಿ ಹೋಟೆಲ್‌ನಲ್ಲಿ ಮಾತುಕತೆ ನಡೆಸಿರುವ ಕುರಿತು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.
ಇದನ್ನೂ ಓದಿ: ಶಿಗ್ಗಾವಿ ಭೀಕರ ಅಪಘಾತಕ್ಕೆ ಚಾಲಕನ ಅತಿ ವೇಗವೇ ಕಾರಣ: ಎಎಸ್ಪಿ - Haveri Car Accident