ಬೆಂಗಳೂರು: ಮಳೆಗಾಲದಲ್ಲಿ ಮನೆಯ ಸುತ್ತಮುತ್ತ ಎಲ್ಲೇ ನೀರು ನಿಂತರೂ ಡೆಂಗ್ಯೂ ಸೇರಿದಂತೆ ಹಲವು ವೈರಲ್ ಜ್ವರಗಳು ಹೆಚ್ಚಾಗುತ್ತದೆ. ಈ ಬಾರಿ ನಗರದಲ್ಲಿ ಜ್ವರದ ಪ್ರಮಾಣ ಹೆಚ್ಚಾಗಿಯೇ ಕಂಡು ಬರುತ್ತಿದೆ. ನಗರದ ಆಸ್ಪತ್ರೆಯಲ್ಲಿ ಕೂಡ ಸಾಕಷ್ಟು ರೋಗಿಗಳು ದಾಖಲಾಗುತ್ತಿದ್ದಾರೆ. ರೋಗ ಲಕ್ಷಣಗಳಲ್ಲಿ ಕೂಡ ಸಾಕಷ್ಟು ಬದಲಾವಣೆ ಕಂಡು ಬರುತ್ತಿದೆ.
ಡೆಂಗ್ಯೂ ಸಲುವಾಗಿ ಸಾಕಷ್ಟು ಮುನ್ನೆಚ್ಚೆರಿಕೆಯ ಕ್ರಮ ಸರ್ಕಾರ ಕೂಡ ಕೈಗೊಂಡಿದೆ. ಸಾಕಷ್ಟು ಫೀವರ್ ಕ್ಲಿನಿಕ್ಸ್ ಸಹ ಓಪನ್ ಆಗಿವೆ. ಜ್ವರ ಬಂದರೆ ಎಲ್ಲ ಆಸ್ಪತ್ರೆಗಳಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಸೊಳ್ಳೆಗಳನ್ನು ಕಡಿಮೆ ಮಾಡಲು ಪಾಲಿಕೆಯಿಂದ ಫಾಗಿಂಗ್ ಕೈಗೊಳ್ಳಲಾಗುತ್ತಿದೆ. ಟೆಸ್ಟಿಂಗ್ ಕಿಟ್ಸ್ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಸರಬರಾಜು ಮಾಡಲಾಗಿದೆ.
ಈ ಕುರಿತು ಕೆ.ಸಿ. ಜನರಲ್ ಆಸ್ಪತ್ರೆಯ ಫಿಸಿಷಿಯನ್ ತಜ್ಞ ವೈದ್ಯೆ ಶುಭಾ ಈಟಿವಿ ಭಾರತದ ಜೊತೆ ಮಾತನಾಡಿ, ಐದಾರು ದಿನದ ನಂತರವೇ ಬ್ಲಡ್ ಟೆಸ್ಟ್ನಲ್ಲಿ ಡೆಂಗ್ಯೂ ಲಕ್ಷಣಗಳು ಕಂಡು ಬರುತ್ತದೆ. ಮೂರ್ನಾಲ್ಕು ವರ್ಷಗಳ ಹಿಂದಿನ ಡೆಂಗ್ಯೂ ರೋಗದ ಲಕ್ಷಣಕ್ಕೂ ಈಗಿನದ್ದಕ್ಕೂ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿದೆ. ಈ ಹಿಂದೆ ಮೊದಲ ಬಾರಿ ಡೆಂಗ್ಯೂ ಕಾಯಿಲೆ ಬಂದವರಿಗೆ ಸಾಮಾನ್ಯ ಮೈಕೈ ನೋವು, ತಲೆನೋವು ಮತ್ತು ಜ್ವರದ ಲಕ್ಷಣಗಳಲ್ಲೂ ಕಂಡು ಬರುತ್ತಿತ್ತು. ಆದರೆ, ಈಗ ಏಕಾಏಕಿ ಪ್ಲೇಟ್ಲೆಟ್ಸ್ ಕಡಿಮೆಯಾಗುತ್ತಿದೆ. ಮುಂಚೆ ಮೂರ್ನಾಲ್ಕು ಬಾರಿ ಕಾಯಿಲೆ ಬಂದವರಿಗೆ ಮಾತ್ರ ಹೆಚ್ಚಿನ ಲಕ್ಷಣಗಳು ಕಂಡು ಬರುತ್ತಿತ್ತು ಎಂದು ಹೇಳಿದರು.
ಎಲ್ಲರೂ ಡೆಂಗ್ಯೂ ಬಂದ ತಕ್ಷಣ ಪ್ಲೇಟ್ಲೆಟ್ಸ್ ಬಗ್ಗೆಯೇ ಹೆಚ್ಚು ಜನರು ತಲೆಕೆಡಸಿಕೊಳ್ಳುತ್ತಾರೆ. ಆದರೆ, ಅಷ್ಟು ಯೋಚಿಸುವ ಅಗತ್ಯವಿಲ್ಲ. ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಡೆಂಗ್ಯೂ ರೋಗವಿದ್ದರೆ ಶಾಕ್ ಸಿನ್ಡ್ರೋಮ್ ಎಂದು ಕರೆಯುತ್ತೇವೆ. ಆಗ ಬಿಪಿ ಲೊ ಆಗುವ ಸಂಭವ ಹೆಚ್ಚಿರುತ್ತದೆ. ವಿಶ್ವ ಅರೋಗ್ಯ ಸಂಸ್ಥೆಯ ಗೈಡ್ಲೈನ್ಸ್ ಪ್ರಕಾರ 5 ಸಾವಿರಕ್ಕಿಂತ ಪ್ಲೇಟ್ಲೆಟ್ಸ್ ಕಡಿಮೆಯಾದರೆ ಮಾತ್ರ ಸಾಯುವ ಸಂಭವ ಹೆಚ್ಚಿರುತ್ತದೆ. 10 ಸಾವಿರಕ್ಕಿಂತ ಕಡಿಮೆ ಪ್ಲೇಟ್ಲೆಟ್ಸ್ ಇದ್ದರೆ ಮಾತ್ರ ಇನ್ಫ್ಯೂಶನ್ ಮಾಡುತ್ತೇವೆ. ಆದ್ದರಿಂದ ಡೆಂಗ್ಯೂ ಬಂದ ತಕ್ಷಣ ಪ್ಲೇಟ್ಲೆಟ್ಸ್ ಹಾಕುವಂತೆ ಆಸ್ಪತ್ರೆಗೆ ಹೋಗಿ ದುಂಬಾಲು ಬೀಳದೇ ಸಾಮಾನ್ಯ ಔಷಧ ತಗೆದುಕೊಂಡರೆ ಸಾಕಾಗುತ್ತದೆ. ಬ್ಲಡ್ ಬ್ಯಾಂಕ್ಗಳಲ್ಲಿ ಸಹ ಪ್ಲೇಟ್ಲೆಟ್ಸ್ ಪ್ರಮಾಣ ಸಾಕಷ್ಟಿದೆ ಎಂದು ಮಾಹಿತಿ ನೀಡಿದರು.
ತುಂಬಾ ಪ್ರಕರಣಗಳಲ್ಲಿ ಡೆಂಗ್ಯೂ ಧೃಡಪಟ್ಟಿರುವುದಿಲ್ಲ. ಸಿವಿಯರ್ ಡೆಂಗ್ಯೂ ರೋಗವಿದ್ದರೆ ಮಾತ್ರ ಬಿಪಿ ಲೋ ಆಗುವುದು ಮತ್ತು ಉಸಿರಾಟದ ತೊಂದರೆ ಕಂಡುಬರುತ್ತದೆ. ಸಾಮಾನ್ಯವಾಗಿ ನೀರು ಮತ್ತು ನೀರಿನ ಅಂಶ ಇರುವ ಪದಾರ್ಥಗಳನ್ನು ಹೆಚ್ಚು ಸೇವಿಸಿರುವುದರಿಂದಲೇ ಡೆಂಗ್ಯೂ ರೋಗವನ್ನು ತಡೆಗಟ್ಟಬಹುದು ಎನ್ನುತ್ತಾರೆ ಡಾ. ಶುಭಾ.
ಇದನ್ನೂ ಓದಿ: ಡೆಂಗ್ಯೂವಿನಿಂದ ಮಿದುಳಿನ ನರಮಂಡಲದ ಮೇಲೆ ಗಂಭೀರ ಪರಿಣಾಮ: ತಜ್ಞರು - Dengue