ಬೆಂಗಳೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಮಲ ಅರಳುವುದು ಖಚಿತ, ಬಿಜೆಪಿ ಅಭ್ಯರ್ಥಿಯಾಗಿ ನಾನು ಗೆಲ್ಲುತ್ತೇನೆ ಎಂದು ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಿವಾಸದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಡಾ.ಸಿ.ಎನ್ ಮಂಜುನಾಥ್, ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಬಿಜೆಪಿ ಕಚೇರಿಗೆ ಆಗಮಿಸಿದರು. ಅವರನ್ನು ಪಕ್ಷದ ನಾಯಕರು ಆತ್ಮೀಯವಾಗಿ ಸ್ವಾಗತ ಮಾಡಿದರು. ಪಕ್ಷದ ಸಂಪ್ರದಾಯದಂತೆ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಜಗನ್ನಾಥರಾವ್ ಜೋಶಿ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದರು. ನಂತರ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ಸಹಕಾರ ಕೋರಿದರು.
ಈ ವೇಳೆ ಮಾತನಾಡಿದ ಡಾ. ಮಂಜುನಾಥ್, ಈ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಅಗಿದ್ದೇನೆ. ಬಿಜೆಪಿ - ಜೆಡಿಎಸ್ ಒಳಗೊಂಡ ಎನ್‌ಡಿಎ ಅಭ್ಯರ್ಥಿ ಆಗಿದ್ದೇನೆ. ಗೆಲ್ಲುವ ಕುರಿತು ನನಗೆ ಆತ್ಮ ವಿಶ್ವಾಸ ಇದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಬಾರಿ ಬಿಜೆಪಿ ತಕ್ಕೆಗೆ ಬರುವ ವಿಶ್ವಾಸವೂ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ನೋಡಿ ಎಲ್ಲ ಕಡೆ ಬಿಜೆಪಿ, ಎನ್‌ಡಿಎ ಪರ ಅಲೆ ಇದೆ. ಅದರಂತೆ ನನ್ನ ಗೆಲುವು ಖಚಿತ. ಇಷ್ಟು ಮಾತ್ರವಲ್ಲದೇ ಮೋದಿ ಅವರಿಗೆ ಇದು ಹ್ಯಾಟ್ರಿಕ್ ಅಂತ ಹೇಳಬಹುದು. ಮೂರನೇ ಬಾರಿ ವಿಜಯ ಸಾಧಿಸಲಿದ್ದಾರೆ. 400ಕ್ಕೂ ಹೆಚ್ಚು ಸ್ಥಾನ ಎನ್‌ಡಿಎ ಗೆಲ್ಲುವ ವಿಶ್ವಾಸ ಇದೆ. ನಮ್ಮೆಲ್ಲರ ಆಶಯ ಮತ್ತೆ ಮೋದಿ ಪ್ರಧಾನಿ ಆಗುವುದಾಗಿದೆ ಎಂದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ ಡಿ.ಕೆ ಸುರೇಶ್ ಕುಕ್ಕರ್ ಹಂಚಿಕೆ ವಿಚಾರದ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಈ ಬಗ್ಗೆ ಸುದ್ದಿಗೋಷ್ಠಿ ಮಾಡಿದ್ದಾರೆ. ಈಗಾಗಲೇ ಏನಾಗ್ತಿದೆ ಅಂತ ಗೊತ್ತಿದೆ ಅಂತ ತಿಳಿಸಿದ್ದಾರೆ. ಪ್ರತೀ ಬಾರಿಯೂ ಚುನಾವಣೆ ಸಹಜ, ಆದರೆ ಆರೋಗ್ಯಕರ ಸ್ಪರ್ಧೆ ಆಗಬೇಕು. ಸ್ಪರ್ಧೆ ಆರೋಗ್ಯಕರ ಆಗಿರಬೇಕು ಅನ್ನೋದು ನನ್ನ ಆಶಯ. ಪ್ರಜಾತಂತ್ರ ವ್ಯವಸ್ಥೆಗೆ ಅರ್ಥ ಇರಬೇಕು ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ರಾಜಕಾರಣವನ್ನು ಟೀಕಿಸಿದರು.
ಪಕ್ಷದ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಮಾತನಾಡಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಳೆದ ಬಾರಿ ನಾನು ಸ್ಪರ್ಧೆ ಮಾಡಿದ್ದೆ. ಆರು ಲಕ್ಷಕ್ಕೂ ಅಧಿಕ ಮತಗಳನ್ನ ಪಡೆದಿದ್ದೆ. ಈ ಬಾರಿ ಉತ್ತಮ ವಾತಾವರಣ ಇದೆ. 2024ರ ಲೋಕಸಭಾ ಚುನಾವಣೆಗೆ ಡಾ. ಮಂಜುನಾಥ್ ಅವರನ್ನ ಬಿಜೆಪಿ ಆಯ್ಕೆ ಮಾಡಿದೆ. ಮುಂಬರುವ ಚುನಾವಣೆಯಲ್ಲಿ ಯಶಸ್ವಿಯಾಗಿ ಗೆದ್ದು ಬರಲಿ ಅಂತ ಆಶಯ ವ್ಯಕ್ತಪಡಿಸುತ್ತೇನೆ ಎಂದರು.
ಇದನ್ನೂ ಓದಿ: ಜೆಡಿಎಸ್, ದೇವೇಗೌಡರನ್ನು ದೇಶ ಗುರುತಿಸುವಂತೆ ಮಾಡಿದ್ದು ಕಾಂಗ್ರೆಸ್: ಸಂಸದ ಡಿ.ಕೆ.ಸುರೇಶ್ ತಿರುಗೇಟು