ದಾವಣಗೆರೆ: ಬಡ ಮಕ್ಕಳಿಗೆ ಉಚಿತ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಡಾ. ಬಿ. ಆರ್ ಅಂಬೇಡ್ಕರ್ ವಸತಿ ಶಾಲೆಗಳನ್ನು ಜಾರಿಗೆ ತರಲಾಗಿದೆ. ದುರಂತ ಎಂದರೆ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಮಕ್ಕಳಿಗೆ ಸುಸಜ್ಜಿತ ಕಟ್ಟಡದಲ್ಲಿ ಶಿಕ್ಷಣ ಸಿಗುವುದು ದೂರದ ಮಾತಾಗಿದೆ, ಬದಲಿಗೆ ಖಾಸಗಿ ಗೋದಾಮಿನಲ್ಲಿಯೇ ಶಾಲೆ ನಡೆಸಲಾಗುತ್ತಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಇರುವ ಡಾ. ಬಿ. ಆರ್ ಅಂಬೇಡ್ಕರ್ ವಸತಿ ಶಾಲೆ ಗೋದಾಮಿನಲ್ಲಿ ನಡೆಯುತ್ತಿದೆ. ಶಾಲೆಯಲ್ಲಿ 1 ರಿಂದ 10 ನೇ ತರಗತಿಗಳಿದ್ದು, ಮಕ್ಕಳಿಗೆ ಸಿಬ್ಬಂದಿ ಗೋದಾಮಿನಲ್ಲೇ ಪಾಠ ಹೇಳಿಕೊಡುತ್ತಿದ್ದಾರೆ. ಕಾರಿಗನೂರು ಗ್ರಾಮದಲ್ಲಿ ಇರುವ ಈ ಅಡಿಕೆಯ ಬೃಹತ್ ಗೋದಾಮಿನಲ್ಲಿ ಸಿಮೆಂಟ್ ಮೋಲ್ಡ್ ಗಳಿಂದ ಕೊಠಡಿಗಳನ್ನು ನಿರ್ಮಿಸಿ ಪಾಠ ಬೋಧಿಸಲಾಗ್ತಿದೆ.
ಕತ್ತಲೆಯಿಂದ ಕೂಡಿರುವ ಹತ್ತಕ್ಕೂ ಹೆಚ್ಚು ಕೊಠಡಿಗಳಲ್ಲಿ ಪುಟ್ಟ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಅಲ್ಲದೇ ಶಾಲೆ ನಡೆಯುವ ಗೋದಾಮಿನ ಪಕ್ಕದಲ್ಲೇ ಇರುವ ಮತ್ತೆರಡು ಗೋದಾಮುಗಳಲ್ಲಿ ವಿದ್ಯಾರ್ಥಿ ನಿಲಯವನ್ನು ಕೂಡ ನಡೆಸಲಾಗುತ್ತಿದೆ. ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಇಬ್ಬರಿಗೂ ಕೂಡ ಒಂದೊಂದು ಬೃಹತ್ ಗೋದಾಮಿನಲ್ಲಿ ಇರಲು ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ. ಆದ್ರೆ ಇದರಲ್ಲಿ ಗಾಳಿ ಮತ್ತು ಬೆಳಕು ಇಲ್ಲದೆ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ದೂರಿದ್ದಾರೆ
ಇದರಿಂದಾಗಿ ಗಾಳಿ ಬೆಳಕು ಇಲ್ಲದೇ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಅಲ್ಲದೇ ಮಕ್ಕಳಿಗೆ ಮಲಗಲು ಮಂಚ ಕೂಡ ನೀಡದೇ ಇರುವ ಕಾರಣ ಮಕ್ಕಳು ನೆಲದ ಮೇಲೆ ಮಲಗುತ್ತಿದ್ದಾರೆ. ಇನ್ನು ಅದೇ ಗೋದಾಮಿನಲ್ಲಿ ಶೌಚಾಲಯ ಕೂಡ ಇರುವುದರಿಂದ, ಅಲ್ಲಿ ಸರಿಯಾಗಿ ಗಾಳಿಯಾಡದೇ ಶೌಚಾಲಯದ ಕೆಟ್ಟ ವಾಸನೆ ಇಡೀ ಹಾಸ್ಟೆಲ್ನಲ್ಲಿ ಆವರಿಸುತ್ತಿದೆ. ಸ್ವಂತ ಕಟ್ಟಡ ಇಲ್ಲದೇ ಇರುವುದು ಇಷ್ಟೆಲ್ಲ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋದಾಮಿನಲ್ಲಿ ಶಾಲೆ ಆರಂಭವಾಗಿ ಐದು ವರ್ಷ : ಈ ಶಾಲೆಯನ್ನ 2017ರಲ್ಲಿ ಸರ್ಕಾರ ಮಂಜೂರು ಮಾಡಿದೆ. ಶಾಲೆ ಆರಂಭವಾಗಿ ಐದು ವರ್ಷಗಳೇ ಉರುಳಿದರೂ ಕೂಡ ಸ್ವಂತ ಕಟ್ಟಡ ಮಾತ್ರ ಮಕ್ಕಳು ಕಂಡಿಲ್ಲ. ಈ ಗೋದಾಮುಗಳೇ ಮಕ್ಕಳಿಗೆ ಆಟ, ಪಾಠ ಎಲ್ಲವೂ ಆಗಿದೆ. ಈ ಶಾಲೆಯಲ್ಲಿ ಸದ್ಯ 250 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಕ್ಕಳ ಕಲಿಕೆಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ತಿಂಗಳಿಗೆ 1,77,000 ರೂ. ಬಾಡಿಗೆಯನ್ನು ಮಾಲೀಕರಿಗೆ ಸಂದಾಯ ಮಾಡುತ್ತಿದೆ. ಅಲ್ಲದೇ ಪ್ರಾಂಶುಪಾಲರು ಸೇರಿ ಒಟ್ಟು 11 ಜನ ಸಿಬ್ಬಂದಿ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಹೇಳಿದ್ದೇನು? : ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಕೆ. ನಾಗರಾಜ್ ಅವರು ಈಟಿವಿ ಭಾರತ ಜೊತೆ ಮಾತನಾಡಿ, "ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಸಲಾಗುತ್ತಿದೆ. ತಿಂಗಳಿಗೆ 1,77,000 ರೂಪಾಯಿ ಬಾಡಿಗೆ ಕೊಡಲಾಗುತ್ತಿದೆ. ನೂತನ ಕಟ್ಟಡ ನಿರ್ಮಾಣ ಮಾಡಲು ಕಾರಿಗನೂರು ಗ್ರಾಮದಲ್ಲಿರುವ ಸರ್ವೇ ನಂಬರ್ 135 ರಲ್ಲಿ, 16 ಎಕರೆ 20 ಗುಂಟೆ ಜಾಗದಲ್ಲಿ ಶಾಲೆ ನಿರ್ಮಿಸಲು 07 ಎಕರೆ ವಿಶಾಲವಾದ ಜಾಗ ನಿಗದಿ ಮಾಡಲಾಗಿದೆ. ಕಟ್ಟಡ ನಿರ್ಮಾಣ ಮಾಡಲು 12,73,7,443 ರೂಪಾಯಿ ವೆಚ್ಚದ ಟೆಂಡರ್ ಕೂಡ ಕೊಡಲಾಗಿದೆ.
250 ಮಕ್ಕಳು ವ್ಯಾಸಂಗ ಮಾಡ್ತಿದ್ದಾರೆ, ಸ್ವಂತ ಕಟ್ಟಡ ಇಲ್ಲದೆ ಇರುವುದರಿಂದ ಸಮಸ್ಯೆ ಆಗಿದೆ. ಸುಸಜ್ಜಿತವಾದ ಬಾಡಿಗೆ ಕಟ್ಟಡ ನೋಡಿದ್ದರೂ ಕೂಡಾ ಕಟ್ಟಡ ಸಿಗದೇ ಇರುವುದರಿಂದ ಗೋದಾಮಿನಲ್ಲಿ ಶಾಲೆ ನಡೆಸಲಾಗುತ್ತಿದೆ. ಇನ್ನು ಜಿಲ್ಲಾಧಿಕಾರಿ ಜೊತೆ ಮಾತನಾಡಿ ಒಂದು ವಾರದಲ್ಲಿ ಶಾಲೆ ಸ್ಥಳಾಂತರ ಮಾಡಲಾಗುತ್ತದೆ. ಶಾಲೆ ಸ್ಥಳಾಂತರ ಮಾಡಲು 18 ಸ್ಥಳಗಳಿಗೆ ಭೇಟಿ ಕೊಟ್ಟಿದ್ದೇವೆ. ಆದರೆ ಯಾವುದೇ ಸುಸಜ್ಜಿತವಾದ ಕಟ್ಟಡ ಸಿಕ್ಕಿಲ್ಲ. ಶಾಲೆ ಆರಂಭವಾಗಿ ಐದು ವರ್ಷಗಳೇ ಕಳೆದಿವೆ. ಪೋಷಕರ ವಿರೋಧ ಸೇರಿ ಸಣ್ಣ ಪುಟ್ಟ ತೊಂದರೆಗಳಿವೆ, ಅದನ್ನು ಸರಿಪಡಿಸುತ್ತೇವೆ" ಎಂದಿದ್ದಾರೆ.
ಗೋದಾಮಿನ ಮಾಲೀಕರು ಹೇಳಿದ್ದೇನು? : ಮತ್ತಿ ಗ್ರಾಮದಲ್ಲಿ ಚಿಕ್ಕದಾಗಿ ಈ ಶಾಲೆ ಆರಂಭಿಸಲಾಗಿತ್ತು. ಆರಂಭದಲ್ಲಿ 50 ವಿದ್ಯಾರ್ಥಿಗಳಿಂದ ಕೂಡಿದ ಶಾಲೆಯಲ್ಲಿ ಈಗ 250 ವಿದ್ಯಾರ್ಥಿಗಳ ಸಂಖ್ಯೆ ಏರಿಕೆ ಆಗಿದೆ. ಈ ಹಿನ್ನೆಲೆ ಕಾರಿಗನೂರು ಗ್ರಾಮದಲ್ಲಿರುವ ಗೋದಾಮಿನಲ್ಲಿ ಶಾಲೆ ನಡೆಸಲಾಗುತ್ತಿದೆ. ಹೊಸ ಕಟ್ಟಡ ನಿರ್ಮಾಣ ಆಗುವ ತನಕ ಇಲ್ಲಿ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಇಲಾಖೆಯವರು ನೋಡಿಕೊಂಡು ಹೋಗಿ ಶಾಲೆ ಗೋದಾಮಿಗೆ ಶಿಫ್ಟ್ ಮಾಡಲಾಯಿತು. 85 ಸಾವಿರ ಖರ್ಚು ಮಾಡಿ ಶಾಲೆಯವರಿಗೆ ವ್ಯವಸ್ಥೆ ಮಾಡಲಾಗಿದೆ. ಹೊಸ ಕಟ್ಟಡ ಆಗುವ ತನಕ ಇರಲಿ ಎಂದು ಹೇಳಿದ್ದಕ್ಕೆ ಶೌಚಾಲಯ, ಕೊಠಡಿಗಳನ್ನು ಮಾಡಿಕೊಟ್ಟಿದ್ದೇವೆ. ನಾವು ಅವರಿಗಾಗಿ ಬಂಡವಾಳ ಹಾಕಿದ್ದೇವೆ. ಶಾಸಕರು ಬಸವಂತಪ್ಪ ಕೂಡ ನೋಡಿಕೊಂಡು ಹೋಗಿದ್ದಾರೆ, 250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ 1000 ವಿದ್ಯಾರ್ಥಿಗಳು ಇರುವಷ್ಟು ಸ್ಥಳ ಇದೆ ಎಂದು ಮಾಲೀಕರ ಸಂಬಂಧಿ ಅಜ್ಜಣ್ಣ ಮಾಹಿತಿ ನೀಡಿದರು.