ಹುಬ್ಬಳ್ಳಿ: ''ಮಹಾಭಾರತದ ಉದಾಹರಣೆ ಉಲ್ಲೇಖಿಸಿ ಆನ್ಲೈನ್ ಗೇಮಿಂಗ್ ಆಟ ಆಡಿದವರು ಉದ್ಧಾರ ಆಗಿರುವ ಇತಿಹಾಸವೇ ಇಲ್ಲ'' ಎಂದು ಹು - ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಯುವಕರಿಗೆ ಕಿವಿ ಮಾತು ಹೇಳಿದ್ದಾರೆ.
ನಗರದಲ್ಲಿ ಕಳೆದ ಮಂಗಳವಾರ ಬಿಇ ವಿದ್ಯಾರ್ಥಿ ರಾಕೇಶ ಶ್ರೀಶೈಲ ಜಂಬಲದಿನ್ನಿ (23) ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಆನ್ಲೈನ್ ಗೇಮ್ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆ ಯುವಕರಿಗೆ ಪೊಲೀಸ್ ಆಯುಕ್ತ ಶಶಿಕುಮಾರ್ ನೀತಿಪಾಠ ಮಾಡಿದ್ದಾರೆ.
ವಿದ್ಯಾರ್ಥಿಗಳೇ ಗೇಮಿಂಗ್ ಆಟಕ್ಕೆ ದುಡ್ಡು ಹಾಕಿ ಕಳೆದುಕೊಂಡು ಆತ್ಮಹತ್ಯೆ ಹಾದಿ ಹಿಡಿಯಬೇಡಿ. ಈ ನಿಟ್ಟಿನಲ್ಲಿ ಆನ್ಲೈನ್ ಗೇಮಿಂಗ್ನಿಂದ ದೂರವಿರಿ ಎಂದು ಯುವ ಸಮುದಾಯಕ್ಕೆ ಕರೆ ನೀಡಿದ್ದಾರೆ.
''ಇಸ್ಪೀಟು, ಬೆಟ್ಟಿಂಗ್ ಆನ್ಲೈನ್ ಗೇಮಿಂಗ್ನಲ್ಲಿ ದಯಮಾಡಿ ಯಾರೂ ಇಂತಹದರಲ್ಲಿ ದುಡ್ಡು ಕಳೆದುಕೊಳ್ಳಬೇಡಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಪಾಲಕರು ದುಡಿದು ದುಡ್ಡು ಕಳಿಸುತ್ತಾರೆ. ಆದರೇ ಹೊಟ್ಟೆಬಟ್ಟೆ ಕಟ್ಟಿ ನಮ್ಮವರು ನಮ್ಮನ್ನು ಓದಿಸುತ್ತಾರೆ ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಇಂತಹ ಆಟಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡರೆ ಸಾವೇ ಎಲ್ಲದಕ್ಕೂ ಪರಿಹಾರವಲ್ಲ, ದುಡುಕಿನ ನಿರ್ಧಾರ ಬೇಡ, ಆತ್ಮಹತ್ಯೆ ಎಂಬುದು ಬಹುದೊಡ್ಡ ಪಾಪದ ಕೆಲಸ ಎಂದರು.
ಸಮಸ್ಯೆಗಳಿಗೆ ಪರಿಹಾರವಿದೆ. ದುರಂತ ಅಂತ್ಯಕ್ಕೆ ಕೈ ಹಾಕಬೇಡಿ. ಲವ್, ಸಾಲ, ಸಾಲಗಾರರ ಕಾಟ ಇಂತಹ ಯಾವುದೇ ತರಹದ ಸಮಸ್ಯೆ ಬಂದರೂ ಪ್ರಾಣ ಕಳೆದುಕೊಳ್ಳಬೇಡಿ. ಜೀವನ ಅಂದ ಮೇಲೆ ಎಲ್ಲವೂ ಬರುತ್ತವೆ. ನಾವು ಇಡುವ ಹೆಜ್ಜೆ ಮುಖ್ಯವಾಗಿರಬೇಕು. ವಿದ್ಯಾರ್ಥಿಗಳು, ಯುವ ಸಮುದಾಯ ಯೋಚನೆ ಮಾಡಿ ಹೆಜ್ಜೆ ಇಡಬೇಕೆಂದು ಕರೆ ನೀಡಿದ್ದಾರೆ.
ಇದನ್ನೂ ಓದಿ: ನಾಗೇಂದ್ರರನ್ನು ಇಡಿ ವಶಕ್ಕೆ ಪಡೆಯುವ ಅವಶ್ಯಕತೆ ಇರಲಿಲ್ಲ: ಡಿಸಿಎಂ ಡಿಕೆಶಿ - D K Shivakumar