ಬೆಳಗಾವಿ : ಮನುಷ್ಯರಿಗೆ ವಿವಿಧ ರೋಗಗಳು, ಅಪಘಾತದಲ್ಲಿ ಗಾಯಗೊಂಡ ವೇಳೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ, ಅವರ ಜೀವ ಉಳಿಸಿರೋದನ್ನು ಎಲ್ಲರೂ ನೋಡಿದ್ದೇವೆ. ಆದರೆ, ಬೆಳಗಾವಿಯಲ್ಲಿ ಜೆಸಿಬಿ ಕೆಳಗೆ ಸಿಲುಕಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ನಾಗರ ಹಾವಿಗೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನೀಡುವ ಮೂಲಕ ಕಾಪಾಡಿದ್ದಾರೆ.
ಕಳೆದ ಶುಕ್ರವಾರ ಬೆಳಗಾವಿ ತಾಲೂಕಿನ ಕೆದ್ನೂರು ಗ್ರಾಮದ ಹೊರ ವಲಯದ ಕೃಷಿ ಜಮೀನಿನಲ್ಲಿ ರೈತರು ಕೆಲಸ ಮಾಡುತ್ತಿದ್ದಾಗ ನಾಗರಹಾವಿನ ಕತ್ತಿನ ಕೆಳಗೆ ಮತ್ತು ಹೊಟ್ಟೆಗೆ ಜೆಸಿಬಿ ಬಕೆಟ್ ತಾಗಿ ತೀವ್ರ ಪೆಟ್ಟಾಗಿ ನರಳಾಡುತ್ತಿತ್ತು. ಹಾವಿನ ದೇಹದ ಒಳಗಿನ ಭಾಗ ಹೊರಗೆ ಬಂದು, ಇನ್ನೇನು ಬದುಕುವುದಿಲ್ಲ ಎಂಬ ಸ್ಥಿತಿಗೆ ತಲುಪಿತ್ತು. ಕೂಡಲೇ ಜಮೀನಿನ ಮಾಲೀಕ ಉರಗ ತಜ್ಞ ಕೇತನ್ ಅವರಿಗೆ ಕರೆ ಮಾಡಿ, ಹಾವನ್ನು ರಕ್ಷಿಸುವಂತೆ ಕೋರಿದರು. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಕೇತನ್ ಕೂಡಲೇ ಬೆಳಗಾವಿ ಮಹಾಂತೇಶ ನಗರದಲ್ಲಿರುವ ಸರ್ಕಾರಿ ಮಲ್ಟಿಸ್ಪೆಷಾಲಿಟಿ ಪಶುವೈದ್ಯಕೀಯ ಆಸ್ಪತ್ರೆಗೆ ಸುರಕ್ಷಿತವಾಗಿ ಪೆಟ್ಟಿಗೆಯಲ್ಲಿ ತೆಗೆದುಕೊಂಡು ಹೋಗಿದ್ದಾರೆ.
ಇಲ್ಲಿನ ಮುಖ್ಯ ಪಶುವೈದ್ಯಾಧಿಕಾರಿ ಡಾ. ಹೆಚ್ ಬಿ ಸಣ್ಣಕ್ಕಿ, ಡಾ. ಮಹಾದೇವ ಮುಲ್ಲಾಟಿ ನೇತೃತ್ವದಲ್ಲಿ ವೈದ್ಯರ ತಂಡ ತಕ್ಷಣವೇ ನಾಗರಹಾವಿಗೆ ಅರವಳಿಕೆ ಇಂಜೆಕ್ಷನ್ ನೀಡಿ ಕುತ್ತಿಗೆಯ ಕೆಳಭಾಗದಲ್ಲಿರುವ ಒಳ ಅಂಗಾಂಗಗಳ ಹೊರತೆಗೆಯುವಿಕೆ, ಸೀಳುವಿಕೆ ಮತ್ತು ಮರು ಜೋಡಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಹಾವಿನ ದೇಹವನ್ನು ಪುನಃ ಜೋಡಿಸಲು ವೈದ್ಯರು 40ಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಿದ್ದಾರೆ. ಹಾವು ಪ್ರಾಣಾಪಾಯದಿಂದ ಪಾರಾಗಿದೆ. ವೈದ್ಯರ ಯಶಸ್ವಿ ಚಿಕಿತ್ಸೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಶಸ್ತ್ರಚಿಕಿತ್ಸೆ ವೇಳೆ ಹಾವು ಉಸಿರಾಡಲು ಆಮ್ಲಜನಕದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಹಾವಿಗೆ ಐದು ದಿನಗಳ ಚಿಕಿತ್ಸೆ ನೀಡುತ್ತಿದ್ದು, ಗಾಯಗಳು ವಾಸಿಯಾಗುವವರೆಗೆ ಉರಗ ತಜ್ಞ ಕೇತನ್ ಆರೈಕೆ ಮಾಡುತ್ತಿದ್ದಾರೆ.
ಹಾವಿಗೆ 40ಕ್ಕೂ ಹೆಚ್ಚು ಹೊಲಿಗೆ : ಈಟಿವಿ ಭಾರತ್ ಜೊತೆಗೆ ಮಾತನಾಡಿದ ಮುಖ್ಯವೈದ್ಯಾಧಿಕಾರಿ ಡಾ. ಹೆಚ್ ಬಿ ಸಣ್ಣಕ್ಕಿ, ಹಾವನ್ನು ಕೇತನ್ ಅವರು ತೆಗೆದುಕೊಂಡು ಬಂದಾಗ ಅದರ ಸ್ಥಿತಿ ಚಿಂತಾಜನಕವಾಗಿತ್ತು. ಹಾವಿನ ಚರ್ಮ, ಮಾಂಸಖಂಡ, ಬೆನ್ನು ಮೂಳೆಗಳು ತುಂಡಾಗಿದ್ದವು. ಅನಸ್ತೇಷಿಯಾ ನೀಡಿದ ಬಳಿಕ ನಾವು ಗಾಯ ಭಾಗವನ್ನು ತೊಳೆದು, ಪ್ರತಿಜೀವಕಗಳನ್ನು ಹಾಕಿದ್ದೇವೆ ಮತ್ತು ಅದರ ಅಂಗಗಳನ್ನು ಮರು ಜೋಡಿಸಿದ್ದೇವೆ. ಗಾಯವನ್ನು ಮುಚ್ಚಲು ಹಾವಿಗೆ 40ಕ್ಕೂ ಹೆಚ್ಚು ಹೊಲಿಗೆ ಹಾಕಿದ್ದೇವೆ. ಹಾವು ಚೇತರಿಸಿಕೊಳ್ಳಲು ನೀರು, ಆಹಾರ, ಮಾಂಸಹಾರದ ದ್ರವ ಮತ್ತು ನಿಯಮಿತ ಡ್ರೆಸ್ಸಿಂಗ್ ಅಗತ್ಯವಿದೆ. ಇದೇ ಮೊದಲ ಬಾರಿಗೆ ವಿಷಪೂರಿತ ಹಾವಿಗೆ ಇಂತಹ ದೊಡ್ಡ ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಎಂದರು.
ಹಾವು ಚೇತರಿಸಿಕೊಳ್ಳುತ್ತಿದೆ : ಉರಗ ರಕ್ಷಕ ಕೇತನ್ ಪ್ರತಿಕ್ರಿಯಿಸಿ, ನಾನು ಹಾವನ್ನು ರಕ್ಷಿಸಲು ಹೋದಾಗ ಗಂಭೀರವಾಗಿ ಗಾಯಗೊಂಡಿತ್ತು. ನಾನು ಈ ಹಿಂದೆ ಒಂದೆರಡು ಹಾವುಗಳನ್ನು ಮಹಾಂತೇಶ ನಗರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದೆ. ಹಾಗಾಗಿ, ಇದೇ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದು, ಹಾವು ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ : ರಾಯಚೂರು : ಮೂರ್ಛೆ ಹೋದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಸಿ ರಕ್ಷಣೆ