ಶಿವಮೊಗ್ಗ: ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿಯ ಹೊಟ್ಟೆಯಲ್ಲಿ ಪತ್ತೆಯಾದ ಮೊಬೈಲ್ ಅನ್ನು ಆಪರೇಷನ್ ಮೂಲಕ ಹೊರತೆಗೆಯಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ಪರಶುರಾಮ್ಗೆ ಆಪರೇಷನ್ ಆಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ.
ಶಿವಮೊಗ್ಗ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ಪರಶುರಾಮ್ @ ಪರ್ಸು @ ಚಿಂಗಾರಿ ಎಂಬಾತ ತನಗೆ ಹೊಟ್ಟೆ ನೋವು ಎಂದು ಒದ್ದಾಡುತ್ತಿದ್ದನು. ಕಳೆದ ಒಂದು ತಿಂಗಳ ಹಿಂದಿನಿಂದಲೂ ಹೊಟ್ಟೆ ನೋವು ಎಂದು ಕಾರಾಗೃಹದ ವೈದ್ಯರ ಬಳಿ ತೋರಿಸಿದ್ದಾನೆ. ನಂತರ ಕಾರಾಗೃಹದ ವೈದ್ಯರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದರು. ಮೆಗ್ಗಾನ್ ಆಸ್ಪತ್ರೆ ವೈದ್ಯರು ಪರೀಕ್ಷಿಸಿದಾಗ ಹೊಟ್ಟೆಯಲ್ಲಿ ಏನಿದೆ ಎಂದು ಕೇಳಿದಾಗ ಕಲ್ಲು ಇದೆ ಎಂದು ಹೇಳಿದ್ದ. ಮೆಗ್ಗಾನ್ ಆಸ್ಪತ್ರೆಯಲ್ಲಿ ಎಕ್ಸರೇ ಮಾಡಿ ನೋಡಿದಾಗ ಹೊಟ್ಟೆಯಲ್ಲಿ ಏನಿದೆ ಎಂಬುದು ಸರಿಯಾಗಿ ತಿಳಿದು ಬಂದಿರಲಿಲ್ಲ. ಮೆಗ್ಗಾನ್ ಆಸ್ಪತ್ರೆಯಲ್ಲಿ ಎಂಡೋಸ್ಕೊಪಿ ವ್ಯವಸ್ಥೆ ಇಲ್ಲದ ಕಾರಣ ಪರಶುರಾಮ್ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫಾರಸು ಮಾಡಲಾಗಿತ್ತು. ಇದರಿಂದ ಈತನನ್ನು ಏಪ್ರಿಲ್ 1 ರಂದು ಶಿವಮೊಗ್ಗ ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾಗ್ನಿಂದ ಬೆಂಗಳೂರಿಗೆ ಕಳುಹಿಸಲಾಗಿತ್ತು.
ಏಪ್ರಿಲ್ 3 ರಂದು ಬೆಂಗಳೂರಿನ ಕೇಂದ್ರ ಕಾರಾಗೃಹದದಿಂದ ಕೈದಿಗೆ ಹಿರಿಯ ಮುಖ್ಯ ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಕೊಡಿಸಿ, ಅವರ ಶಿಫಾರಸಿನಂತೆ ಏಪ್ರಿಲ್ 6 ರಂದು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಬಳಿಕ ಪರಶುರಾಮ್ ಹೊಟ್ಟೆಯಲ್ಲಿ ಮೊಬೈಲ್ ಕಂಡುಬಂದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಏಪ್ರಿಲ್ 25 ರಂದು ಶಸ್ತ್ರಚಿಕಿತ್ಸೆ ಮಾಡಿ, ಹೊಟ್ಟೆಯಿಂದ 1 ಮೊಬೈಲ್ ಫೋನ್ ಹೊರ ತೆಗೆದಿದ್ದಾರೆ. ಸದ್ಯ ಪರಶುರಾಮ್ ಚೇತರಿಕೆ ಕಂಡಿದ್ದಾನೆಂದು ಮೂಲಗಳು ತಿಳಿಸಿವೆ. ಈತ ಯಾವಾಗ ಯಾವ ಕಾರಣಕ್ಕೆ ಮೊಬೈಲ್ ನುಂಗಿದ್ದ ಎಂಬುದು ತಿಳಿದು ಬಂದಿಲ್ಲ.
ಇದನ್ನೂ ಓದಿ: ಜೈಲು ಗುಡಿಸಿ ಸಂಗ್ರಹಿಸಿದ ಹಣವನ್ನು ರಾಮ ಮಂದಿರಕ್ಕೆ ನೀಡಿದ ಮುಸ್ಲಿಂ ಯುವಕ