ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): 'ಬಿಜೆಪಿಯವರು ಕೆಲಸ ಮಾಡಿಲ್ಲ ಆದರೂ ಅವರಿಗೆ ಓಟು ಹಾಕಿದ್ದೀರಾ. ನಾವೂ ಕೆಲಸ ಮಾಡಿಲ್ಲ ಅಂದರೆ ನಮಗೂ ಓಟು ಹಾಕ್ತೀರಾ. ಆದರೆ ನಾವು ಅವರ ಹಾಗೇ ಮಾಡಲ್ಲ ಕೆಲಸ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಮಂಗಳವಾರ ಕುಟುಂಬ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದರು. "ನಾನು ನನ್ನ ಕುಟುಂಬ ಸಮೇತವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆಯಲು ಬಂದಿದ್ದೇನೆ. ರಾಜ್ಯದಲ್ಲಿ ಪ್ರಸ್ತುತ ಮಳೆ ಕಡಿಮೆ ಆಗಿದೆ. ಸಮೃದ್ಧವಾಗಿ ಮಳೆ ಬರುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ" ಎಂದರು.
ಈ ವೇಳೆ ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆಸ್ಪತ್ರೆಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ "ಈ ಪ್ರಶ್ನೆ ನೀವು ಯಾಕೆ ಬಿಜೆಪಿಯವರಲ್ಲಿ ಕೇಳಿಲ್ಲ. ಅವರು ಕೆಲಸ ಮಾಡಿಲ್ಲವಾದರೂ ನೀವು ಅವರಿಗೇ ಓಟು ನೀಡಿದ್ದೀರಿ. ನಾವು ಕೆಲಸ ಮಾಡಿಲ್ಲವಾದರೆ ನಮಗೆ ಓಟು ಹಾಕ್ತೀರಾ?. ಆದರೆ ನಾವು ಅವರ ಹಾಗೆ ಮಾಡಲ್ಲ. ಆಸ್ಪತ್ರೆಯ ಬಗ್ಗೆ ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಸಚಿವರ ಜೊತೆಗೆ ಮಾತನಾಡಿ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದು ಹೇಳಿದರು.
"ಕಾಂಗ್ರೆಸ್ ಸರಕಾರ ಯಾವುದೇ ಕಾರಣಕ್ಕೂ ಅರಣ್ಯದಂಚಿನಲ್ಲಿರುವ ಮನೆಗಳನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲ್ಲ. ಜನರು ಕೃಷಿ ಮಾಡುತ್ತಾ ವಾಸವಿರುವ ಭೂಮಿಯ ದಾಖಲಾತಿಗಳನ್ನು ಸರಿಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಪ್ರಾಧಿಕಾರ ರಚನೆ ಬಗ್ಗೆ ಪರಿಶೀಲನೆ ಮಾಡಲಾಗುವುದು. ಹಲವಾರು ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಅದನ್ನು ಪರಿಗಣಿಸಿ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾವನೆ ಮಾಡುತ್ತೇನೆ" ಎಂದು ಹೇಳಿದರು.
ಹಾಗೇ, ಚನ್ನಪಟ್ಟಣ ಉಪ ಚುನಾವಣೆಗೆ ಕುರಿತು ಡಿಕೆಶಿ "ಸ್ಪರ್ಧಿಸುವ ವಿಚಾರ ಪಕ್ಷಕ್ಕೆ ಬಿಟ್ಟ ವಿಚಾರ. ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತದೋ ಅದಕ್ಕೆ ಬದ್ಧನಾಗಿರುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಕೆಲವು ಎಂಎಲ್ಎಗಳು ಬಂದಿದ್ದರು. ಅವರು ಅರ್ಜಿ ಕೊಟ್ಟರೆ ವಿನಃ ಯಾರೂ ಮಾತಾಡಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ಕೊಟ್ಟರು.
ಬಳಿಕ ಸಂಪುಟ ನರಸಿಂಹ ಸ್ವಾಮಿ ಮಠ(ಶ್ರೀ ಸುಬ್ರಹ್ಮಣ್ಯ ಮಠ)ಕ್ಕೆ ಭೇಟಿ ನೀಡಿ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕಾಂಗ್ರೆಸ್ ಮುಖಂಡರು ಸೇರಿದಂತೆ ದೇವಸ್ಥಾನದ ಅಧಿಕಾರಿಗಳು ಉಪಸ್ಥಿತರಿದ್ದರು.