ಬೆಂಗಳೂರು: 'ಹುಬ್ಬಳಿಯಲ್ಲಿ ನಡೆದ ಅಂಜಲಿ ಮೋಹನ ಅಂಬಿಗೇರ ಹತ್ಯೆ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ ಅವರ ಕುಟುಂಬಕ್ಕೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು' ಎಂದು ಗೃಹ ಸಚಿವ ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.
"ಕಳೆದ ಮೇ 15 ರಂದು ಹುಬ್ಬಳಿಯಲ್ಲಿ ಅಂಜಲಿಯನ್ನು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಸಿಐಡಿಗೆ ಪ್ರಕರಣ ವರ್ಗಾಯಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಅಂಜಲಿ ಹತ್ಯೆ ಬಳಿಕ ಅವರ ಮನೆಗೆ ಹೋಗಿ ಭೇಟಿಯಾಗಿ ಬಂದಿದ್ದೆ. ಸಾಮಾನ್ಯವಾಗಿ ಕೊಲೆ ಪ್ರಕರಣದಲ್ಲಿ ಪರಿಹಾರ ಹಣ ನೀಡುವುದಿಲ್ಲ. ಮಾನವೀಯತೆಯ ದೃಷ್ಟಿಕೋನದ ಮೇರೆಗೆ ವಿಶೇಷ ಪ್ರಕರಣ ಎಂದು ಭಾವಿಸಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಪರಿಹಾರ ಹಣ ನೀಡಲು ಕ್ರಮ ಕೈಗೊಳ್ಳಲಾಗುವುದು" ಎಂದು ಗೃಹ ಸಚಿವರು ಆಶ್ವಾಸನೆ ನೀಡಿದರು.
ಅಂಜಲಿ ಕೊಲೆ ಪ್ರಕರಣವನ್ನು ತ್ವರಿತಗತಿಯಲ್ಲಿ ನ್ಯಾಯಾಲಯಕ್ಕೆ ನೀಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು "ಹತ್ಯೆ ಪ್ರಕರಣ ಸಂಬಂಧ ಸಿಐಡಿ ತನಿಖೆ ನಡೆಸಿ ನಿಗದಿತ ದಿನದೊಳಗೆ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ. ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ನ್ಯಾಯಾಲಯ ನಿಗದಿಪಡಿಸುವ ವಿಚಾರಣಾ ದಿನಾಂಕಗಳಂದು ಸಾಕ್ಷಿದಾರರಿಗೆ ಸಾಕ್ಷಿ ನುಡಿಯುವಂತೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಸಾಕ್ಷ್ಯದ ಬಗ್ಗೆ ಕೋರ್ಟ್ ಮಾನಿಟರಿಂಗ್ ಸೆಲ್ ಮುಖಾಂತರ ತ್ವರಿತ ವಿಚಾರಣೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಂತದಲ್ಲಿ ತ್ವರಿತಗತಿಯಲ್ಲಿ ನ್ಯಾಯಾಲಯಕ್ಕೆ ಒಪ್ಪಿಸುವ ಪ್ರಮೇಯ ಬರುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಹುಬ್ಬಳಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅಂಜಲಿ ಕುಟುಂಬಸ್ಥರಿಗೆ ಆಶ್ರಯ ಮನೆಯನ್ನು ನೀಡುವುದಾಗಿ ಭರವಸೆ ನೀಡಿದರು.