ಹುಬ್ಬಳ್ಳಿ: ಜೋಶಿಯವರೇ ಲಿಂಗಾಯತರ ವಿರುದ್ದ ಲಿಂಗಾಯತರನ್ನು ಎತ್ತಿ ಕಟ್ಟಿದ್ದೀರಿ. ಇದು ಲಿಂಗಾಯತರನ್ನು ಒಡೆದು ಆಳುವ ನೀತಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಮತ್ತೆ ಶಿರಹಟ್ಟಿಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ ಹೊರಹಾಕಿದರು.
ನಗರದಲ್ಲಿಂದು ಮಾತನಾಡಿದ ಅವರು, ನನ್ನ ಇಡೀ ತಂಡವನ್ನು ಒಡೆದರೂ ನನ್ನ ಏನೂ ಮಾಡೋಕೆ ಆಗಲ್ಲ. ಯುದ್ಧಭೂಮಿಯಲ್ಲಿ ಎಷ್ಟು ಜನ ಇದ್ರು, ಯಾರು ಇದ್ರು ಅನ್ನೋದು ಮುಖ್ಯವಲ್ಲ. ಅರ್ಜುನ, ಕೃಷ್ಣ ಇಬ್ಬರೇ ಇದ್ರು ಅನ್ನೋದು ಇತಿಹಾಸ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಮಠಾಧಿಪತಿಗಳು ರಾಜಕಾರಣಕ್ಕೆ ಬರಬಾರದು ಎಂದು ಜೋಶಿ ಅಭಿಮಾನಿಗಳು ಹೇಳುತ್ತಿದ್ದಾರೆ. ಅವರ ಅಭಿಮಾನಿಗಳು ಪ್ರಜ್ಞಾವಂತರಲ್ಲ. ಎಲ್ಲೂ ನಾನು ರಾಜಕೀಯಕ್ಕೆ ಬರ್ತೀನಿ ಅಂತಾ ಹೇಳಿಲ್ಲ, ನಾನು ಬರಬೇಕು ಎಂಬುದು ಜನರ ಅಭಿಪ್ರಾಯ. ನನ್ನ ಹಿಂದೆ ಬಿಜೆಪಿಯವರು ಇದ್ದಾರೆ, ಕಾಂಗ್ರೆಸ್ನವರೂ ಇದ್ದಾರೆ ಎಂದು ತಿಳಿಸಿದರು.
ನನ್ನನ್ನು ಎಲ್ಲ ಪಕ್ಷಗಳ ಪ್ರಮುಖರು ಸಂಪರ್ಕ ಮಾಡಿದ್ದಾರೆ. ನಾನು ಯಾರ ಹೆಸರೂ ಹೇಳಲ್ಲ. ರಾಜ್ಯದ ಮೂಲೆಮೂಲೆಗಳಿಂದ ಸಂಪರ್ಕಿಸುತ್ತಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡುವಂತೆ ಹೇಳುತ್ತಿದ್ದಾರೆ. ವ್ಯವಸ್ಥೆ ಅಸ್ಥಿರಗೊಂಡಾಗ ಮಠಾಧಿಪತಿಗಳು ಪ್ರವೇಶ ಮಾಡೋದು ಅನಿವಾರ್ಯ ಎಂದು ಹೇಳಿದರು.
ನಾನು ಸ್ಪರ್ಧೆ ವಿಚಾರ ಎಲ್ಲೂ ಹೇಳಿಲ್ಲ. ಸ್ಪರ್ಧೆ ಬಗ್ಗೆ ಬೆಂಗಳೂರಲ್ಲಿ ತೀರ್ಮಾನವಾಗುತ್ತದೆ. ಮಠಾಧಿಪತಿಗಳು, ಬುದ್ಧಿಜೀವಿಗಳ ಜತೆ ಸಾಧಕ-ಬಾಧಕಗಳನ್ನು ಚರ್ಚಿಸಿ ತೀರ್ಮಾನ ಮಾಡ್ತೀನಿ. ಜನ ಸ್ಪರ್ಧಿಸಿ ಅಂತ ಆಫರ್ ಕೊಟ್ಟಿದ್ದಾರೆ ಎಂದರು.
ಒಂದುವೇಳೆ ಕಾಂಗ್ರೆಸ್ ನಿಮಗೆ ಆಫರ್ ಕೊಟ್ರೆ ಏನ‌್ ಮಾಡ್ತೀರಿ ಎಂಬ ಪ್ರಶ್ನೆಗೆ, ಅಂತಹ ಆಫರ್ ಕೊಟ್ರೆ ನಾವು ವಿಚಾರ ಮಾಡ್ತೀವಿ ಎಂದು ಹೇಳಿದರು.