ದಾವಣಗೆರೆ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಭಾರತ ಸರ್ಕಾರದಡಿ ನಿರ್ಮಾಣಗೊಂಡಿರುವ ವಿಶಿಷ್ಟ ಚೇತನರ ಕೌಶಲ್ಯಾಭಿವೃದ್ಧಿ, ಪುನರ್ವಸತಿ ಸಬಲೀಕರಣ ಸಂಯುಕ್ತ ಪ್ರಾದೇಶಿಕ ಕೇಂದ್ರ ಇಂದು ಉದ್ಘಾಟನೆಗೊಂಡಿದೆ.
ದಾವಣಗೆರೆ ತಾಲೂಕಿನ ವಡ್ಡನಹಳ್ಳಿ ಗ್ರಾಮದ ಬಳಿ ನಿರ್ಮಿಸಿರುವ ನೂತನ ವಿಶಿಷ್ಟ ಚೇತನರ ಕೌಶಲ್ಯಾಭಿವೃದ್ಧಿ ಪುನರ್ವಸತಿ ಸಬಲೀಕರಣ ಸಂಯುಕ್ತ ಪ್ರಾದೇಶಿಕ ಕೇಂದ್ರವನ್ನು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ವೀರೇಂದ್ರಕುಮಾರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಕರ್ನಾಟಕ ಮತ್ತು ಗೋವಾ ಎರಡು ರಾಜ್ಯಗಳಿಗೆ ಸಂಬಂಧಿಸಿದಂತೆ ದಾವಣಗೆರೆ ವಡ್ಡನಹಳ್ಳಿ ಗ್ರಾಮದ ಬಳಿ ಒಂಬತ್ತು ಎಕರೆ ಪ್ರದೇಶದಲ್ಲಿ ಸುಮಾರು 25 ಕೋಟಿ ರೂ. ವೆಚ್ಚ ಮಾಡಿ ಈ CRC ಕೇಂದ್ರ ನಿರ್ಮಾಣ ಮಾಡಲಾಗಿದೆ. ಹಿಂದೆ ಕೇಂದ್ರ ನಿರ್ಮಾಣ ಕಾಮಗಾರಿಗೆ ಸಂಸದ ಜಿ ಎಂ ಸಿದ್ದೇಶ್ವರ ಭೂಮಿಪೂಜೆ ನೆರವೇರಿಸಿದ್ದರು. ಈಗ ನಿರ್ಮಾಣಗೊಂಡಿರುವ ಪುನರ್ವಸತಿ ಕೇಂದ್ರಕ್ಕೆ ಸಂಸದರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಯಕೊಂಡದ ಮಾಜಿ ಶಾಸಕ ಲಿಂಗಣ್ಣ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಜರಿದ್ದರು. ಈ ಸಂದರ್ಭದಲ್ಲಿ ವಿಶಿಷ್ಟ ಚೇತನರಿಗೆ ವಿವಿಧ ಉಪಕರಣಗಳನ್ನು ಸಂಸದರು ವಿತರಿಸಿದರು.
58.5 ಕೋಟಿ ರೂ.ವೆಚ್ಚದ ಯೋಜನೆ: ಸಂಸದ ಸಿದ್ದೇಶ್ವರ
ಸಂಸದ ಜಿ ಎಂ ಸಿದ್ದೇಶ್ವರ ಮಾತನಾಡಿ, ಮಾತನಾಡುವದಕ್ಕೆ ಬಾರದೇ ಇರುವವರಿಗೆ, ನಡೆಯಲಿಕ್ಕೆ ಬಾರದೇ ಇರುವವರಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಈ ಯೋಜನೆ ಪ್ರಕಾರ 58.5 ಕೋಟಿ ರೂ. ವೆಚ್ಚದಲ್ಲಿ ವಿಶಿಷ್ಟಚೇತನರ ಕೌಶಲ್ಯಾಭಿವೃದ್ಧಿ ಪುನರ್ವಸತಿ ಸಬಲೀಕರಣ ಕೇಂದ್ರದ ಕೆಲಸ ಆಗಬೇಕಿತ್ತು. ಅದ್ರಲ್ಲಿ ಈಗ 25 ಕೋಟಿ ರೂ.ಗಳಷ್ಟು ಕಾಮಗಾರಿ ಕೆಲಸ ಆಗಿದೆ. ಇನ್ನೂ 100 ಬೆಡ್ಗಳ ಆಸ್ಪತ್ರೆ ಆಗಬೇಕಿದೆ. ಇಲ್ಲಿ ಬರುವ ವಿಶಿಷ್ಟಚೇತನರಿಗೆ ತರಬೇತಿ ನೀಡಿ ನೌಕರಿ ಕೊಡುವ ಯೋಜನೆಯೂ ಇದರಲ್ಲಿದೆ. ಇಂಥ ಅನೇಕ ಯೋಜನೆಗಳು ಇದರಲ್ಲಿದ್ದು, ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು. ಕರ್ನಾಟಕ ಮತ್ತು ಗೋವಾದ ವಿಶಿಷ್ಟಚೇತನರಿಗೆ ತಂದಂತ ವಿಶೇಷವಾದ ಈ ಯೋಜನೆಯಾಗಿದೆ. ಈ ಯೋಜನೆ ದಾವಣಗೆರೆಗೆ ಸಿಕ್ಕಿರೋದು ಕರ್ನಾಟಕದ ಮತ್ತು ದಾವಣಗೆರೆ ಜನತೆಯ ಪುಣ್ಯ ಎಂದು ಸಂತಸ ವ್ಯಕ್ತಪಡಿಸಿದರು.
ವಿಶಿಷ್ಟ ಚೇತನರಿಗೆ ಇಲ್ಲಿ ಸಿಗುವ ತರಬೇತಿ ಏನು; ರಾಷ್ಟ್ರೀಯ ಬೌದ್ಧಿಕ ದಿವ್ಯಾಂಗ ಕೇಂದ್ರದ ಪ್ರಾಚಾರ್ಯ ಗಣೇಶ್ ಹಿರೇಗಾರ್ ಮಾತನಾಡಿ, ಗೋವಾ ಹಾಗೂ ಕರ್ನಾಟಕಕ್ಕಾಗಿ ದಾವಣಗೆರೆಯಲ್ಲಿ ವಿಶಿಷ್ಟ ಚೇತನ ವ್ಯಕ್ತಿಗಳ ಪುನರ್ವಸತಿ ಸಬಲೀಕರಣ ಕೇಂದ್ರ ಆರಂಭಗೊಂಡಿದೆ. ಇಲ್ಲಿ ವಿಶಿಷ್ಟಚೇತನ ಮಕ್ಕಳಿಗೆ ವಸತಿಗೃಹ ನಿರ್ಮಾಣ ಮಾಡುವ ಚಿಂತನೆ ನಡೆದಿದೆ. ಇಲ್ಲಿ ವಿಶಿಷ್ಟಚೇತನರಿಗೆ ವಿವಿಧ ತರಬೇತಿ ನೀಡಲಾಗುತ್ತಿದೆ. ಟೈಲರಿಂಗ್, ಪೇಪರ್ ಕಟ್ಟಿಂಗ್ ಮಾಡಿ ಪ್ಲೇಟ್ ತಯಾರಿಸುವುದು, ಕೃಷಿ ಚಟುವಟಿಕೆ, ಕಪ್ಗಳಿಗೆ ಫೋಟೊ ಪ್ರಿಂಟ್, ಲ್ಯಾಮಿನೆಷನ್, ಫೋಟೋಗ್ರಫಿ ಹೀಗೆ ವಿವಿಧ ತರಬೇತಿ ಕೊಟ್ಟು ಬೇರೆ ಬೇರೆ ಕಡೆ ಕೆಲಸ ಕೊಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಈಗಾಗಲೇ 16 ವಿಶಿಷ್ಟಚೇತನ ಮಕ್ಕಳಿಗೆ ಡೇಟಾ ಎಂಟ್ರಿ ಮಾಡಿಸುವ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.
ವಿಶಿಷ್ಟಚೇತನ ಮಕ್ಕಳಿಗೆ ಸಿಗಲಿದೆ ವಿಶೇಷ ಚಿಕಿತ್ಸೆ; ವಿಶೇಷಚೇತನರಿಗೆ, ಅಂಧರಿಗೆ, ವಿಶಿಷ್ಟಚೇತನ ಮಕ್ಕಳಿಗೆ ವಿಶೇಷ ಚಿಕಿತ್ಸೆ ಕೂಡ ಸಿಗಲಿದೆ. ವಿಶೇಷಚೇತನರಿಗೆ ಫಿಸಿಯೋಥೆರಪಿ, ಫಿಸಿಕಲ್ ಟ್ರೈನಿಂಗ್, ಮೊಮೆಂಟ್ ಥೆರಪಿ, ಹೈಡ್ರೋ ಥೆರಪಿ ರೀತಿಯ ಚಿಕಿತ್ಸೆ ಈ ಕೇಂದ್ರದಲ್ಲಿ ಸಿಗಲಿದೆ. ಇನ್ನು ಆಟಿಸಂ ಇದ್ರೆ ಸೆನ್ಸನ್ ಇಂಡಿಕೇಷನ್ ಟ್ರೈನಿಂಗ್, ಮೂಮೆಂಟ್ ಹಾಗೂ ಅಬ್ಜೆಕ್ಟ್ ಪರ್ಫಾಮೆನ್ಸ್ ತರಬೇತಿ ನೀಡಲಾಗುತ್ತದೆ. ಇಲ್ಲಿ ಮಕ್ಕಳಿಗೆ ತರಬೇತಿ ನೀಡಲು ಭಾರತ ಸರ್ಕಾರದಿಂದ 18 ಶಿಕ್ಷಕರು, 20 ಜನ ಗೆಸ್ಟ್ ಫ್ಯಾಕಲ್ಟಿ ಇಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂಓದಿ:ಅನಾಥೆಯ ಬಾಳಲ್ಲಿ ಬೆಳಕಾಗಿ ಬಂದ ಯುವಕ : ಮಂತ್ರ ಮಾಂಗಲ್ಯದಡಿ ಮದುವೆ ಮಾಡಿಸಿದ ಜಿಲ್ಲಾಡಳಿತ