ಚಿಕ್ಕಮಗಳೂರು : ಕಳೆದ 15 ವರ್ಷಗಳ ಬಳಿಕ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಅಕ್ಷರಶಃ ಡೆಂಗ್ಯೂ ಮಹಾಮಾರಿಗೆ ತತ್ತರಿಸಿ ಹೋಗಿದೆ. ಡೆಂಗ್ಯೂ ಪ್ರಕರಣಗಳು 500ರ ಗಡಿ ದಾಟಿ ಮುನ್ನುಗ್ಗುತ್ತಿದೆ. ಇತ್ತ ಮಹಾಮಾರಿ ಸೋಂಕಿಗೆ ಆರು ವರ್ಷದ ಪುಟ್ಟ ಬಾಲಕಿ ಬಲಿಯಾಗಿದ್ದು, ಡೆಂಗ್ಯೂ ಸೋಂಕಿತರಿಂದ ಆಸ್ಪತ್ರೆಗಳು ಭರ್ತಿಯಾಗಿದೆ.
ಕಡೂರು ತಾಲೂಕಿನ ಸಖರಾಯಪಟ್ಟಣದ ಆರು ವರ್ಷದ ಪುಟ್ಟ ಬಾಲಕಿ ಸಾನಿಯಾ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾಳೆ. ಕಳೆದ ಐದು ಆರು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಕಡೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಸೇರಿಸಲಾದ್ರೂ ಬಾಲಕಿಯ ಜೀವ ತೆಗೆದೆ ಬಿಟ್ಟಿದೆ ಈ ಮಹಾಮಾರಿ.
ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಮಗಳ ಸಾವು ತಂದೆ ಸೇರಿದಂತೆ ಕುಟುಂಬಸ್ಥರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ. ಮಗಳ ಸಾವಿನಿಂದ ನೊಂದಿರೋ ತಂದೆ ಆಸಿಫ್ ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಯ ಬಗ್ಗೆ ಮನವಿಯ ಜೊತೆಗೆ ಸರ್ಕಾರಕ್ಕೂ ಛೀಮಾರಿ ಹಾಕಿದ್ದಾರೆ.
ಈ ಬಗ್ಗೆ ಡಿಹೆಚ್ಒ ಅಶ್ವಥ್ ಬಾಬು ಅವರು ಮಾತನಾಡಿ, ''ಸಖರಾಯಪಟ್ಟಣದ ಆರು ವರ್ಷದ ಬಾಲಕಿ ಸಾನಿಯಾ ಎಂಬುವರು ಮೊದಲು 27ನೇ ತಾರೀಖು ಬಸವೇಶ್ವರ ಖಾಸಗಿ ಆಸ್ಪತ್ರೆ ಕಡೂರಿಗೆ ಹೋಗಿದ್ದಾರೆ. ಅಲ್ಲಿ ವೈದ್ಯರು ಮಗುವನ್ನು ಪರೀಕ್ಷಿಸಿದಾಗ ಮಗುವಿನ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿರುವುದನ್ನ ಕಂಡು, ಅಸೈಟಿಸ್ ರೀತಿ ಇರುವುದನ್ನು ಕಂಡು ಆ ಪ್ರಕರಣವನ್ನು ಸರ್ಜಿ ಹಾಸ್ಪಿಟಲ್ಗೆ ಶಿಫ್ಟ್ ಮಾಡಿದ್ದಾರೆ. ಅದನ್ನು ಕೂಲಂಕಷವಾಗಿ ತನಿಖೆ ಮಾಡುತ್ತಿದ್ದೇವೆ. ಬಾಲಕಿ ಅಂದೇ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ. ಅವರಿಗೆ ವೈರಲ್ ಎಮರೆಜಿಕ್ ಫಿವರ್ ಆಗಿದೆ. ಅದರಿಂದಾಗಿ ಮಗು ಡೆತ್ ಆಗಿದೆ. ಅದಕ್ಕೂ ಮುಂಚಿತವಾಗಿ ಮಗುವಿನ ತಂದೆ ತಾಯಿ ವೈದ್ಯಕೀಯ ಸಲಹೆಯ ವಿರುದ್ದವಾಗಿ ಡಿಸ್ಚಾರ್ಜ್ ಮಾಡಿಕೊಂಡು ಹೋಗಿದ್ದು, ಮಾರ್ಗ ಮಧ್ಯೆ ಮಗು ಮೃತಪಟ್ಟಿರುವ ವಿಷಯ ತಿಳಿದಿದೆ. ಇದು ಡೆಂಗ್ಯೂ ಡೆತ್ ಅಲ್ಲ'' ಎಂದಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಇದೇ ರೀತಿ ಪಿಯುಸಿ ವಿದ್ಯಾರ್ಥಿನಿ ಮಹಾಮಾರಿಗೆ ಬಲಿಯಾಗಿದ್ದಳು. ಇತ್ತ ಜಿಲ್ಲೆಯಲ್ಲಿ 509 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಸದ್ಯ 39ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯ ಪೈಕಿ ಚಿಕ್ಕಮಗಳೂರು ತಾಲೂಕು ಒಂದರಲ್ಲೇ 374 ಹೆಚ್ಚು ಮಹಾಮಾರಿ ಪ್ರಕರಣಗಳು ದಾಖಲಾಗಿದ್ದು, ಗ್ರಾಮಾಂತರ ಹಾಗೂ ನಗರ ಭಾಗದಲ್ಲೂ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಿತಿಮೀರಿದ ಸೊಳ್ಳೆಗಳ ಕಾಟ ಜಿಲ್ಲೆಯ ಜನರನ್ನು ಹೈರಾಣಾಗಿಸಿದ್ದು, 15 ವರ್ಷಗಳ ಬಳಿಕ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಹಾಮಾರಿ ಅಟ್ಟಹಾಸ ಮೆರೆಯಲು ಕಾರಣವಾಗಿದೆ. ಈ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸರ್ವ ಪ್ರಯತ್ನಪಟ್ಟರೂ ಡೆಂಗ್ಯೂ ಪ್ರಕರಣಗಳು ನಿಯಂತ್ರಣಕ್ಕೆ ಬಾರದಿರುವುದು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.
ಇದನ್ನೂ ಓದಿ : ಚಿಕ್ಕಮಗಳೂರು: ಡೆಂಗ್ಯೂ ಮಹಾಮಾರಿಗೆ ಬಾಲಕಿ ಬಲಿ - Girl dies of dengue