ಬೆಂಗಳೂರು : ಬೆಂಗಳೂರಿಗರಿಗೆ ಮತ್ತೊಂದು ಬರೆ ಬೀಳುವ ಮುನ್ಸೂಚನೆಯನ್ನು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ನೀಡಿದ್ದಾರೆ. ನೀರಿನ ದರ ಹೆಚ್ಚಿಸುವ ಅನಿವಾರ್ಯತೆ ಬಗ್ಗೆ ಒಪ್ಪಿಕೊಂಡಿದ್ದಾರೆ. ಆ ಮೂಲಕ ಸದ್ಯದಲ್ಲೇ ಬೆಂಗಳೂರಿಗರಿಗೆ ನೀರಿನ ದರ ಏರಿಕೆಯ ಬರೆ ಬೀಳಲಿದೆಯಾ? ಎಂಬ ಆತಂಕ ಮೂಡಿದೆ.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಳೆದ 14 ವರ್ಷಗಳಿಂದ ಬೆಂಗಳೂರು ಜಲಮಂಡಳಿ ನೀರಿನ ಬಿಲ್ ಹೆಚ್ಚಳ ಮಾಡಿಲ್ಲ. ಆದ್ರೆ ಪ್ರಸ್ತುತ ಜಲಮಂಡಳಿಯ ವಿದ್ಯುತ್ ವೆಚ್ಚ ಹೆಚ್ಚಾಗಿದೆ. ಜಲಮಂಡಳಿ ಸಿಬ್ಬಂದಿಗೆ ವೇತನ ನೀಡಲು ಹಣ ಇಲ್ಲ. ಹಾಗಾಗಿ ನೀರಿನ ಬಿಲ್ ಹೆಚ್ಚಿಸಬೇಕೋ, ಬೇಡವೋ ಎಂದು ನೀವೇ ಹೇಳಿ ಎಂದು ನೀರಿನ ದರ ಏರಿಕೆಯ ಮುನ್ಸೂಚನೆ ನೀಡಿದರು.
ನೀಟ್ಗೆ ಪರ್ಯಾಯವಾಗಿ ಪ್ರವೇಶ ಪರೀಕ್ಷೆಗೆ ಚಿಂತನೆ : ನೀಟ್ ಅಕ್ರಮದ ಬಗ್ಗೆ ಈಗಾಗಲೇ ನಾನು ತಿಳಿಸಿದ್ದೇನೆ. ಇದರಲ್ಲಿ ದೋಷ ಇದೆ. ಇದರ ಬಗ್ಗೆ ಹತ್ತು ದಿನದ ಹಿಂದೆನೇ ನಮ್ಮ ರಾಷ್ಟ್ರೀಯ ನಾಯಕರು ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು. ಮರು ಪರೀಕ್ಷೆಯನ್ನು ಮಾಡಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
ತಮಿಳುನಾಡು ರೀತಿ ನಾವು ಯೋಚನೆ ಮಾಡುವ ಪರಿಸ್ಥಿತಿ ಬಂದಿದೆ. ಇದು ಚರ್ಚೆಯಲ್ಲಿ ಇದೆ. ನಮ್ಮವರಿಗೆ ಅನ್ಯಾಯವಾಗಬಾರದು. ತಮಿಳುನಾಡು ಮಾದರಿಯಲ್ಲಿ ಪರ್ಯಾಯವಾಗಿ ಪ್ರವೇಶ ಪರೀಕ್ಷೆ ನಡೆಸಲು ಚಿಂತನೆ ನಡೆಯುತ್ತಿದೆ. ನಮ್ಮ ಮಕ್ಕಳಿಗೆ ಮೊದಲು ಆದ್ಯತೆ ಇರಬೇಕು ಎಂದು ಇದೇ ವೇಳೆ ತಿಳಿಸಿದರು.
ಯಾವ ಲೀಸ್ಗೂ ಕೊಡಲ್ಲ : ಸರ್ಕಾರದ ಆಸ್ತಿಯನ್ನು ಅಡಮಾನ ಇಡುವ ಪ್ರಸ್ತಾಪ ಇದೆಯಾ? ಎಂಬ ಪ್ರಶ್ನೆಗೆ, ಸರ್ಕಾರಿ ಜಮೀನನ್ನು ಯಾವುದನ್ನೂ ಅಡಮಾನ ಇಡುವುದಿಲ್ಲ. ನಮ್ಮ ಆಸ್ತಿಯನ್ನು ಸಮೀಕ್ಷೆ ಮಾಡುತ್ತಿದ್ದೇವೆ. ಸರ್ಕಾರಿ ಆಸ್ತಿಯನ್ನು ರಕ್ಷಣೆ ಮಾಡಲು ಮುಂದಾಗಿದ್ದೇವೆ. ಯಾವ ಲೀಸ್ಗೂ ಕೊಡಲ್ಲ ಎಂದು ಸ್ಪಷ್ಟಪಡಿಸಿದರು.
ಜೂ.27ರಂದು ಕೆಂಪೇಗೌಡರ ಜಯಂತಿ: ಜೂ. 27ರಂದು ಕೆಂಪೇಗೌಡರ ಜಯಂತಿ ಆಚರಣೆಗೆ ಇಂದು ಸಂಘ ಸಂಸ್ಥೆಗಳ ಮುಖಂಡರ ಸಭೆ ಮಾಡಿದ್ದೇನೆ. ನೂರಕ್ಕೂ ಹೆಚ್ಚು ಮುಖಂಡರು ಭಾಗಿಯಾಗಿದ್ದರು. ಜೂ. 27 ರಂದು ಬೆಂಗಳೂರಿನಲ್ಲಿ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಆದರೆ, ಎಲ್ಲಿ ಮಾಡಬೇಕೆಂದು ಚರ್ಚೆ ನಡೆದಿದೆ. ಅರಮನೆ ಮೈದಾನ, ಕಂಠೀರವ ಸ್ಟೇಡಿಯಂ ಒಂದರಲ್ಲಿ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದರು.
ಆರು ಕಡೆಗಳಿಂದ ಜ್ಯೋತಿಗಳು ಬರಲಿವೆ. ಮುಖಂಡರು ಹಲವು ಸಲಹೆ ನೀಡಿದ್ದಾರೆ. ಜನ್ಮಸ್ಥಳದಲ್ಲಿ 10 ಎಕರೆ ಮಂಜೂರಾತಿ ಆಗಿದೆ. ಜನ್ಮಸ್ಥಳ ಅಭಿವೃದ್ಧಿಗೆ ಅನುದಾನ ರಿಲೀಸ್ ಮಾಡಬೇಕಿದೆ. ಸುಮ್ಮನಹಳ್ಳಿಯಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ನಿರ್ಮಾಣ ಮಾಡಲು ನಿರ್ಧಾರವಾಗಿದೆ. 5 ಎಕರೆ ಜಾಗದಲ್ಲಿ ಕಚೇರಿ ನಿರ್ಮಾಣ ಆಗಲಿದೆ. ಮಾಗಡಿಯಲ್ಲಿ ಐಕ್ಯ ಸ್ಥಳದ ಅಭಿವೃದ್ಧಿ ಮಾಡಲಿದ್ದೇವೆ ಎಂದರು.
ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ವಿಚಾರಣ ಸಂಕಿರಣ ಮಾಡಲಿದ್ದೇವೆ. ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮ ನಡೆಸಲಿದ್ದೇವೆ. ತಾಲೂಕು ಮಟ್ಟದಲ್ಲಿಯೂ ಕಾರ್ಯಕ್ರಮ ನಡೆಸುತ್ತೇವೆ. ಜಿಲ್ಲಾ ಕೇಂದ್ರಗಳಿಗೆ ತಲಾ ಒಂದು ಲಕ್ಷ ರೂ. ಕೊಡಲು ತೀರ್ಮಾನ ಆಗಿದೆ. ಈ ಸಂಬಂಧ ಸರ್ಕಾರಿ ಆದೇಶ ಹೊರಡಿಸಲಾಗುವುದು. ತಾಲೂಕು ಕೇಂದ್ರಕ್ಕೆ ನೀಡುವ 50,000 ರೂ.ವನ್ನು ಏರಿಕೆ ಮಾಡಲು ಚಿಂತನೆ ಇದೆ ಎಂದು ಡಿಕೆಶಿ ತಿಳಿಸಿದರು.
ಇದನ್ನೂ ಓದಿ : ಬಂಡವಾಳ ಹೂಡಿಕೆದಾರರ ಆಕರ್ಷಣೆಗೆ ಶೀಘ್ರ ಪ್ರವಾಸೋದ್ಯಮ ನೀತಿ ಜಾರಿ: ಡಿಸಿಎಂ ಡಿ.ಕೆ.ಶಿವಕುಮಾರ್ - DCM DK Shivakumar