ಬೆಂಗಳೂರು : ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಮಾಲ್ಗಳು, ಗೇಮಿಂಗ್ ಜೋನ್ಗಳು, ಮನರಂಜನಾ ಕೇಂದ್ರಗಳಲ್ಲಿ ಅಗ್ನಿ ದುರಂತ ಸೇರಿದಂತೆ ಎಲ್ಲಾ ರೀತಿಯ ಅನಾಹುತ ತಪ್ಪಿಸಲು ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಡಿಸಿಎಂ ಡಿ. ಕೆ ಶಿವಕುಮಾರ್ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದಾರೆ.
ಈ ವಿಚಾರವಾಗಿ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೆ ಶಿವಕುಮಾರ್ ಅವರು ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ, "ಗುಜರಾತಿನ ರಾಜ್ ಕೋಟ್ನ ಮನರಂಜನಾ ಕೇಂದ್ರದಲ್ಲಿ ಶನಿವಾರ ಸಂಜೆ ಸಂಭವಿಸಿರುವ ಅಗ್ನಿ ಅವಘಡ ಅತ್ಯಂತ ಕಳವಳಕಾರಿಯಾಗಿದೆ. ಈ ದುರಂತ ಎಚ್ಚರಿಕೆ ಗಂಟೆಯಾಗಿದ್ದು, ಬೆಂಗಳೂರಿನಲ್ಲಿರುವ ಮಾಲ್ ಹಾಗೂ ಇತರೆ ಜನನಿಬಿಡ ಕೇಂದ್ರಗಳಲ್ಲಿ ಅಗ್ನಿ ದುರಂತ ಸೇರಿದಂತೆ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆಯೇ? ಎಂದು ಸಂಬಂಧಪಟ್ಟ ಅಧಿಕಾರಿಗಳಿಂದ ಪರಿಶೀಲನೆ ನಡೆಸಬೇಕು'' ಎಂದು ಆದೇಶ ನೀಡಿದ್ದಾರೆ.
ಈ ಕೇಂದ್ರಗಳಲ್ಲಿ ಈಗಾಗಲೇ ಸೂಚಿಸಿರುವ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆಯೇ? ಎಂದು ಪರಿಶೀಲಿಸಬೇಕು. ಬೆಂಗಳೂರಿನಲ್ಲಿ ಗುಜರಾತ್ನಂತಹ ಯಾವುದೇ ದುರ್ಘಟನೆ ನಡೆಯಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಇದನ್ನೂ ಓದಿ : ಸಿಎಂ ಸಿಟಿ ರೌಂಡ್ಸ್: ಮೈಸೂರು ರಸ್ತೆಯ ರಾಜಕಾಲುವೆಗಳ ಪರಿಶೀಲನೆ, ಅಧಿಕಾರಿಗಳಿಗೆ ತರಾಟೆ - CM City Rounds