ಬೆಂಗಳೂರು: ಕೆಂಗೇರಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ 5 ಲಕ್ಷ ರೂಪಾಯಿ, ಮನೆಗೆ ನೀರು ನುಗ್ಗಿ ತೊಂದರೆ ಉಂಟಾಗಿರುವವರಿಗೆ ತಲಾ 10 ಸಾವಿರ ಪರಿಹಾರ, ನಿರಾಶ್ರಿತರಿಗೆ ವಾಸಿಸಲು ತಾತ್ಕಾಲಿಕ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮಳೆಯಿಂದ ಸಮಸ್ಯೆಗೆ ಒಳಗಾಗಿರುವ ಯಲಹಂಕದ ಕೇಂದ್ರಿಯ ವಿಹಾರ ವಸತಿ ಸಮುಚ್ಚಯ, ಬ್ಯಾಟರಾಯನಪುರದ ಮರಿಯಣ್ಣಪಾಳ್ಯ, ಕೆ ಆರ್ ಪುರಂನ ಹೊರಮಾವಿನ ಶ್ರೀ ಸಾಯಿ ಬಡಾವಣೆಗೆ ಅವರು ಪಾಲಿಕೆ ಅಧಿಕಾರಿಗಳ ತಂಡದೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿವೀಕ್ಷಣೆಯ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿ, ನಗರದಲ್ಲಿ ಮುಲಾಜಿಲ್ಲದೆ ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ ನೀಡಲಾಗಿದೆ. ಮಳೆ ನೀರುಗಾಲುವೆಗಳನ್ನು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಲು ವಿಶ್ವಬ್ಯಾಂಕಿನಿಂದ 1 ಸಾವಿರ ಕೋಟಿ ಸಾಲ ಪಡೆದು ಈಗಾಗಲೇ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನೀರುಗಾಲುವೆ ಸ್ವಚ್ಛತಾ ಕೆಲಸದ ವಿಚಾರವಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಕೆಲಸ ಮಾಡುತ್ತಿದ್ದಾರೆ. ಎನ್.ಡಿ.ಆರ್.ಎಫ್ ಅನುದಾನ ಸೇರಿದಂತೆ ವಿವಿಧ ಯೋಜನೆಗಳ ಅಡಿ ಕೆರೆಗಳ ಸ್ವಚ್ಛತೆ, ಹೂಳು ತೆಗೆಯುವ ಕೆಲಸ ಮಾಡಲಾಗುವುದು. ಶೀಘ್ರದಲ್ಲೇ ಕೆರೆ ನಿರ್ವಹಣಾ ಸಮಿತಿಯ ಸಭೆ ಕರೆಯಲಾಗುವುದು ಎಂದು ಹೇಳಿದರು.
ಕೋರ್ಟ್ ತಡೆ ತಂದರೂ ಡೋಂಟ್ಕೇರ್: ಅನೇಕ ಕಡೆ ರಾಜಕಾಲುವೆ ಒತ್ತುವರಿ ತೆರವುಗೊಳಿಸದಂತೆ ನ್ಯಾಯಾಲಯದಿಂದ ಕೆಲವರು ತಡೆಯಾಜ್ಞೆ ತಂದಿದ್ದಾರೆ. ಆದ್ದರಿಂದ ಕೆಲಸ ವಿಳಂಬವಾಗುತ್ತಿದೆ. ಇಂತಹ ತುರ್ತು ಸಂದರ್ಭಗಳಲ್ಲಿ ತಡೆಯನ್ನೂ ಮೀರಿ ಒತ್ತುವರಿ ತೆರವು ನಡೆಯಲಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸಿ ಹಾಗೂ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದರು.
ಜೊತೆಗೆ, ಬಿಡಿಎ ಮತ್ತು ಬಿಬಿಎಂಪಿಗೂ ಸೂಚನೆ ನೀಡಿದ್ದೇನೆ. ಯಾರೇ ಖಾಸಗಿಯವರು ಅಡ್ಡಿ ಪಡಡಿಸಿದರೂ ನಮ್ಮ ಕೆಲಸ ಮಾಡಿಯೇ ಮಾಡುತ್ತೇವೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯದ ತಡೆ ಮುಖ್ಯವಲ್ಲ. ನಮಗೆ ಸಾರ್ವಜನಿಕರ ಹಿತ ಮುಖ್ಯ. ನೀರು ಸರಾಗವಾಗಿ ಹರಿಯುವ ಕಡೆ ಒತ್ತುವರಿ ತೆರವುಗೊಳಿಸಲು ಕೂಡಲೇ ಕೆಲಸ ಮಾಡಬೇಕು ಎಂದು ಆದೇಶಿಸಿದ್ದಾಗಿ ಡಿಸಿಎಂ ಹೇಳಿದರು.
115-120 ವರ್ಷಗಳ ಇತಿಹಾಸದಲ್ಲಿಯೇ ಯಲಹಂಕದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ನಮಗೆ ಇಷ್ಟು ಪ್ರಮಾಣದಲ್ಲಿ ಮಳೆ ಬರುತ್ತದೆ ಎನ್ನುವ ಕಲ್ಪನೆಯೂ ಇರಲಿಲ್ಲ. ಎಲ್ಲೆಲ್ಲಿ ನೀರು ನುಗ್ಗುತ್ತಿದೆ ಹಾಗೂ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡುವುದಕ್ಕೆ ಜಾಗಗಳನ್ನು ಗುರುತಿಸಲಾಗುತ್ತಿದೆ ಎಂದರು.
ಈ ವೇಳೆ ಪರಿಹಾರ ಕಾರ್ಯ ವೀಕ್ಷಣೆ ಜತೆಗೆ ಅಪಾರ್ಟ್ ಮೆಂಟ್ ನಿವಾಸಿಗಳ ಸಂಘದ ಸದಸ್ಯರ ಜೊತೆಗೆ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಿದರು. ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ಸಿಬ್ಬಂದಿ ಜೊತೆ ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಸ್ಥಳಾಂತರಗೊಂಡ ನಿವಾಸಿಗಳಿಗೆ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ನಿಲ್ಲದ ಮಳೆ ಆರ್ಭಟ: ಫ್ಲೈಓವರ್ ಕೆಳಭಾಗ ಸಂಪೂರ್ಣ ಜಲಾವೃತ, ಜನರ ಪರದಾಟ