ಬೆಂಗಳೂರು: ಕಳೆದ ವರ್ಷ 52 ಸಾವಿರ ಗಿಡಗಳನ್ನು ಶಾಲಾ ಮಕ್ಕಳೇ ನೆಟ್ಟು ಬೆಳೆಸಿದ್ದಾರೆ. ಈ ವರ್ಷ ಅನೇಕ ಶಾಲೆಗಳ ಜೊತೆ ಒಪ್ಪಂದ ಮಾಡಿಕೊಂಡು 2 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡುವ ಹಸಿರು ರಕ್ಷಕ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಕಬ್ಬನ್ ಪಾರ್ಕ್ನ ಬಾಲ ಭವನದಲ್ಲಿ ಇಂದು ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬ್ರ್ಯಾಂಡ್ ಬೆಂಗಳೂರು ಹಸಿರುಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಿಡ ನೆಟ್ಟರೆ ಮರ, ಮರದಿಂದ ಮಳೆ, ಮಳೆ ಬಂದರೆ ನೀರು, ನೀರು ಇದ್ದರೆ ನಾವು, ನೀವು. ಪ್ರಪಂಚದಲ್ಲಿ ನೀರು ಮತ್ತು ಪವರ್ಗೆ ಯುದ್ದಗಳು ಆಗುತ್ತವೆ ಎಂದು ಅನೇಕ ಜ್ಞಾನಿಗಳು ಹೇಳಿದ್ದಾರೆ ಎಂದರು.
ಬ್ರ್ಯಾಂಡ್ ಬೆಂಗಳೂರು, ಗ್ರೀನ್ ಬೆಂಗಳೂರು: ಬೆಂಗಳೂರು ಇಷ್ಟರ ಮಟ್ಟಿಗೆ ಬೆಳೆಯುತ್ತದೆ ಎಂದು ನಾಡಪ್ರಭು ಕೆಂಪೇಗೌಡರಿಗೆ ತಿಳಿದಿರಲಿಲ್ಲ. ಇಂದು ಆರೋಗ್ಯ, ಶಿಕ್ಷಣ, ಕೈಗಾರಿಕೆ, ಉದ್ದಿಮೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಬೆಂಗಳೂರು ಬೆಳೆಯುತ್ತಿದೆ. ನಮ್ಮ ಹಿರಿಯರು ಬೆಂಗಳೂರನ್ನು ಹಸಿರಿನಿಂದ ಕಂಗೊಳಿಸಿದ್ದರು. ಇದನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕಾರಣಕ್ಕೆ ಹಸಿರು ರಕ್ಷಕ ಎನ್ನುವ ಅಭಿಯಾನ ಪ್ರಾರಂಭ ಮಾಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಉಷ್ಣಾಂಶ 28 ಡಿಗ್ರಿಗಿಂತ ಹೆಚ್ಚು ಹೋಗುತ್ತಿರಲಿಲ್ಲ. ಈಗ 36 ದಾಟಿದೆ. ಬೆಂಗಳೂರಿನ ಹಸಿರನ್ನು ಉಳಿಸಲು ಅನೇಕ ಸ್ವಯಂ ಸೇವಾ ಸಂಘಗಳು ಕೆಲಸ ಮಾಡುತ್ತಿವೆ. ಇವಕ್ಕೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಲಿದೆ. ಬೆಂಗಳೂರಿನ ಹಸಿರು ಸಂರಕ್ಷಣೆಗೆ ವಿವಿಧ ಇಲಾಖೆಗಳ ಅಡಿಯಲ್ಲಿ 310 ಕೋಟಿ ಹಾಗೂ 15ನೇ ಹಣಕಾಸು ಆಯೋಗದ ಅಡಿ 100 ಕೋಟಿ - ಹೀಗೆ ಒಟ್ಟು 410 ಕೋಟಿ ಹಣ ಮೀಸಲಿಡಲಾಗಿದೆ ಎಂದರು.
ತಂದೆ, ತಾಯಿಗಳು ಮಕ್ಕಳನ್ನು ಸಾಕಿದಂತೆ ಶಾಲಾ ಮಕ್ಕಳು ತಾವು ನೆಟ್ಟ ಗಿಡಗಳನ್ನು ಆರೈಕೆ ಮಾಡಬೇಕು. ಹಸಿರು ಬದುಕಿನ ಭಾಗ. ಪ್ರಕೃತಿಯಿಂದಾಗಿ ನಾವು ಬದುಕುತ್ತಾ ಇದ್ದೇವೆ. ಜೀವನದಲ್ಲಿ ಒಂದು ಮರ ಬೆಳೆಸಿದರೆ ದೊಡ್ಡ ಸಾಧನೆ ಮಾಡಿದಂತೆ ಎಂದು ಹಿರಿಯರು ನಮಗೆ ಹೇಳಿಕೊಟ್ಟಿರುವ ಪಾಠ. ಇದರ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ಹೆಚ್ಚು ತಿಳುವಳಿಕೆ ಕೊಡಬೇಕು. ಮಕ್ಕಳ ಆಲೋಚನೆ ನಿಷ್ಕಲ್ಮಶವಾಗಿರುತ್ತದೆ. ಗುರುಗಳು ಹೇಳಿಕೊಟ್ಟ ಹಾದಿಯಲ್ಲಿ ಮಕ್ಕಳು ನಡೆಯುತ್ತಾರೆ. ಆದ ಕಾರಣ ಮಕ್ಕಳಿಂದ ಗಿಡ ಬೆಳೆಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ಮಧ್ಯಮ ವರ್ಗದ ಜನರು ಮನೆಯಲ್ಲಿ ಹಸಿರು ಇರಬೇಕು ಎಂದು ಪ್ಲಾಸ್ಟಿಕ್ ಗಿಡಗಳನ್ನು ಇಟ್ಟುಕೊಂಡಿರುತ್ತೇವೆ. ಮನಿ ಪ್ಲಾಂಟ್ ಅನ್ನು ಬಾಟಲ್ ಗಳಲ್ಲಿ ಇಟ್ಟುಕೊಂಡಿರುತ್ತೇವೆ. ಅಂದರೆ ಹಸಿರಿನ ಮಧ್ಯೆ ಬದುಕ ಬೇಕು ಎಂಬುದು ನಮ್ಮೆಲ್ಲರ ಅಭಿಲಾಷೆ. ಕಳೆದ ವರ್ಷ ಮಳೆ ಬರದೆ 200 ಕ್ಕೂ ಹೆಚ್ಚು ತಾಲೂಕುಗಳು ಬರ ಎದುರಿಸಬೇಕಾಯಿತು. ಬೆಂಗಳೂರಿನಲ್ಲಿ ನೀರಿನ ಕೊರತೆ ಉಂಟಾಯಿತು ಆದರೂ ಪರಿಸ್ಥಿತಿ ನಿಭಾಯಿಸಲಾಯಿತು. ಇಂತಹ ಪರಿಸ್ಥಿತಿಗಳು ಮತ್ತೆ ಬರದಂತೆ ನಾವು ಜಾಗೃತವಾಗಿ ಇರಬೇಕು ಎಂದು ಹೇಳಿದರು.
ಇಂದು ಪ್ರಪಂಚ ಸಾಕಷ್ಟು ಮುಂದುವರೆದಿದೆ. ನಮ್ಮ ಕಾಲದ ಶಿಕ್ಷಣಕ್ಕೂ ಈಗಿನ ಕಾಲದ ಶಿಕ್ಷಣಕ್ಕೂ ಬಹಳ ವ್ಯತ್ಯಾಸವಿದೆ. ಡಿ.ಕೆ.ಶಿವಕುಮಾರ್, ರಿಜ್ವಾನ್ ಅರ್ಷದ್ ಅಥವಾ ಅಧಿಕಾರಿಗಳ ಮಕ್ಕಳೇ ಓದಬೇಕೆನ್ನುವ ಕಟ್ಟಳೆಯಿಲ್ಲ. ಬಾಗಲಕೋಟೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ 625ಕ್ಕೆ 625 ಅಂಕಗಳನ್ನು ಗಳಿಸಿದ್ದಾಳೆ. ಅಂದರೆ ವಿದ್ಯೆಗೆ ಅಂತಸ್ತಿಲ್ಲ ಎಂಬುದು ಇದರ ಅರ್ಥ. ಗ್ರಾಮೀಣ ಭಾಗದ ಮಕ್ಕಳು ಓದಿನಲ್ಲಿ ಮುಂದಿದ್ದಾರೆ. ಬೆಂಗಳೂರಿನ ಮಕ್ಕಳಿಗೆ ಕವಲುದಾರಿಗಳು ಹೆಚ್ಚು. ಈ ಕಾರಣಕ್ಕೆ ಗ್ರಾಮೀಣ ಭಾಗದಲ್ಲಿ 2 ಸಾವಿರದಷ್ಟು ಪಬ್ಲಿಕ್ ಶಾಲೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ಮಾಜಿ ಶಾಸಕ ಹಸನಬ್ಬ, ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಡಿಸಿಎಂ ಕಾರ್ಯದರ್ಶಿ, ಬಿಎಂಆರ್ಡಿಎ ಆಯುಕ್ತರು ರಾಜೇಂದ್ರ ಚೋಳನ್, ಪ್ರೀತಿ ಗೆಹಲೊಟ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ನಟ ದರ್ಶನ್ ಕೃಷಿ ಇಲಾಖೆ ರಾಯಭಾರಿಯಾಗಿ ಮುಂದುವರೆಯುವ ಪ್ರಶ್ನೆಯೇ ಇಲ್ಲ: ಸಚಿವ ಎಂ.ಬಿ.ಪಾಟೀಲ್ - M B Patil