ರಾಮನಗರ: ನೀವು ನಮ್ಮ ಕೈ ಬಲಪಡಿಸಿ, ನಾವು ನಿಮ್ಮ ಋಣ ತೀರಿಸುತ್ತೇವೆ. ನಾವು ನಿಮ್ಮನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಇಲ್ಲಿ ನಾನೇ ಅಭ್ಯರ್ಥಿ ಎಂದು ತಿಳಿದುಕೊಳ್ಳಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಚನ್ನಪಟ್ಟಣ ತಾಲೂಕಿನ ಬೆಳಕೆರೆ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣದ ಶಂಕುಸ್ಥಾಪನೆ ಬಳಿಕ ಮಾತನಾಡಿದ ಅವರು, ನಾವು ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳುತ್ತೇವೆ. ನಾವು ನುಡಿದಂತೆ ನಡೆಯುತ್ತೇವೆ ಎಂಬ ಕಾರಣಕ್ಕೆ ರಾಜ್ಯದ ಜನ ನಮಗೆ 135 ಸೀಟು ಕೊಟ್ಟು ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದರು.
ಈ ಕ್ಷೇತ್ರದಲ್ಲಿ ಯಾರೇ ನಿಂತರೂ ನಾನೇ ಅಭ್ಯರ್ಥಿ: ಸದ್ಯದಲ್ಲೇ ಚುನಾವಣೆ ಬರಲಿದೆ. ಇಲ್ಲಿ ಶಾಸಕ ಸ್ಥಾನ ಖಾಲಿ ಇದೆ. ನಾವು ಯಾರನ್ನೇ ಇಲ್ಲಿ ನಿಲ್ಲಿಸಿದರೂ ನಾನೇ ಅಭ್ಯರ್ಥಿ. ಕಾರಣ ನಾನೇ ಟಿಕೆಟ್ ಕೊಟ್ಟು ಚುನಾವಣೆಗೆ ನಿಲ್ಲಿಸುತ್ತೇನೆ. ನಿಮ್ಮ ಮತ ನನಗೆ ಬೀಳಲಿದೆ. ಇಂದು ನಡೆದ ಉದ್ಯೋಗ ಮೇಳದಲ್ಲಿ 8 ಸಾವಿರ ಯುವಕರು ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ತಾಲೂಕಿನ ಎಲ್ಲಾ ಊರುಗಳಲ್ಲಿ ಯಾವ ಯಾವ ಕೆಲಸಗಳಾಗಬೇಕು ಎಂದು ಕೇಳಿದ್ದೇವೆ. 22 ಸಾವಿರ ಮಂದಿ ತಮ್ಮ ಸಮಸ್ಯೆಗಳ ನಿವಾರಣೆಗೆ ಅರ್ಜಿ ನೀಡಿದ್ದು, ಆ ಪೈಕಿ 9 ಸಾವಿರ ಜನ ನಿವೇಶನ ಹಾಗೂ ಮನೆ ಬೇಕು ಎಂದು ಕೇಳಿದ್ದಾರೆ ಎಂದು ತಿಳಿಸಿದರು.
ಅಧಿಕಾರ ಇದ್ದಾಗ ಅವರು ಈ ಕೆಲಸ ಮಾಡಲಿಲ್ಲ: ಕುಮಾರಸ್ವಾಮಿ ಅವರು ಶಾಸಕರಾಗಿದ್ದಾಗ ಈ ರೀತಿ ಕೆಲಸಗಳನ್ನು ಮಾಡಬೇಡಿ ಎಂದು ನಾವು ಹೇಳಿದ್ದೆವಾ? ಯಾರನ್ನೂ ನಾವು ತಡೆದಿರಲಿಲ್ಲ. ಅವರಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಆದರೂ ಮಾಡಲಿಲ್ಲ. ಈಗ ಇಲ್ಲಿ ಕುರ್ಚಿ ಖಾಲಿ ಇದೆ. ನಾವು ಬಂದು ಕೆಲಸ ಮಾಡುತ್ತಿದ್ದೇವೆ. ಖಾಲಿ ಇರುವ ಕಚೇರಿಯಲ್ಲಿ ನಾವು ಕೂರಬೇಕೋ ಬೇಡವೋ?. ನಮಗೆ ಬೆಂಬಲ ನೀಡಿ. ನಾವು ನಿಮ್ಮ ಜತೆ ಇರುತ್ತೇವೆ ಎಂದು ಭರವಸೆ ನೀಡಿದರು.
ನಮ್ಮ ಹೆಸರು ಉಳಿಸಿಕೊಳ್ಳಲು ಜಿಲ್ಲೆಗೆ ಮರುನಾಮಕರಣ: ನಾವು ನಿಮ್ಮನ್ನು ಬಿಟ್ಟು ಓಡಿ ಹೋಗುವುದಿಲ್ಲ. ನಾವೆಲ್ಲರೂ ಮೂಲತಃ ಬೆಂಗಳೂರಿನವರು. ಈ ಹಿಂದೆ ನಾವು ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಾಗಿದ್ದವರು. ಈಗ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿದರೆ ತಪ್ಪೇನು?. ನಿಮ್ಮ ಮನೆಯಲ್ಲಿರುವ ಹಳೇ ದಾಖಲೆಗಳನ್ನು ನೋಡಿ ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ಇದೆ. ಈ ಹೆಸರನ್ನು ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಇದರಿಂದ ಈ ಭಾಗದಲ್ಲಿ ಅಭಿವೃದ್ಧಿಯಾಗುತ್ತದೆ. ಈ ಭಾಗದಲ್ಲಿ ಕೈಗಾರಿಕೆ ಬಂದರೆ ಇಲ್ಲಿಂದಲೇ ಬೆಳಗ್ಗೆ ಕೆಲಸಕ್ಕೆ ಹೋಗುತ್ತಾರೆ, ಸಂಜೆ ವಾಪಸ್ ಬರುತ್ತಾರೆ. ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಬೆಂಗಳೂರು ನಗರಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.
ಮತ್ತೊಂದೆಡೆ, ಚನ್ನಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾಯಿಸಿದ ಕಾರಣಕ್ಕೆ ಯುವ ಪೀಳಿಗೆಗೆ ಉದ್ಯೋಗ ಹಾಗೂ ಜೀವನ ಕಟ್ಟಿಕೊಳ್ಳಲು ಹೆಚ್ಚು ಅವಕಾಶಗಳು ಸೃಷ್ಟಿಯಾಗುತ್ತಿದೆ. ಬೆಂಗಳೂರಿನ ಹೆಸರು ಈ ಜಿಲ್ಲೆಗೆ ಏಕೆ ಬೇಕು ಎಂದು ಒಂದಷ್ಟು ಜನ ಪ್ರಶ್ನೆ ಮಾಡುತ್ತಿದ್ದರು. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಆಗುವುದು ಬೇಕಿಲ್ಲವೆ?. ಉದ್ಯೋಗ ಸೃಷ್ಟಿ ಮಾಡುವುದೇ ಕಾಂಗ್ರೆಸ್ ಸರ್ಕಾರದ ಗುರಿ ಎಂದು ಹೇಳಿದರು.
ಪಕ್ಷಭೇದ ಮರೆತು ಅವಕಾಶ ಬಳಸಿಕೊಳ್ಳಿ: ಚನ್ನಪಟ್ಟಣದ ಪ್ರತಿ ಹಳ್ಳಿಯನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿ. ಮುಖ್ಯಮಂತ್ರಿಗಳು ತಾಲೂಕಿನ ಅಭಿವೃದ್ಧಿಗೆ 150 ಕೋಟಿ ವಿಶೇಷ ಅನುದಾನ ಕೊಟ್ಟಿದಾರೆ. ವಸತಿ ಸಚಿವರು 5,000 ಮನೆಗಳನ್ನು ಮಂಜೂರು ಮಾಡಿದ್ದಾರೆ. ಸೈಟ್ಗಳನ್ನು ಹಂಚಲು ಅನೇಕ ಕಡೆ ಜಾಗಗಳನ್ನು ಪರಿಶೀಲನೆ ಮಾಡಲಾಗಿದೆ. ನಮಗೆ ಅವಕಾಶ ಸಿಕ್ಕಾಗಲೆಲ್ಲ ನಿಮ್ಮ ಅಭಿವೃದ್ಧಿಯ ಬಗ್ಗೆ ಯೋಚನೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಚನ್ನಪಟ್ಟಣದ ಜನತೆಯ ಕೈಬಿಡುವುದಿಲ್ಲ. ಪಕ್ಷಭೇದ ಮರೆತು ಅವಕಾಶಗಳನ್ನು ಬಳಸಿಕೊಳ್ಳಿ ಎಂದು ಕರೆ ನೀಡಿದರು.
ಇದನ್ನೂ ಓದಿ: ಎರಡನೇ ಸಲ ಸಿಎಂ ಆಗಿರುವುದಕ್ಕೆ ಅವರಿಗೆ ಹೊಟ್ಟೆ ಉರಿ, ನಾನು ದ್ವೇಷ ರಾಜಕಾರಣ ಮಾಡಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah