ಬೆಂಗಳೂರು : ಬಿಜೆಪಿ ಪಾದಯಾತ್ರೆಗೆ ಪ್ರತಿಯಾಗಿ ನಾವೂ ಪಾದಯಾತ್ರೆ ಮಾಡಲು ತಯಾರಿ ನಡೆಸುತ್ತಿದ್ದೇವೆ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ಪಾದಯಾತ್ರೆಗೆ ಬೆಂಬಲ ಇಲ್ಲ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅದು ಪೊಲಿಟಿಕಲ್ ನಿರ್ಧಾರ. ಅವರ ಪಕ್ಷದ ನಿರ್ಣಯ. ನಾವು ಅವರ ಪಾರ್ಟಿ ವಿಚಾರಕ್ಕೆ ಮಧ್ಯ ಬರಲ್ಲ. ಕುಮಾರಸ್ವಾಮಿ ಆಗಲಿ, ನಾನಾಗಲಿ, ಬಿಜೆಪಿ ಆಗಲಿ. ಅವರ ಪಕ್ಷದ ರಾಜಕಾರಣ ಅವರೇ ಮಾಡುತ್ತಾರೆ. ಅವರಿಂದ ಹತ್ತು ಸೀಟು ಗೆದ್ದಿದ್ದಾರೆ ಎಂದು ತಿಳಿಸಿದರು.
ಮೈಸೂರು, ಮಂಡ್ಯ ಹಾಗೂ ರಾಮನಗರದಲ್ಲಿ ಅವರ ಜನ. ಆದ್ರೆ ಬಿಜೆಪಿಯವರು ಬಂದು ತಮಟೆ ಹೊಡ್ಕೊಂಡ್ರೆ. ಒಂದು ವೇಳೆ ದಳ ಕಮಲ ಮರ್ಜ್ ಮಾಡಿಕೊಂಡರೇ ಓಕೆ ಫೈನ್. ಅವರ ಪಕ್ಷದ ಉಳಿಯುವಿಕೆ. ಅದನ್ನ ಉಳಿಸಿಕೊಳ್ಳಬೇಕು ತಾನೆ ಕುಮಾರಸ್ವಾಮಿ?. ರಾಜಕೀಯವಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು. ಅದು ಅಂದುಕೊಂಡಿರೋದು ಎಂದು ತಿಳಿಸಿದರು.
ಈಗ ಪಾದಯಾತ್ರೆಗೆ ನಾವೂ ಕೂಡ ರೆಡಿ ಮಾಡಿಕೊಳ್ಳುತ್ತಿದ್ದೇವೆ. ಕೌಂಟರ್ ಆಗಿ ರೆಡಿ ಮಾಡಿಕೊಳ್ತಿದ್ದೇವೆ. ಅವರಿಗೆ ಉತ್ತರ ಕೊಡಬೇಕಲ್ವಾ. ಅವರು ಪರ್ಮಿಷನ್ ಕೇಳಿದ್ದಾರೆ. ಅವರು ಘೋಷಣೆ ಮಾಡಿದ್ಮೇಲೆ ನಾವೂ ಘೋಷಣೆ ಮಾಡುತ್ತಿದ್ದೇವೆ. ಬಿಜೆಪಿ ಸರ್ಕಾರದ ಕಾಲದಲ್ಲಿನ 30 ಹಗರಣಗಳಿವೆ. ದಿನಾ ಒಂದೊಂದು ಹಗರಣ ಬಿಚ್ಚಿಡುತ್ತೇವೆ. ಅವರ ಪಾದಯಾತ್ರೆ ಅಂತಿಮ ರೂಪುರೇಷೆ ಬಂದರೆ ನಾವು ನಮ್ಮ ಕಾರ್ಯಸೂಚಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಸಂವಿಧಾನ, ಪ್ರಜಾಪ್ರಭುತ್ವ, ಜನಾಭಿಪ್ರಾಯ ಇದೆ : ಮುಡಾ ಸಂಬಂಧ ಸಿಎಂಗೆ ರಾಜ್ಯಪಾಲರು ನೋಟಿಸ್ ಕಳುಹಿಸಿರುವ ಸಂಬಂಧ ಪ್ರತಿಕ್ರಿಯಿಸಿ, ಸಂವಿಧಾನ ಇದೆ, ಪ್ರಜಾಪ್ರಭುತ್ವ ಇದೆ ಮತ್ತು ಜನಾಭಿಪ್ರಾಯ ಇದೆ. ಸಂಪುಟ ಸಭೆ ಬಳಿಕ ಎಲ್ಲವನ್ನೂ ತಿಳಿಸುತ್ತೇವೆ ಎಂದರು.
ಪ್ರಧಾನ ಮಂತ್ರಿಗಳ ಭೇಟಿ ವಿಚಾರವಾಗಿ ಕೇಳಿದಾಗ, ಬೆಂಗಳೂರು ಬಹಳ ಪ್ರಮುಖ ನಗರ. ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಆದಾಯ ನೀಡುತ್ತಿರುವ ನಗರ. ವಿಶ್ವದ ನಾಯಕರು ಹಾಗೂ ವಿಶ್ವದ ಹೂಡಿಕೆದಾರರು ಬೆಂಗಳೂರಿನ ಮೇಲೆ ಆಸಕ್ತಿ ಹೊಂದಿದ್ದಾರೆ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಬೆಂಗಳೂರು ಅಭಿವೃದ್ಧಿಗೆ ಅನೇಕ ಮೂಲ ಸೌಕರ್ಯ ಯೋಜನೆಗಳನ್ನು ನೀಡಲಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ, ವಿಮಾನ ನಿಲ್ದಾಣ ಮೇಲ್ಸೇತುವೆ, ನೆಲಮಂಗಲ ಮೇಲ್ಸೆತುವೆ ಯೋಜನೆಗಳನ್ನು ನೀಡಲಾಗಿತ್ತು.
ಈಗ ಜನಸಂಖ್ಯೆ ಹೆಚ್ಚಾಗಿರುವ ಕಾರಣ ವರ್ತುಲ ರಸ್ತೆಗೆ ಮಿಲಿಟರಿ ಭೂಮಿ ಬೇಕಾಗಿದೆ. ಅದನ್ನು ದೊರಕಿಸಿಕೊಡುವಂತೆ ಮನವಿ ಮಾಡಿದ್ದೇವೆ. ಈ ವಿಚಾರವಾಗಿ ರಕ್ಷಣಾ ಸಚಿವರು, ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿದ್ದೇವೆ. ಸುರಂಗ ರಸ್ತೆ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಇದರ ಜತೆಗೆ ಈ ಹಿಂದೆ ಬಜೆಟ್ ನಲ್ಲಿ ಘೋಷಣೆಯಾಗಿರುವ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದೇವೆ. ನಮ್ಮ ಮನವಿ ಪರಿಶೀಲಿಸುವುದಾಗಿ ಪ್ರಧಾನಿಯವರು ಭರವಸೆ ನೀಡಿದ್ದಾರೆ ಎಂದರು.
ಇದನ್ನೂ ಓದಿ : ಸಿಎಂಗೆ ರಾಜ್ಯಪಾಲರ ನೊಟೀಸ್: ಸಿದ್ದರಾಮಯ್ಯ ಗೈರಲ್ಲಿ ಡಿಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ - Cabinet meeting absence of CM