ದಾವಣಗೆರೆ: ಇತ್ತೀಚೆಗೆ ಚನ್ನಗಿರಿ ಪೊಲೀಸ್ ಠಾಣೆ ಬಳಿ ನಡೆದ ಗಲಾಟೆ, ಕಲ್ಲು ತೂರಾಟ ಪ್ರಕರಣ ಸಂಬಂಧ ಆರೋಪಿಗಳ ಬಂಧನ ಪ್ರಕ್ರಿಯೆ ಮುಂದುವರೆದಿದೆ. ಇಲ್ಲಿ ತನಕ 40 ಮಂದಿ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದವರೇ ಹೆಚ್ಚಿದ್ದು, ಬಂಧನದ ಭೀತಿಯಿಂದ ಯುವಕರು ಗ್ರಾಮವನ್ನು ತೊರೆಯುತ್ತಿದ್ದಾರೆ. ಇಡೀ ಗ್ರಾಮ ಖಾಲಿ ಖಾಲಿಯಾಗಿದ್ದು ಬಿಕೋ ಎನ್ನುತ್ತಿದೆ. ಸದ್ಯ ಬಕ್ರೀದ್ ಹಬ್ಬ ಬರುತ್ತಿದೆ, ಎಲ್ಲರೂ ಊರಿಗೆ ಬರಲಿ, ಅಮಾಯಕರನ್ನು ಬಂಧನ ಮಾಡುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಮೇ 24 ರಂದು ಅಲ್ಲಿನ ಟಿಪ್ಪುನಗರದ ನಿವಾಸಿ ಆದಿಲ್ ಮೃತಪಟ್ಟ ಹಿನ್ನೆಲೆಯಲ್ಲಿ ಲಾಕಪ್ ಡೆತ್ ಆರೋಪಿಸಿ, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದ ಜನರು, ಗಲಾಟೆ ನಡೆಸಿ ವಾಹನ ಜಖಂಗೊಳಿಸಿದ್ದರು. ಅಲ್ಲದೆ, ಪೊಲೀಸ್ ಠಾಣೆಗೂ ಕೂಡ ಹಾನಿ ಮಾಡಿದ್ದರು. ಈ ಕೃತ್ಯದಲ್ಲಿ ಭಾಗಿಯಾದ ಬಹುತೇಕ ಜನರು ಹೊನ್ನೆಬಾಗಿ ಗ್ರಾಮದವರು ಎಂದು ತಿಳಿದು ಬಂದಿತ್ತು.
ಪೊಲೀಸರು ತಮ್ಮನ್ನು ಬಂಧಿಸುತ್ತಾರೆ ಎಂಬ ಭೀತಿಯಲ್ಲಿ ಹೊನ್ನೆಬಾಗಿ ಗ್ರಾಮದ ಸಾಕಷ್ಟು ಜನರು ಊರಿನಿಂದ ಕಾಲ್ಕಿತ್ತಿದ್ದಾರೆ. ಗ್ರಾಮದ ಅನೇಕ ಮನೆಗಳಿಗೆ ಬೀಗ ಹಾಕಲಾಗಿದ್ದು, ಹೆಚ್ಚಿನ ಜನರಿಲ್ಲದೇ, ಖಾಲಿ ಖಾಲಿಯಾಗಿ ಕಂಡುಬರುತ್ತಿದೆ. ಆದರೆ, ಇದೇ ತಿಂಗಳು 17ರಂದು ಬಕ್ರೀದ್ ಹಬ್ಬ ಇದ್ದು, ಎಲ್ಲರೂ ಊರಿಗೆ ಆಚರಣೆ ಮಾಡಬಹುದು. ಅಮಾಯಕರನ್ನು ನಾವು ಬಂಧಿಸುವುದಿಲ್ಲ. ಊರಿಗೆ ಬಂದು ಹಬ್ಬ ಮಾಡಿ ಎಂದು ಎಸ್ಪಿ ಉಮಾ ಪ್ರಶಾಂತ್ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ಚನ್ನಗಿರಿ ವ್ಯಕ್ತಿ ಸಾವು ಪ್ರಕರಣ: ಡಿವೈಎಸ್ಪಿ ಸೇರಿ ಮೂವರು ಪೊಲೀಸ್ ಅಧಿಕಾರಿಗಳು ಅಮಾನತು - Channagiri Adil Death Case
"ಚನ್ನಗಿರಿಯು ಸದ್ಯ ಶಾಂತಿಯುತವಾಗಿದೆ. ಬಕ್ರೀದ್ ಹಬ್ಬದ ಪ್ರಯುಕ್ತ ಸೌಹಾರ್ದ ಸಭೆ ನಡೆಸಿದ್ದೇವೆ. ಯಾವುದೇ ಅಮಾಯಕರನ್ನು ಬಂಧಿಸಬಾರದು ಎಂದು ಹೇಳಿದ್ದೇನೆ. ಬಕ್ರೀದ್ ಹಬ್ಬ ಬರುತ್ತಿದೆ, ಪ್ರತಿಯೊಬ್ಬರು ಗ್ರಾಮಕ್ಕೆ ಬರಲಿ, ಹಬ್ಬ ಆಚರಿಸಲಿ. ನಾವು ಈ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸುವ ಪ್ರಶ್ನೆಯೇ ಇಲ್ಲ ಎಂದು ಮನವರಿಕೆ ಮಾಡಿದ್ದೇವೆ. ಮುಸ್ಲಿಂ ಸಮಾಜದ ಮುಖಂಡರು ಕೂಡ ಇದಕ್ಕೆ ಒಪ್ಪಿದ್ದಾರೆ. ಇಲ್ಲಿಯ ತನಕ ಒಟ್ಟು 40 ಜನರನ್ನು ಬಂಧಿಸಲಾಗಿದೆ. ಇನ್ನೂ ಕೂಡ ಆರೋಪಿಗಳ ಬಂಧನ ಪ್ರಕ್ರಿಯೆ ಮುಂದುವರೆಯಲಿದೆ" ಎಂದು ಎಸ್ಪಿ ಉಮಾ ಪ್ರಶಾಂತ್ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಚನ್ನಗಿರಿ ಪೊಲೀಸ್ ಠಾಣೆ ಧ್ವಂಸ ಪ್ರಕರಣ: 25 ಆರೋಪಿಗಳನ್ನು ಬಂಧಿಸಿದ ಪೊಲೀಸರು - police station vandalism case