ಬೆಂಗಳೂರು: ಅಪರಾಧ ದಂಡ ಸಂಹಿತೆ ಸೆಕ್ಷನ್ 125 ರಡಿ ಸೊಸೆಗೆ ತನ್ನ ಅತ್ತೆ ಮಾವನಿಂದ ಜೀವನಾಂಶ ಪಡೆದುಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹುಬ್ಬಳ್ಳಿಯ ಅಬ್ದುಲ್ ಖಾದರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ಧಾರವಾಡ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ. ಅಲ್ಲದೇ ಬಳ್ಳಾರಿಯ ದಂಪತಿ ಪ್ರಕರಣದಲ್ಲಿ ತನ್ನ ಪತಿ ನಿಧನದ ನಂತರ ಪತ್ನಿ, ತನ್ನ ಪತಿಯ ತಂದೆ ತಾಯಿಯಿಂದ ಜೀವನಾಂಶ ಕೋರಲಾಗದು ಎಂದು ತಿಳಿಸಿದೆ. ಜತೆಗೆ ಸೊಸೆ ಮತ್ತು ಆಕೆಯ ಮಕ್ಕಳಿಗೆ, ಅತ್ತೆ ಮಾವ ಮಾಸಿಕ 25 ಸಾವಿರ ರೂ. ಜೀವನಾಂಶ ನೀಡಬೇಕೆಂದು ಅಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ.
ಸಿಆರ್‌ಪಿಸಿ ಸೆಕ್ಷನ್ 125ರಡಿ ಪತ್ನಿ ಜೀವನಾಂಶ ಕೋರುವ ಹಕ್ಕಿದೆ. ಅದೇ ರೀತಿ ಪೋಷಕರು ತಮ್ಮ ವಯಸ್ಕ ಮಗನಿಂದ ಜೀವನಾಂಶ ಕೋರಬಹುದಾಗಿದೆ. ಅದೇ ರೀತಿ ಅಪ್ರಾಪ್ತ ಮಕ್ಕಳು ಸಹ ತಂದೆಯಿಂದ ಜೀವನಾಂಶ ಕೇಳಬಹುದಾಗಿದೆ. ಆದರೆ, ನಿಯಮದಲ್ಲಿ ಎಲ್ಲಿಯೂ ಪತಿ ನಿಧನದ ನಂತರ ಅವರ ತಂದೆ ತಾಯಿಗಳಿಂದ ಜೀವನಾಂಶ ಪಡೆಯಲು ಅಧಿಕಾರವಿಲ್ಲ ಎಂದು ಪೀಠ ತಿಳಿಸಿದೆ. ಅದೇ ಆಧಾರದ ಮೇಲೆ ಬಳ್ಳಾರಿಯ ನ್ಯಾಯಾಲಯ 2021ರ ನ.30ರಂದು ಸೊಸೆಗೆ ಅತ್ತೆ ಮಾವ 25 ಸಾವಿರ ಜೀವನಾಂಶ ನೀಡಬೇಕು ಎಂದು ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪ್ರತಿ ವಾದಿಗಳು ಸಿಆರ್‌ಪಿಸಿ ಸೆಕ್ಷನ್ 125ರಡಿ ಸಲ್ಲಿಸಿದ್ದ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸುವಂತಹ ಅಧಿಕಾರವಿಲ್ಲ, ಜತೆಗೆ ಪುತ್ರನ ನಿಧನ ನಂತರ ಸೊಸೆಗೆ ಜೀವನಾಂಶ ನೀಡಬೇಕೆಂಬ ನಿಯಮವಿಲ್ಲ. ಹಾಗಾಗಿ ಅಧೀನ ನ್ಯಾಯಾಲಯದ ಆದೇಶ ರದ್ದು ಮಾಡಬೇಕೆಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ:ಖಾಜಾ ಮೊಯಿನುದ್ದೀನ್ ಅಗಡಿ ಹಾಗೂ ತಸ್ಲೀಮಾ ಜಮೀಲಾ ವಿವಾಹವಾಗಿದ್ದರು. ಅವರಿಗೆ ನಾಲ್ವರು ಮಕ್ಕಳು ಜನಿಸಿದ್ದರು. ಪತಿ ನಿಧನ ಬಳಿಕ ಪತಿಯ ತಂದೆ ತಾಯಿ ತನ್ನನ್ನು ಮತ್ತು ತನ್ನ ಮಕ್ಕಳನ್ನು ನೋಡಿಕೊಳ್ಳುತ್ತಿಲ್ಲ. ಹಾಗಾಗಿ ಅವರಿಂದ ಜೀವನಾಂಶ ಕೊಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.
ಅವರ ಅರ್ಜಿಯನ್ನು ಮಾನ್ಯ ಮಾಡಿದ ಬಳ್ಳಾರಿ ನ್ಯಾಯಾಲಯ, ಪತಿಗೆ 20 ಸಾವಿರ ಹಾಗೂ ನಾಲ್ವರು ಮಕ್ಕಳಿಗೆ 5 ಸಾವಿರ ರೂ. ಸೇರಿ ಒಟ್ಟು 25 ಸಾವಿರ ಜೀವನಾಂಶವನ್ನು ನೀಡುವಂತೆ ಪತಿಯ ಪೋಷಕರಿಗೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ:ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶರಣರ ವಿರುದ್ಧ ಆರೋಪ ಮರು ನಿಗದಿಗೆ ಸೂಚಿಸಿದ ಹೈಕೋರ್ಟ್