ಬಳ್ಳಾರಿ: ನ್ಯಾಯಾಲಯದ ಆದೇಶದ ಸೂಚನೆಯಂತೆ ಕ್ರಮ ಕೈಗೊಳ್ಳಬೇಕು. ಹಾಗಾಗಿ ಕೋರ್ಟ್ ಆದೇಶದ ಪ್ರತಿಗಾಗಿ ಕಾಯುತ್ತಿದ್ದೇವೆ. ಆದೇಶದ ಪ್ರತಿ ಏನ್ ಒಳಗೊಂಡಿದೆ ಎನ್ನುವುದರ ಮೇಲೆ ನಾವು ಕಾರ್ಯಪ್ರವೃತ್ತಾರಾಗುತ್ತೇವೆ ಎಂದು ಬಳ್ಳಾರಿ ಕಾರಾಗೃಹದ ಸೂಪರಿಂಟೆಂಡೆಂಟ್ ಆರ್.ಲತಾ ಮಾಹಿತಿ ನೀಡಿದ್ದಾರೆ.
ನಟ ದರ್ಶನ್ ಮಧ್ಯಂತರ ಜಾಮೀನು ವಿಚಾರ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಮೇಲ್ ಇಲ್ಲವೇ ಪ್ಯಾಕ್ಸ್ ಮೂಲಕ ಕೆಳ ಹಂತದ ನ್ಯಾಯಲಯದ ಮೂಲಕ ಆದೇಶ ಪ್ರತಿ ಜೈಲಿಗೆ ಬರಬಹುದು. ಆದೇಶದ ಪ್ರತಿಯಲ್ಲಿ ಉಲ್ಲೇಖಿಸಿರುವ ಮಾಹಿತಿ ಆಧಾರದಡಿ ನಾವು ಕಾರ್ಯಪ್ರವೃತ್ತರಾಗುತ್ತೇವೆ ಎಂದಿದ್ದಾರೆ.
ಬಿಗಿ ಬಂದೋಬಸ್ತ್: ಮಧ್ಯಂತರ ಜಾಮೀನು ಮಂಜೂರು ವಿಚಾರ ಗೊತ್ತಾಗುತ್ತಿದ್ದಂತೆ ಅವರ ಅಭಿಮಾನಿಗಳು ಕಾರಾಗೃಹದ ಮುಂದೆ ಜಮಾವಣೆಯಾಗುತ್ತಿದ್ದು, ಪೊಲೀಸರು ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ದರ್ಶನ್ಗೆ ಜಾಮೀನು ನೀಡಿದ ಹೈಕೋರ್ಟ್: ಆರೋಪಿ ದರ್ಶನ್ ಹಲವು ದಿನಗಳಿಂದ ಬೆನ್ನು ನೋವು ಅನುಭವಿಸುತ್ತಿದ್ದು, ಆರೋಗ್ಯ ತಪಾಸಣೆಗಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಆರು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿ ಇಂದು ಆದೇಶ ನೀಡಿದ್ದಾರೆ.
ಬೇಲ್ ಬಾಂಡ್ಗೆ ಸಹಿ ಹಾಕಿಸಿಕೊಂಡು ಇಂದೇ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಪತ್ನಿ ವಿಜಯಲಕ್ಷ್ಮಿ ಈಗಾಗಲೇ ಬಳ್ಳಾರಿಗೆ ಆಗಮಿಸಿ, ನಟ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್ ಅವರಿಗೆ ವಿಶೇಷ ಸೌಲಭ್ಯ ನೀಡಿದ ಆರೋಪ ಕೇಳಿ ಬಂದಿದ್ದರ ಹಿನ್ನೆಲೆಯಲ್ಲಿ ಆಗಸ್ಟ್ 29ರಂದು ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಪ್ರಕರಣದ ಇತರರನ್ನು ಬೇರೆ ಬೇರೆ ಜೈಲಿಗೆ ರವಾನಿಸಲಾಗಿತ್ತು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ಗೆ ಮಧ್ಯಂತರ ಜಾಮೀನು