ಬೆಳಗಾವಿ: ನವರಾತ್ರಿ ಹಿನ್ನೆಲೆ ಕುಂದಾನಗರಿಯಲ್ಲಿ ಸಂಜೆ ನಡೆಯುತ್ತಿರುವ ದಾಂಡಿಯಾ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೆಳೆಯುತ್ತಿವೆ. ಗುಜರಾತ್ ರಾಜ್ಯ ಮೂಲದ ದಾಂಡಿಯಾ ನೃತ್ಯ ಬೆಳಗಾವಿಗೆ ಯಾವಾಗ ಲಗ್ಗೆ ಇಟ್ಟಿತು ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಆದರೆ, ಯಾವಾಗ ಗುಜರಾತ್ ಸೇರಿ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ವ್ಯಾಪಾರಿಗಳು ಬದುಕು ಕಟ್ಟಿಕೊಳ್ಳಲು ಬೆಳಗಾವಿಗೆ ಬಂದರೋ, ಆಗ ಅವರ ಜೊತೆಗೆ ಅವರ ಸಂಸ್ಕೃತಿ, ಆಚರಣೆಗಳು ಇಲ್ಲಿಗೆ ಪ್ರವೇಶಿಸಿದವು.
ಅದರಲ್ಲಿ ದಾಂಡಿಯಾ ಕೂಡ ಒಂದು. ಬೆಳಗಾವಿಯ ರಾಮತೀರ್ಥ ನಗರ, ರಾಣಿ ಚನ್ನಮ್ಮ ನಗರ, ಸದಾಶಿವನಗರ, ಅನಗೋಳ, ಗುಜರಾತ್ ಭವನ, ಟಿಳಕವಾಡಿ ಸೇರಿ ವಿವಿಧೆಡೆ ಅದ್ಧೂರಿಯಾಗಿ ದಾಂಡಿಯಾ ಆಯೋಜಿಸಲಾಗಿದೆ. ಅದೇ ರೀತಿ ಕೆಲ ಖಾಸಗಿ ಹೋಟೆಲ್ಗಳಲ್ಲೂ ದಾಂಡಿಯಾ ಸದ್ದು ಮಾಡುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ದೇಶಿ ಉಡುಗೆ ತೊಟ್ಟು, ಕೈಯಲ್ಲಿ ಕೋಲು ಹಿಡಿದು ನೃತ್ಯ ಮಾಡಿ ಸಂಭ್ರಮಿಸುತ್ತಿದ್ದಾರೆ.
ರಾಮತೀರ್ಥ ನಗರದಲ್ಲಿ ಸುರೇಶ ಯಾದವ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ದಾಂಡಿಯಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನೃತ್ಯಗಾರ್ತಿ ಶೃತಿ ಬೆಳವಡಿ 'ಈಟಿವಿ ಭಾರತ' ಜೊತೆಗೆ ಮಾತನಾಡಿ, "ಮೊದಲೆಲ್ಲಾ ಬೇರೆ ಕಡೆ ದಾಂಡಿಯಾ ಆಡಲು ಹೋಗುತ್ತಿದ್ದೆವು. ಈಗ ನಮ್ಮ ಏರಿಯಾದಲ್ಲೇ ದಾಂಡಿಯಾ ಹಮ್ಮಿಕೊಂಡಿದ್ದು ಖುಷಿಯಿಂದ ಗುಜರಾತಿ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದೇವೆ" ಎಂದು ತಿಳಿಸಿದರು.
ನೃತ್ಯಗಾರ್ತಿ ಸಾವಿತ್ರಿ ಮಾತನಾಡಿ, "ಯಾವುದೇ ಭಯಭೀತಿ ಇಲ್ಲದೇ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಮುಕ್ತವಾಗಿ ದಾಂಡಿಯಾಗದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಆಯೋಜಕರು ತುಂಬಾ ಚೆನ್ನಾಗಿ ವ್ಯವಸ್ಥೆ ಕಲ್ಪಿಸಿದ್ದು, ಪ್ರತಿದಿನ ನೃತ್ಯ ಮಾಡಿದ ಮತ್ತು ಉಡುಗೆ ತೊಟ್ಟ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಗುತ್ತಿದೆ" ಎಂದು ಹೇಳಿದರು.
"ರಾಮತೀರ್ಥ ನಗರದಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಅವಕಾಶ ನೀಡಿದ್ದಾರೆ. ಹಾಗಾಗಿ, ನಾವೆಲ್ಲಾ ಇಲ್ಲಿ ಡ್ಯಾನ್ಸ್ ಮಾಡಿ ಸಖತ್ ಎಂಜಾಯ್ ಮಾಡುತ್ತಿದ್ದೇವೆ. ಮಕ್ಕಳು, ಕಾಲೇಜು ಯುವತಿಯರು, ವಯಸ್ಕರರು ಹೀಗೆ ಮೂರು ವಿಭಾಗಗಳಲ್ಲಿ ದಾಂಡಿಯಾ ನಡೆಯುತ್ತದೆ. 9 ದಿನ ನಮಗೆ ಹಬ್ಬವೋ ಹಬ್ಬ" ಎನ್ನುತ್ತಾರೆ ನೃತ್ಯಗಾರ್ತಿ ಅಕ್ಷತಾ.
ಆಯೋಜಕ ಸುರೇಶ ಯಾದವ್ ಮಾತನಾಡಿ, "ಯಾವುದೇ ಪ್ರವೇಶ ಶುಲ್ಕ ಇಲ್ಲದೇ ಉಚಿತವಾಗಿ ಮಹಿಳೆಯರಿಗೆ ಅವಕಾಶ ನೀಡಿದ್ದೇವೆ. 9 ದಿನವೂ ಬಹುಮಾನ ವಿತರಿಸುತ್ತಿದ್ದು, ಕೊನೆಯ ದಿನ ಬಂಪರ್ ಬಹುಮಾನ ಇರುತ್ತದೆ. ನಮ್ಮ ನಾಡು, ನುಡಿ, ಸಂಸ್ಕೃತಿ ಉಳಿಸಿ-ಬೆಳೆಸುವ ಉದ್ದೇಶದಿಂದ ಎಲ್ಲಾ ಹಬ್ಬಗಳನ್ನು ವಿಜೃಂಭಣೆಯಿಂದ ನಾವೆಲ್ಲಾ ಸೇರಿ ಆಚರಿಸುತ್ತೇವೆ" ಎಂದು ಹೇಳಿದರು.
ಇದನ್ನೂ ಓದಿ: ಮೈಸೂರು ದಸರಾ: ಶ್ರೇಯಾ ಘೋಷಾಲ್ ಹಾಡಿಗೆ ಯುವಪಡೆ ಫಿದಾ, ಬಾನಂಗಳದಲ್ಲಿ ಡ್ರೋನ್ ಚಿತ್ತಾರ - Yuva Dasara Drone Show