ಚಾಮರಾಜನಗರ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಸುಳ್ವಾಡಿ ವಿಷ ಪ್ರಸಾದ ದುರಂತದ ಮೊದಲನೇ ಆರೋಪಿಯಾಗಿರುವ ಇಮ್ಮಡಿ ಮಹದೇವಸ್ವಾಮಿ ಅವರ ಜಾಮೀನು ಅರ್ಜಿಯನ್ನು ಚಾಮರಾಜನಗರ ಜಿಲ್ಲಾ ಪ್ರಧಾನ ನ್ಯಾಯಾಲಯ ವಜಾಗೊಳಿಸಿದೆ.
ಅನಾರೋಗ್ಯದ ಕಾರಣಕ್ಕೆ ಜಾಮೀನು ನೀಡುವಂತೆ ಇಮ್ಮಡಿ ಮಹಾದೇಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬುಧವಾರದಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರು ವಜಾಗೊಳಿಸಿದ್ದಾರೆ.
ಈಗಾಗಲೇ ಇಮ್ಮಡಿ ಮಹದೇವಸ್ವಾಮಿ ಜಾಮೀನು ಕೋರಿ ಹೈಕೋರ್ಟ್, ಸುಪ್ರೀಂಕೋರ್ಟ್ ಕದ ತಟ್ಟಿದ್ದರೂ ಕೂಡ ಅರ್ಜಿಗಳು ವಜಾಗೊಂಡಿದ್ದವು. ಅನಾರೋಗ್ಯದ ಕಾರಣಕ್ಕೆ ಜಾಮೀನು ಕೊಡುವಂತೆ ಮತ್ತೆ ಜಿಲ್ಲಾ ನ್ಯಾಯಾಲಯಕ್ಕೆ ಇಮ್ಮಡಿ ಅವರು ಅರ್ಜಿ ಸಲ್ಲಿಸಿದ್ದರು.
ಸುಳ್ವಾಡಿ ಪ್ರಕರಣದ ಮೊದಲನೇ ಆರೋಪಿಯಾಗಿರುವ ಇಮ್ಮಡಿ ಮಹದೇವಸ್ವಾಮಿ, ಎರಡನೇ ಆರೋಪಿ ಅಂಬಿಕಾ, ಮೂರನೇ ಆರೋಪಿ ಮಹಾದೇವಸ್ವಾಮಿ ಹಾಗೂ ನಾಲ್ಕನೇ ಆರೋಪಿ ದೊಡ್ಡಯ್ಯ ಸದ್ಯ ಮೈಸೂರು ಜೈಲಿನಲ್ಲಿದ್ದಾರೆ.
ಏನಿದು ಘಟನೆ?: ಮಲೆಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದಲ್ಲಿ ಇಮ್ಮಡಿ ಮಹದೇವಸ್ವಾಮಿ ಅವರು ಕಿರಿಯ ಸ್ವಾಮೀಜಿ ಆಗಿದ್ದ ಹೊತ್ತಲ್ಲಿ 2018ರ ಡಿಸೆಂಬರ್ 14ರಂದು ಸುಳ್ವಾಡಿ ಮಾರಮ್ಮನ ದೇಗುಲದಲ್ಲಿ ಪ್ರಸಾದಕ್ಕೆ ವಿಷ ಬೆರೆಸಿದ್ದ ಪ್ರಕರಣ ನಡೆದಿತ್ತು. ದುರಂತದಲ್ಲಿ ಒಟ್ಟು 17 ಮಂದಿ ಮೃತಪಟ್ಟಿದ್ದರು. ಪ್ರಕರಣದ ಆರೋಪಿಗಳು ಕಳೆದ 5 ವರ್ಷ 11 ತಿಂಗಳಿನಿಂದ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: ನಕ್ಸಲ್ ಆರೋಪಿ ಸಾವಿತ್ರಿ ಬಾಡಿ ವಾರೆಂಟ್ ಮರುಪರಿಶೀಲಿಸಲು ಅಧೀನ ನ್ಯಾಯಾಲಯಕ್ಕೆ ಸೂಚನೆ