ಬೆಂಗಳೂರು : ಉದ್ಯೋಗ ಅರಸುತ್ತಿರುವ ಯುವಕರಿಗೆ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ದಂಪತಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್ ಹಾಗೂ ಮಧು ಪ್ರಕಾಶ್ ಬಂಧಿತ ದಂಪತಿಯಾಗಿದ್ದಾರೆ.
ಆರೋಪಿಗಳು ಕೆಲಸದ ಹುಡುಕಾಟದಲ್ಲಿರುವ ಯುವಕರನ್ನು ಪರಿಚಯ ಮಾಡಿಕೊಂಡು 'ತಮಗೆ ದೊಡ್ಡ ದೊಡ್ಡ ವ್ಯಕ್ತಿಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು ಪರಿಚಯವಿದ್ದು, ಅವರ ಕಡೆಯಿಂದ ಖಾಲಿ ಇರುವ ಹುದ್ದೆಗಳನ್ನು ಕೊಡಿಸುತ್ತೇವೆ' ಎಂದು ನಂಬಿಸಿ, ಅವರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದರು. ಆದರೆ, ಬಳಿಕ ಯಾವುದೇ ಕೆಲಸ ಕೊಡಿಸದೇ ವಂಚಿಸುತ್ತಿದ್ದರು. ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, 6 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿದ್ದರು. ತದನಂತರ ಕೆಲಸವನ್ನೂ ಕೊಡಿಸದೇ, ಹಣವನ್ನೂ ಹಿಂದಿರುಗಿಸದೇ ಮೋಸ ಮಾಡಿದ್ದ ಆರೋಪಿಗಳ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಗಳ ತನಿಖೆ ಕೈಗೆತ್ತಿಕೊಂಡ ವಿದ್ಯಾರಣ್ಯಪುರ ಠಾಣೆ ಪೊಲೀಸರ ವಿಶೇಷ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳ ಬಂಧನದಿಂದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 3 ವಂಚನೆ ಪ್ರಕರಣಗಳು ಪತ್ತೆಯಾಗಿದ್ದು, ಇವರ ವಿರುದ್ಧ ಬೆಂಗಳೂರು ನಗರದಾದ್ಯಂತ ಹಲವಾರು ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿದೆ.
ಬಂಧಿತರಿಂದ 2 ಲಕ್ಷ ರೂಪಾಯಿ ನಗದು, ವಿವಿಧ ಕಂಪನಿಯ 4 ಮೊಬೈಲ್ ಫೋನ್‌ಗಳು, ಒಂದು ದ್ವಿಚಕ್ರ ವಾಹನ, 6 ಬ್ಯಾಂಕ್ ಅಕೌಂಟ್‌ಗಳಿಗೆ ಸೇರಿದ 15 ಕ್ರೆಡಿಟ್/ಡೆಬಿಟ್ ಕಾರ್ಡ್, ಚೆಕ್ ಬುಕ್‌ಗಳು, 11 ವಿವಿಧ ಮಾದರಿಯ, ವಿವಿಧ ಕಂಪನಿಯ ಕೈ ಗಡಿಯಾರಗಳು, 2 ನಕಲಿ ಚಿನ್ನದ ಬ್ರಾಸ್‌ಲೆಟ್, 1 ಚೈನು, 2 ಉಂಗುರಗಳು, 2 ಪೆಂಡೆಂಟ್‌ಗಳು ಹಾಗೂ ಬೇರೆ ಬೇರೆ ಕಂಪನಿಯ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿದ್ಯಾರಣ್ಯಪುರ ಠಾಣಾ ಪೊಲೀಸರು ತಿಳಿಸಿದ್ದಾರೆ.
ಪ್ರತ್ಯೇಕ ಪ್ರಕರಣ- ಮಹಿಳೆಗೆ ವಂಚನೆ: ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ಧಾರವಾಡದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿದ ಅಪರಿಚಿತರು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಆರೋಪಿಗಳು ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಲಾಭ ಪಡೆಯಬಹುದು ಎಂದು ನಂಬಿಸಿದ್ದಾರೆ. ನಿಮ್ಮ ಹಣವನ್ನು ನಾವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಕೊಡುತ್ತೇವೆ ಎಂದು ನನ್ನ ಬ್ಯಾಂಕ್ ಖಾತೆಯಿಂದ 23.58 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ. ಆ ಬಳಿಕ ಮೋಸ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಾಯಕಿ ಪಾತ್ರದ ಅವಕಾಶ ಕೊಡಿಸುವುದಾಗಿ ವಂಚನೆ ಆರೋಪ: ಸಹಾಯಕ ನಟನ ವಿರುದ್ಧ ಪ್ರಕರಣ ದಾಖಲು