ಗಂಗಾವತಿ(ಕೊಪ್ಪಳ): ಶ್ರೀಲಂಕಾದ ಕೊಲಂಬೊ ಸಮೀಪದ ನೂವರಿಲಿಯಾಯಲ್ಲಿ ನೂತನವಾಗಿ ಪುನರ್ ಜೀರ್ಣೋದ್ಧಾರ ಮಾಡಲಾಗಿರುವ ಸೀತಾದೇವಿ ದೇಗುಲಕ್ಕೆ, ತಾಲೂಕಿನ ಅಂಜನಾದ್ರಿ ದೇಗುಲದಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸಿ ಇಲ್ಲಿಂದ ತುಂಗಭದ್ರಾ ಜಲ, ಸೀರೆ, ಮಂಗಳ ದ್ರವ್ಯ, ಮತ್ತು ಮೃತ್ತಿಕೆ (ಮಣ್ಣು) ಸಮರ್ಪಿಸಲು ತೆಗೆದುಕೊಂಡು ಹೋಗಲಾಯಿತು. ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ನೇತೃತ್ವದಲ್ಲಿ ನೂರಾರು ಶಿಷ್ಯಂದಿರು ಕಿಷ್ಕಿಂಧೆಯಿಂದ ತೆಗೆದುಕೊಂಡು ಹೋದ ಅಮೂಲ್ಯ ವಸ್ತುಗಳೊಂದಿಗೆ ಮೇ 19ರಂದು ಶ್ರೀಲಂಕಾಕ್ಕೆ ತೆರಳಿ ಅಲ್ಲಿ ಪುನರ್ ಲೋಕಾರ್ಪಣೆಗೊಳ್ಳಲಿರುವ ಸೀತಾ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಈ ಕುರಿತು ಆರ್ಟ್ ಆಫ್ ಲಿವಿಂಗ್ ನ ಟ್ರಸ್ಟಿ ಸಂತೋಷ್ ಕೆಲೋಜಿ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠಾಪನೆಯಾದ ಬಳಿಕ ಶ್ರೀಲಂಕಾದಲ್ಲಿರುವ ಪುರಾತನ ಕಾಲದ ಸೀತಾಮಾತೆಯ ದೇಗುಲ ಪುನರ್ ಲೋಕಾರ್ಪಣೆಗೊಳ್ಳಲಿದೆ. ಇದಕ್ಕಾಗಿ ಅಯೋಧ್ಯೆ, ನೇಪಾಳ ಮತ್ತು ಕಿಷ್ಕಿಂಧಾ ಅಂಜನಾದ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಆಂಜನೇಯ ಸ್ವಾಮಿಯ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಖಂಡ ಹಿಂದೂ ರಾಷ್ಟ್ರ ನಿರ್ಮಾಣ, ಹಿಂದೂ ಧರ್ಮದ ಪುನರುತ್ಥಾನ, ದೇಶದ ಸಮಗ್ರ ಅಭಿವೃದ್ಧಿ, ಕಾಲಕಾಲಕ್ಕೆ ಸಮೃದ್ಧ ಮಳೆ-ಬೆಳೆಗೆ ಪ್ರಾರ್ಥಿಸಲಾಗಿದೆ ಎಂದರು.
ಈ ಮೂರು ದೇಗುಲಗಲ್ಲಿ ವಿಶೇಷ ಸಂಕಲ್ಪ ಪೂಜೆ ಸಲ್ಲಿಸಿ ಆಯಾ ದೇಗುಲಗಳಿಂದ ವಿಶೇಷ ಮಂಗಳ ದ್ರವ್ಯಗಳನ್ನು ತೆಗೆದುಕೊಂಡು ಶ್ರೀಲಂಕಾದ ಸೀತಾಮಾತೆಯ ದೇಗುಲಕ್ಕೆ ತೆರಳಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ ರವಿಶಂಕರ್ ಅವರ ನೇತೃತ್ವದಲ್ಲಿ ಮೇ 19ಕ್ಕೆ ಸಂಸ್ಥೆಯ ಪ್ರಮುಖರು ಶ್ರೀಲಂಕಾಕ್ಕೆ ಹೋಗಲಿದ್ದೇವೆ. ಮೇ 20ರಂದು ಸೀತಾಮಾತೆಯ ದೇಗುಲದಲ್ಲಿ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ಮಹಾಸಂಕಲ್ಪ ಮಾಡಿ, ಅಭಿಷೇಕ ನೆರವೇರಿಸಲಾಗುವುದು. ಬಳಿಕ ಸತ್ಸಂಗ, ಭಜನೆಯಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಚಿಕ್ಕರಾಂಪೂರದಲ್ಲಿರುವ ಅಂಜನಾದ್ರಿ ದೇಗುಲದಲ್ಲಿ ಆರ್ಟ್ ಆಫ್ ಲಿವಿಂಗ್ ನ ಟ್ರಸ್ಟಿಗಳಾದ ಸಂತೋಷ್ ಕೆಲೋಜಿ ಹಾಗೂ ಹೊಸಪೇಟೆಯ ಸಂತೋಷ್ ಶ್ರೀನಿವಾಸಲು ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಕಲ್ಪ ಮಾಡಲಾಯಿತು.
ಇದನ್ನೂ ಓದಿ: ರಾಯರ ಮೂಲ ಬೃಂದಾವನಕ್ಕೆ ಪುಣ್ಯ ಗಂಧಲೇಪನ - chandana utsava